ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆಯಲ್ಲಿ ಸ್ಥಾಪಕ ದಿನಾಚರಣೆ

0

ನೆಲ್ಯಾಡಿ: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯಲ್ಲಿ ಸೆ.2ರಂದು ಸಂಘದ ಸ್ಥಾಪಕ ದಿನಾಚರಣೆ ಆಚರಿಸಲಾಯಿತು.


ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನರವರು ದೀಪ ಬೆಳಗಿಸಿದರು. ಬಳಿಕ ಮಾತನಾಡಿದ ಅವರು, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ 2009ರ ಸೆ.9ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಜಗನ್ನಾಥ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಆರಂಭಗೊಂಡಿತ್ತು. ಇಡ್ಯಡ್ಕ ಮೋಹನ ಗೌಡರ ಸಾರಥ್ಯದಲ್ಲಿ 20 ಮಂದಿ ಪ್ರವರ್ತಕರ ತಂಡ, ಕುರುಂಜಿ ವೆಂಕಟರಮಣ ಗೌಡ, ಗುಂಡ್ಯ ಅಣ್ಣಯ್ಯ ಗೌಡ, ಕೆಮ್ಮಾರ ಬಾಲಕೃಷ್ಣ ಗೌಡ, ಸಿ.ಪಿ.ಜಯರಾಮ ಗೌಡ ಮುಂತಾದ ಹಿರಿಯರ ಮಾರ್ಗದರ್ಶನದಲ್ಲಿ ಸಂಘ ಆರಂಭಗೊಂಡಿತ್ತು. ಈಗ ಸಂಘವು ಹೆಮ್ಮರವಾಗಿ ಬೆಳೆಯುತ್ತಿದ್ದು 9 ಶಾಖೆಗಳನ್ನು ಹೊಂದಿದ್ದು 6300ಕ್ಕೂ ಹೆಚ್ಚು ಸದಸ್ಯರಿದ್ದಾರೆ. 3.91 ಕೋಟಿ ಪಾಲು ಬಂಡವಾಳ ಹೊಂದಿದೆ. 2023-24ನೇ ಸಾಲಿನಲ್ಲಿ ರೂ.400 ಕೋಟಿಗೂ ಹೆಚ್ಚು ವ್ಯವಹಾರ ಮಾಡಿ, ರೂ.1,05ಕೋಟಿಗೂ ಹೆಚ್ಚು ನಿವ್ವಳ ಲಾಭಗಳಿಸಿದೆ ಎಂದರು.


ಸಂಘದ ಮಾಜಿ ನಿರ್ದೇಶಕ, ಸಲಹಾ ಸಮಿತಿ ಸದಸ್ಯರೂ ಆದ ನಾಗೇಶ್ ನಳಿಯಾರು, ಸಲಹಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೆರ್ನಡ್ಕರವರು ಮಾತನಾಡಿ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಪ್ರಿತಾರವಿಚಂದ್ರ, ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಜಿನ್ನಪ್ಪ ಗೌಡ ಪೊಸೊಳಿಗೆ, ಸುರೇಶ್ ಪಡಿಪಂಡ, ಸುಲತಾಮೋಹನಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ವಿನೋದ್‌ರಾಜ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಯಂತ್‌ಕುಮಾರ್, ಅಜಿತ್‌ಕುಮಾರ್, ಪಿಗ್ಮಿ ಸಂಗ್ರಾಹಕ ಶಿವಪ್ರಸಾದ್ ಸಹಕರಿಸಿದರು.

LEAVE A REPLY

Please enter your comment!
Please enter your name here