@ ಸಿಶೇ ಕಜೆಮಾರ್
ಪುತ್ತೂರು: ಪ್ರತಿಯೊಬ್ಬರ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೇಕಾದ ತರಬೇತಿ ನೀಡಿ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕಾದ ಜವಬ್ದಾರಿ ಮಾತ್ರ ನಮ್ಮ ಮೇಲಿದೆ. ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬ ಹೆತ್ತವರು ಮಾಡಬೇಕಾದ ಅಗತ್ಯತೆ ಇದೆ.ಗ್ರಾಮೀಣ ಭಾಗದಲ್ಲಿ ಇಂದು ಅದೆಷ್ಟೋ ಪ್ರತಿಭೆಗಳು ಅವಕಾಶ, ಪ್ರೋತ್ಸಾಹಗಳಿಲ್ಲದೆ ಎಲೆಮರೆಯ ಕಾಯಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹದೊಂದಿಗೆ ಅವಕಾಶ ನೀಡಬೇಕಾಗಿದೆ. ಇಂತಹ ಹಲವು ಗ್ರಾಮೀಣ ಪ್ರತಿಭೆಗಳಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಹಿತ್ಲುಮೂಲೆಯ ಅನ್ನಪೂರ್ಣ ರೈಯವರು ಒಬ್ಬರಾಗಿದ್ದಾರೆ. ಕಬಡ್ಡಿ ಕ್ರೀಡೆಯಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಈ ಪ್ರತಿಭೆಗೆ ನಮ್ಮೆಲ್ಲರ ಹಾರೈಕೆ ಬೇಕಾಗಿದೆ.
ಪ್ರಶಸ್ತಿ ಪುರಸ್ಕೃತ ಕೃಷಿಕ ಕರ್ನೂರು ಹಿತ್ಲುಮೂಲೆ ಶಶಿಕುಮಾರ್ ರೈ( ಸತೀಶ್ ರೈ) ಮತ್ತು ಜಯಂತಿ ರೈಯವರ ಪುತ್ರಿಯಾಗಿರುವ ಅನ್ನಪೂರ್ಣ ರೈಯವರಿಗೆ ಚಿಕ್ಕಂದಿನಲ್ಲಿಯೇ ಕಬಡ್ಡಿ ಎಂದರೆ ಅಚ್ಚುಮೆಚ್ಚಿನ ಆಟವಾಗಿತ್ತು. ನೆಟ್ಟಣಿಗೆ ಮುಡ್ನೂರು ಹಿ.ಪ್ರಾ.ಶಾಲೆಯಲ್ಲಿ 6 ನೇ ತರಗತಿಯಲ್ಲಿರುವಾಗ ಕಬಡ್ಡಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಶೀರ್ಲಾಲು ಹಾಗೂ ಮಾರ್ಗದರ್ಶಕ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಕಬಡ್ಡಿ ತರಬೇತು ಪಡೆಯುತ್ತಾರೆ. 6 ನೇ ತರಗತಿಯಲ್ಲಿರುವಾಗ ಬೆಟ್ಟಂಪಾಡಿಯಲ್ಲಿ ನಡೆದ ವಲಯ ಮಟ್ಟದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಾರೆ.7 ನೇ ತರಗತಿಯಲ್ಲಿರುವಾಗ ಭಕ್ತಕೋಡಿಯಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದ ಇವರು ಮುಂದಿನ ವ್ಯಾಸಂಗಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸೇರುತ್ತಾರೆ. 8 ನೇ ತರಗತಿಯಲ್ಲಿರುವಾಗ ಶಿಕ್ಷಕರಾದ ದಾಮೋದರ, ಹರಿನಾಕ್ಷಿ ಮತ್ತು ಮನೋಹರ ಇವರ ನೇತೃತ್ವದಲ್ಲಿ ವಿದ್ಯಾಭಾರತಿಯವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಬಿಹಾರದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗುತ್ತಾರೆ.
ಮುಂದಿನ ವ್ಯಾಸಂಗಕ್ಕೆ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಸೇರಿದ ಅನ್ನಪೂರ್ಣ ರೈಯವರು ಪ್ರಥಮ ಪಿಯುಸಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಜ್ಯೋತಿ ಕುಮಾರಿ ಹಾಗೂ ಯತೀಶ್ ಹಾಗೂ ವಿದ್ಯಾಭಾರತೀ ವತಿಯಿಂದ ನಡೆದ ಲಕ್ಷ್ಮಣ ಇವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬಿಜಾಪುರದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗುತ್ತಾರೆ. ಸಾರ್ವಜನಿಕ ಇಲಾಖೆ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಆಳ್ವಾಸ್ ತಂಡಕ್ಕೆ ಆಯ್ಕೆಯಾಗಿ ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭಾರತೀ ವತಿಯಿಂದ ನಡೆದ ಜಿಲ್ಲಾ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಸೆಷ್ಟೆಂಬರ್ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನ್ನಪೂರ್ಣ ರೈ ನಾಯಕತ್ವದ ತಂಡ ಗೆಲುವನ್ನು ಕಾಣಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಅನ್ನಪೂರ್ಣ ರೈ ನಾಯಕತ್ವದ ತಂಡ
ತನ್ನ 5 ನೇ ತರಗತಿಯಿಂದಲೇ ಕಬಡ್ಡಿ ಆಟದಲ್ಲಿ ಸತತ ಗೆಲುವನ್ನು ಕಾಣುತ್ತಿರುವ ಅನ್ನಪೂರ್ಣ ರೈ ಕರ್ನೂರುರವರು ತಾಲೂಕು, ಜಿಲ್ಲೆ, ರಾಜ್ಯ ಮಟ್ಟವನ್ನು ದಾಟಿಕೊಂಡು ಇದೀಗ ರಾಷ್ಟ್ರಮಟ್ಟಕ್ಕೆ ಬಂದು ನಿಂತಿದ್ದಾರೆ. ತನ್ನ ನಾಯಕತ್ವದ ಮೂಲಕ ತಂಡವನ್ನು ಪ್ರತಿ ಹಂತದಲ್ಲೂ ಗೆಲುವಿನ ಕಡೆಗೆ ಕೊಂಡೊಯ್ಯುವ ಅನ್ನಪೂರ್ಣ ರೈಯವರ ಚಾಕಚಕ್ಯತೆ ಇಲ್ಲಿ ಎದ್ದು ಕಾಣುತ್ತಿದೆ. 8 ನೇ ತರಗತಿಯಲ್ಲೇ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿ ಗೆಲುವನ್ನು ಸಾಧಿಸಿದ ಇವರು ಮುಂದಿನ ದಿನಗಳಲ್ಲಿ ಒಬ್ಬ ದೊಡ್ಡ ಕಬಡ್ಡಿ ಆಟಗಾರ್ತಿಯಾಗುವ ಎಲ್ಲಾ ಲಕ್ಷ್ಮಣಗಳು ಇವರಲ್ಲಿದೆ. ಆದರೆ ಗ್ರಾಮೀಣ ಪ್ರತಿಭೆಯಾಗಿರುವ ಕಾರಣ ಇವರಿಗೆ ಕ್ರೀಡಾಪ್ರೇಮಿಗಳ ಪ್ರೋತ್ಸಾಹ ಬೇಕಾಗಿದೆ. ಸೆಪ್ಟೆಂಬರ್ನಲ್ಲಿ ರಾಜಸ್ಥಾನನಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿ ಆಟದಲ್ಲಿ ಅನ್ನಪೂರ್ಣ ರೈ ನಾಯಕತ್ವದ ತಂಡ ಗೆಲುವನ್ನು ಸಾಧಿಸುವ ಮೂಲಕ ಪುತ್ತೂರಿನ ಹಿರಿಮೆ ರಾಷ್ಟ್ರಮಟ್ಟದಲ್ಲಿ ಪಸರಿಸಲಿ.