ಶ್ರೀ ಕೃಷ್ಣನ ಜೀವನವೇ ನಮಗೆ ದಾರಿದೀಪ : ಸಂಜೀವ ಪೂಜಾರಿ ಕೂರೇಲು
ಪುತ್ತೂರು: ನಮಗೆಲ್ಲರಿಗೂ ಅತ್ಯಂತ ಪ್ರಿಯವಾದ ದೇವರೆಂದರೆ ಅದು ಶ್ರೀ ಕೃಷ್ಣ ಪರಮಾತ್ಮನಾಗಿದ್ದಾನೆ. ಧರ್ಮ ಎಂದರೇನು ಎಂಬುದನ್ನು ಭೂಲೋಕಕ್ಕೆ ಬೋಧಿಸಿದ ಶ್ರೀಕೃಷ್ಣನ ಜೀವನವೇ ನಮಗೆ ದಾರಿದೀಪ. ನಾವೆಲ್ಲರೂ ಶ್ರೀಕೃಷ್ಣನ ಧರ್ಮದ ನೆರಳಲ್ಲಿ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡುವ ಮೂಲಕ ಒಳ್ಳೆಯ ವ್ಯಕ್ತಿಗಳಾಗಿ ಬದುಕುವ ಎಂದು ಶ್ರೀ ಬ್ರಹ್ಮಬೈದೆರ್ಕಳ ಗರಡಿ ರಾಮಜಾಲು ಇದರ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಹೇಳಿದರು.
ಅವರು ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇವರ ಜಂಟಿ ಆಶ್ರಯದಲ್ಲಿ ಸೆ.6ರಂದು ರಾಮಜಾಲು ಗರಡಿಯ ವಠಾರದಲ್ಲಿ ನಡೆದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪರ್ಪುಂಜದ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಒಂದು ಉತ್ತಮ ಸಂಘಟನೆಯಾಗಿದ್ದು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು, ಈ ಸಂಘಟನೆಯಿಂದ ಧರ್ಮ ಉಳಿಸುವ ಕಾರ್ಯ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಮಾತನಾಡಿ, ಶ್ರೀ ಕೃಷ್ಣ ಸಾರಿದ ಜೀವನ ಸಂದೇಶವನ್ನು ಅರ್ಥಮಾಡಿಕೊಂಡರೆ ನಮಗೆ ಧರ್ಮದ ಬಗ್ಗೆ ಅರಿವು ಮೂಡುತ್ತದೆ. ಸಂಘಟನೆಗಳು ನಮ್ಮ ಸನಾತನ ಆಚರಣೆಯ ಧರ್ಮವನ್ನು ಉಳಿಸುವ ಮತ್ತು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ನೇಹ ಯುವಕ ಮಂಡಲ, ಮಹಿಳಾ ಮಂಡಲ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿ ಶುಭ ಹಾರೈಸಿದರು. ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳರವರು ಶ್ರೀ ಕೃಷ್ಣನ ಬಾಲಲೀಲೆಗಳು ಹಾಗೂ ಆತ ಜಗತ್ತಿಗೆ ಸಾರಿದ ಧರ್ಮದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಸುಂದರಿ, ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ರೈ, ಕಾರ್ಯದರ್ಶಿ ಪವಿತ್ರ ಉಪಸ್ಥಿತರಿದ್ದರು. ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಸುರೇಶ್ ಪೂಜಾರಿ ವಂದಿಸಿದರು. ಪ್ರಮೀಳಾ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಆಟೋಟ ಸ್ಪರ್ಧೆಗಳು
ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗೆ, ಮಹಿಳೆಯರಿಗೆ, ಪುಟಾಣಿಗಳಿಗೆ, ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಅಂಗಡಿವಾಡಿ ಪುಟಾಣಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಶ್ರೀ ಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಿತು.