ಅಂಬಿಕಾ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ

0

ಪದವಿಯೊಂದಿಗೆ ಮೌಲ್ಯವರ್ಧಿತ ಶಿಕ್ಷಣವನ್ನೂ ಪಡೆಯಬೇಕು : ಡಾ.ವಿಜಯ ಸರಸ್ವತಿ

ಪುತ್ತೂರು: ಶಿಕ್ಷಣವೆಂದರೆ ಕೇವಲ ಪದವಿಯನ್ನು ಗಳಿಸುವುದಷ್ಟೇ ಅಲ್ಲ. ಬದಲಾಗಿ ಗಳಿಸುವ ಪದವಿಯೊಂದಿಗೆ ಮೌಲ್ಯವರ್ಧಿತ ರೂಪದಲ್ಲಿ ಯಾವಯಾವ ಸಂಗತಿಗಳನ್ನು ಕಲಿತುಕೊಳ್ಳುತ್ತೇವೆ ಎಂಬುದು ಮುಖ್ಯ. ನಾವು ಶಿಕ್ಷಣದ ಕಾಲಘಟ್ಟದಲ್ಲಿ ಬೆಳೆಸಿಕೊಳ್ಳುವ ಕೌಶಲಗಳು ಈ ನೆಲೆಯಲ್ಲಿ ಅತ್ಯಂತ ಪ್ರಮುಖ ಎನ್ನಿಸುತ್ತವೆ ಎಂದು ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಡೀನ್ ಹಾಗೂ ಎಂ.ಕಾಂ ವಿಭಾಗದ ಸಂಯೋಜಕಿ ಡಾ.ವಿಜಯ ಸರಸ್ವತಿ ಬಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ 2023-24ನೇ ಸಾಲಿನ ವಾಣಿಜ್ಯ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಸೆ.8ರಂದು ಮಾತನಾಡಿದರು.

ಪದವಿ ಶಿಕ್ಷಣವನ್ನು ಪಡೆಯುತ್ತಿರುವ ಹೊತ್ತಿಗೆ ತಮ್ಮ ತಮ್ಮ ಅಧ್ಯಯನ ವಿಭಾಗಗಳಿಂದ ದೊರಕಬಹುದಾದ ಅಷ್ಟೂ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಾಣಿಜ್ಯ ಕ್ಷೇತ್ರ ಇಂದು ಅಸಂಖ್ಯ ಉದ್ಯೋಗಾವಕಾಶಗಳಿಗೆ ತನ್ನನ್ನು ತಾನು ತೆರೆದುಕೊಂಡಿದೆ. ನಿರೀಕ್ಷೆಗೂ ಮೀರಿದ ವೇತನವನ್ನು ವಾಣಿಜ್ಯ ವಿದ್ಯಾರ್ಥಿಗಳು ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ. ಆದರೆ ಅಂತಹ ಸಫಲತೆ ಸಾಕಾರವಾಗುವುದರ ಹಿಂದೆ ಸತತ ಪರಿಶ್ರಮ ಅಗತ್ಯ ಎಂದರು.

ದೂರದೃಷ್ಟಿ, ನೂತನ ಯೋಚನೆಯಂತಹ ಸಂಗತಿಗಳು ನಮ್ಮನ್ನು ಇತರರಿಂದ ಭಿನ್ನವಾಗಿಸುತ್ತವೆ. ಆದ್ದರಿಂದ ನಮ್ಮ ಕ್ಷೇತ್ರದಲ್ಲಿ ಅನಾವರಣಗೊಳಿಸಬಹುದಾದ ನವೀನ ವಿಚಾರಗಳ ಬಗೆಗೆ ನಮ್ಮ ಯೋಚನಾ ಲಹರಿಯನ್ನು ವಿಸ್ತರಿಸಬೇಕು. ಇಂದು ನಾವು ಸಮಾಜದಲ್ಲಿ ಕಾಣುತ್ತಿರುವ ಅನೇಕ ವಾಣಿಜ್ಯ ಸಂಬಂಧಿ ಬೆಳವಣಿಗೆಗಳು ಅಂತಹ ಹೊಸ ಆಲೋಚನೆಗಳ ಫಲಶ್ರುತಿಗಳೇ ಆಗಿವೆ ಎಂದರಲ್ಲದೆ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಒಡ್ಡಿಸಿಕೊಳ್ಳಬೇಕು. ಆಗ ಸ್ಪಷ್ಟ ಬದಲಾವಣೆ ನಮ್ಮ ಬದುಕಿನಲ್ಲಿ ಗೋಚರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ನಮ್ಮ ಶೈಕ್ಷಣಿಕ ವ್ಯವಸ್ಥೆ ಪಠ್ಯ ಹಾಗೂ ಪಠ್ಯೇತರ ಎಂಬ ಎರಡೂ ವಿಚಾರಗಳನ್ನು ಒಳಗೊಂಡಿದೆ. ಅನೇಕ ವಿದ್ಯಾರ್ಥಿಗಳು ಪಠ್ಯೇತರ ವಿಚಾರವನ್ನೇ ಲಕ್ಷಿಸಿ ಶಿಕ್ಷಣ ಸಂಸ್ಥೆಗಳಿಗೆ ಅಡಿಯಿಡುವುದೂ ಇದೆ. ತಮ್ಮ ಹವ್ಯಾಸವನ್ನೇ ವೃತ್ತಿಯಾಗಿ ಬದಲಾಯಿಸಿಕೊಂಡವರೂ ಹಲವರಿದ್ದಾರೆ. ಆದ್ದರಿಂದ ಪಠ್ಯೇತರ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದು ನುಡಿದರು.

ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಲೇಖಾ ಸ್ವಾಗತಿಸಿ, ವಿದ್ಯಾರ್ಥಿ ಶ್ರೀರಾಮ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ಪ್ರಸ್ತಾವನೆಗೈದು, ವಿದ್ಯಾರ್ಥಿನಿ ಪ್ರಿಯಾಲ್ ಆಳ್ವ ವಂದಿಸಿದರು. ವಿದ್ಯಾರ್ಥಿನಿ ಚೈತನ್ಯಾ ಸಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here