*ಚಿತ್ರ ವೀಕ್ಷಿಸಿ ಕೊಂಕಣಿ ಭಾಷೆಯ ಅಸ್ಮಿತೆಯನ್ನು ಉಳಿಸೋಣ-ವಂ|ಲಾರೆನ್ಸ್ ಮಸ್ಕರೇನ್ಹಸ್
*ಕೊಂಕಣಿ ಭಾಷೆಯ ಆಸ್ತಿತ್ವ ಪ್ರದರ್ಶಿಸಿದಾಗ ಭಾಷೆಯ ಬೆಳವಣಿಗೆ ಸಾಧ್ಯ-ಪ್ರೊ|ಝೇವಿಯರ್
*ಚಿತ್ರ ವೀಕ್ಷಿಸಿ ಪ್ರತಿ ಶೋ ಹೌಸ್ಫುಲ್ ಆಗಲಿ-ಜೆರೋಮಿಯಸ್ ಪಾಯಿಸ್
*ಕೊಂಕಣಿ ಭಾಷೆಯು ಅದರ ಅಸ್ಮಿತೆಯನ್ನು ಕಳೆದುಕೊಂಡಿಲ್ಲ-ಡೆನ್ನಿಸ್ ಮೊಂತೇರೊ
ಪುತ್ತೂರು: ಕೊಂಕಣಿ ನಮ್ಮ ಭಾಷೆ. ಕೊಂಕಣಿ ಭಾಷೆಯು ನಮ್ಮ ಪೂರ್ವಜರಿಂದ ನಮಗೆ ಬಳುವಳಿಯಾಗಿ ಸಿಕ್ಕಂತಹ ಭಾಷೆಯಾಗಿದೆ. ಕೊಂಕಣಿ ಭಾಷೆಯಲ್ಲಿ ಸಾಕಷ್ಟು ಸಿನೆಮಾಗಳಿಲ್ಲ. ಆದ್ದರಿಂದ ಹಲವಾರು ವರ್ಷಗಳ ಬಳಿಕ ಬಂದಂತಹ ಈ ಆಸ್ಮಿತಾಯ್ ಕೊಂಕಣಿ ಸಿನೆಮಾವನ್ನು ವೀಕ್ಷಿಸಿ ಕೊಂಕಣಿ ಭಾಷೆಯ ಆಸ್ಮಿತೆಯನ್ನು ಉಳಿಸೋಣ ಎಂದು ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಹೇಳಿದರು.
ಹದಿನೈದು ವರ್ಷಗಳ ಸತತ ಪ್ರಯತ್ನ, ಕೊಂಕಣಿ ಐಡೆಂಟಿಟಿಯ ಹುಡುಕಾಟದಲ್ಲಿ(ಇನ್ ಸರ್ಚ್ ಆಫ್ ಕೊಂಕಣಿ ಐಡೆಂಟಿಟಿ) ಎಂಬ ಟ್ಯಾಗ್ಲೈನ್ನೊಂದಿಗೆ ಸೆ.15ರಂದು ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿನ ಭಾರತ್ ಸಿನೆಮಾಸ್ ಥಿಯೇಟರ್ಗಳಲ್ಲಿ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ಪ್ರಥಮ ಬಾರಿಗೆ ನಿರ್ಮಾಣಗೊಂಡು ಅದ್ದೂರಿಯಾಗಿ ತೆರೆ ಕಾಣಲಿರುವ ‘ಆಸ್ಮಿತಾಯ್’ ಮನೋರಂಜನಾತ್ಮಕ ಕೊಂಕಣಿ ಸಿನೆಮಾದ ಪ್ರೀಮಿಯರ್ ಶೋ ಸೆ.10ರಂದು ಪುತ್ತೂರಿನ ಜಿ.ಎಲ್ ವನ್ ಮಾಲ್ನಲ್ಲಿನ ಭಾರತ್ ಸಿನೆಮಾಸ್ನಲ್ಲಿ ಜರಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಪ್ರಚಾರ ನಡೆಸಿದ್ದಿದೆ. ಪ್ರತಿಯೊಬ್ಬ ಕೊಂಕಣಿ ಭಾಷಿಗನು ಈ ಚಿತ್ರವನ್ನು ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು. ಈ ಚಿತ್ರದ ಹಿಂದೆ ಹಲವಾರು ಮಂದಿಯ ಪ್ರಯತ್ನವಿದ್ದು ಚಿತ್ರವು ಯಶಸ್ವಿ ಕಾಣಬೇಕು ಎನ್ನುವುದು ನಮ್ಮ ಹಾರೈಕೆಯಾಗಿದ್ದು ಆ ಮೂಲಕ ಕೊಂಕಣಿ ಭಾಷೆಯ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಕೊಂಕಣಿ ಸಮುದಾಯದ ಆಸ್ತಿತ್ವ ಪ್ರದರ್ಶಿಸಿದಾಗ ಕೊಂಕಣಿ ಭಾಷೆಯ ಬೆಳವಣಿಗೆ ಸಾಧ್ಯ-ಪ್ರೊ|ಝೇವಿಯರ್:
ಸರಕಾರಿ ಪ್ರಥಮ ದರ್ಜೆ ಮಹಿಳೆಯರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜರವರು ಡೋಲು(ಗುಮ್ಟಾ) ಬಾರಿಸುವ ಮೂಲಕ ಪ್ರೀಮಿಯರ್ ಶೋವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ನಾವು ಚಿಕ್ಕದಿರುವಾಗ ಸಾರ್ವಜನಿಕವಾಗಿ ಕೊಂಕಣಿ ಮಾತನಾಡುವಾಗ ಇತರರು ‘ಕಸಲೆ-ಬಿಸಲೆ’ ಎಂದು ಹೇಳುವುದಿದೆ. ಯಾಕೆಂದರೆ ನಮ್ಮ ಕೊಂಕಣಿ ಭಾಷೆಯು ಇತರರಿಗೆ ಏನೂ ಅರ್ಥವಾಗುತ್ತಿರಲಿಲ್ಲ. ನಮ್ಮ ಕೊಂಕಣಿ ಸಮುದಾಯದ ಆಸ್ತಿತ್ವ ಪ್ರದರ್ಶಿಸಲು ನಾವು ಹೆಮ್ಮೆ ಪಟ್ಟಾಗ ಮಾತ್ರ ನಮ್ಮ ಕೊಂಕಣಿ ಭಾಷೆಯ ಬೆಳವಣಿಗೆ ಸಾಧ್ಯ. ಇಂದಿನ ದಿನಗಳಲ್ಲಿ ಪುಸ್ತಕ ಓದುವವರು ಬಹಳ ಕಡಿಮೆ, ದೃಶ್ಯ ಮಾಧ್ಯಮದಲ್ಲಿಯೇ ಮಗ್ನರಾಗಿದ್ದಾರೆ. ಹಲವಾರು ವರ್ಷಗಳ ಬಳಿಕ ಬಂದಂತಹ ಈ ಕೊಂಕಣಿ ಸಿನೆಮಾವನ್ನು ಎಲ್ಲರೂ ವೀಕ್ಷಿಸಿ ಸಿನೆಮಾ ತಂಡಕ್ಕೆ ಹೆಚ್ಚಿನ ಬಲವನ್ನು ನಾವು ನೀಡಬೇಕಾಗಿದೆ ಎಂದರು.
ಚಿತ್ರ ವೀಕ್ಷಿಸಿ ಪ್ರತಿ ಶೋ ಹೌಸ್ಫುಲ್ ಆಗಲಿ-ಜೆರೋಮಿಯಸ್ ಪಾಯಿಸ್:
ಅತಿಥಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್ರವರು ಮಾತನಾಡಿ, ಆಸ್ಮಿತಾಯ್ ತಂಡದ ಎಲ್ಲರ ಪ್ರಯತ್ನದಿಂದ ಈ ಕೊಂಕಣಿ ಸಿನೆಮಾ ಅದ್ಭುತವಾಗಿ ಮೂಡಿ ಬಂದಿದೆ. ಹಲವಾರು ವರ್ಷಗಳ ಬಳಿಕ ಬಂದಂತಹ ಈ ಸಿನೆಮಾವನ್ನು ಎಲ್ಲರೂ ವೀಕ್ಷಿಸುವ ಮೂಲಕ ಪ್ರತಿ ಶೋ ಹೌಸ್ಫುಲ್ ಹೊಂದುವ ಮೂಲಕ ಚಿತ್ರತಂಡಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಂಕಣಿ ಸಿನೆಮಾಗಳನ್ನು ಮಾಡುವಂತೆ ಪ್ರೋತ್ಸಾಹ ನೀಡೋಣ ಎಂದರು.
ಕೊಂಕಣಿ ಭಾಷೆಯು ಅದರ ಅಸ್ಮಿತೆಯನ್ನು ಕಳೆದುಕೊಂಡಿಲ್ಲ-ಡೆನ್ನಿಸ್ ಮೊಂತೇರೊ:
ಆಸ್ಮಿತಾಯ್ ಚಿತ್ರದ ಕಲಾವಿದ ಡೆನ್ನಿಸ್ ಮೊಂತೇರೊ ಮಾತನಾಡಿ, ಮಾಂಡ್ ಸೊಭಾಣ್ನ ಎರಿಕ್ ಓಜಾರಿಯೋರವರ ಮೂಲ ಕಥೆಗೆ ಜೋಯೆಲ್ ಪಿರೇರಾರವರು ಚಿತ್ರಕಥೆ ಹೆಣೆದಿದ್ದಾರೆ. ಮಂಗಳೂರು ಹಾಗೂ ಗೋವಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಉತ್ತಮ ಗುಣಮಟ್ಟದಿಂದ ಮೂಡಿ ಬಂದಿದ್ದು ಎಲ್ಲರಿಗೂ ಮನೋರಂಜನೆಯನ್ನು ನೀಡುವ ಉದ್ಧೇಶ ಹೊಂದಿದೆ. ಕೊಂಕಣಿ ಭಾಷೆ, ಸಂಸ್ಕೃತಿ ಮೇಲೆ ಪೆಟ್ಟು ಬಿದ್ದರೂ ಕೊಂಕಣಿ ಭಾಷೆಯು ಚಳುವಳಿ ಮುಖೇನ ಇಂದಿಗೂ ಕೊಂಕಣಿ ಭಾಷೆಯು ಅದರ ಅಸ್ಮಿತೆಯನ್ನು ಕಳೆದುಕೊಂಡಿಲ್ಲ ಎಂದರು.
ಮಹಾದಾನಿ/ದಾನಿಗಳಿಗೆ ಗೌರವ:
ಚಿತ್ರದ ಮಹಾದಾನಿಗಳಾದ ದರ್ಬೆ ರೊಡ್ರಿಗಸ್ ಚಿಕನ್ಸ್ನ ಲ್ಯಾನ್ಸಿ ರೊಡ್ರಿಗಸ್ ಮತ್ತು ಫ್ಯಾಮಿಲಿ, ಪಿಡಬ್ಲ್ಯೂಡಿ ಇಲಾಖೆಯ ಲಿಂಡ್ಸೆ ಕೊಲಿನ್ ಸಿಕ್ವೇರಾ ಫ್ಯಾಮಿಲಿ ದರ್ಬೆ, ಉದ್ಯಮಿ ರೋಶನ್ ಮಿನೇಜಸ್ ಫ್ಯಾಮಿಲಿ ಬನ್ನೂರು, ಸೈಂಟ್ ಲಾರೆನ್ಸ್ ಸಾ ಮಿಲ್ನ ಸಿಲ್ವೆಸ್ತರ್ ಡಿ’ಸೋಜ, ದಾನಿಗಳಾದ ವಲೇರಿಯನ್ ಡಾಯಸ್ ಎಪಿಎಂಸಿ ರಸ್ತೆ, ರೋಹನ್ ಡಾಯಸ್ ಕಲ್ಲಿಮಾರು, ತೋಮಸ್ ಫೆರ್ನಾಂಡೀಸ್ ಬನ್ನೂರು, ದೀಪಕ್ ಮಿನೇಜಸ್ ದರ್ಬೆ, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ, ವಿಲ್ಸನ್ ತೋರಸ್ ಕುಂಬ್ರ, ಜೆರೋಮಿಯಸ್ ಪಾಸ್ ದರ್ಬೆರವರುಗಳಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.
ಸಹಕರಿಸಿದವರಿಗೆ ಗೌರವ:
ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ಕುರಿತು ಮಾಂಡ್ ಸೊಭಾಣ್ ಸಂಸ್ಥೆಯು ಮಂಗಳೂರು, ಉಡುಪಿಗಳಲ್ಲಿ ಪ್ರಚಾರವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಪುತ್ತೂರಿನಲ್ಲಿ ಮಾಯಿದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರ ಮಾರ್ಗದರ್ಶನದಲ್ಲಿ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಲನ(ಐಸಿವೈಎಂ)ದ ಸದಸ್ಯರು ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಹಕರಿಸಿದ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಡೊನ್ ಬೊಸ್ಕೊ ಕ್ಲಬ್ ಸದಸ್ಯ ರೋಯ್ಸ್ ಪಿಂಟೋ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸದಸ್ಯ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಐಸಿವೈಎಂ ಅಧ್ಯಕ್ಷ ರೋಯ್ಸ್ಟನ್ ರೆಬೆಲ್ಲೋ, ಪ್ರವೀಣ್ ಪ್ರಿಂಟರ್ಸ್ ಮಾಲಕ ಪ್ರವೀಣ್ ಮೊಂತೇರೊ, ಫೊಟೋಗ್ರಾಫಿ ನೀಡಿದ ಕ್ಲಾಸಿಕ್ಲಿಕ್ಸ್ನ ರೋಶನ್ ಡಾಯಸ್, ಸುದ್ದಿ ಪತ್ರಿಕೆ ಮೂಲಕ ಪ್ರಚಾರ ನೀಡಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.
ಮಾಂಡ್ ಸೊಭಾಣ್ ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಫೆರ್ನಾಂಡೀಸ್ ಸ್ವಾಗತಿಸಿ, ಆಸ್ಮಿತಾಯ್ ಚಿತ್ರದ ಕಲಾವಿದ ಆಲ್ವಿನ್ ವೇಗಸ್ ವಂದಿಸಿದರು. ಮಾಂಡ್ ಸೊಭಾಣ್ ಸಂಸ್ಥೆಯ ಕೋಶಾಧಿಕಾರಿ ಎಲ್ರೋನ್ ರೊಡ್ರಿಗಸ್ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸದಸ್ಯ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
ಸೆ.15ರಂದು ತೆರೆಗೆ..
ಹಲವಾರು ವರ್ಷಗಳ ಬಳಿಕ ಕೊಂಕಣಿ ಸಿನಿರಸಿಕರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಕಿವಿಗಿಂಪಾಗಿಸುವ ಹಾಡುಗಳು, ಭಾವನೆಗಳು, ಆಕ್ಷನ್, ಹಾಸ್ಯ ಮತ್ತು ಗಂಭೀರತೆ ಒಳಗೊಂಡ ಸಂಪೂರ್ಣ ಪ್ಯಾಕೇಜ್ವುಳ್ಳ ಕೊಂಕಣಿ ಸಿನೆಮಾ “ಆಸ್ಮಿತಾಯ್” ಇದೇ ಸೆ.15ರಂದು ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿನ ಭಾರತ್ ಸಿನೆಮಾಸ್ ಥಿಯೇಟರ್ಗಳಲ್ಲಿ ಅದ್ದೂರಿಯಾಗಿ ತೆರೆ ಕಾಣಲಿದೆ. ಪ್ರೇಮದ ಮೂಲಕ, ಕೊಂಕಣಿ ಅಸ್ಮಿತೆಯ ಹುಡುಕಾಟದ ಬಗೆಗಿನ ‘ಆಸ್ಮಿತಾಯ್’ ಚಿತ್ರದ ಕಥೆಯನ್ನು ಬರಹಗಾರ ಹಾಗೂ ಹಾಡುಗಾರ ಎರಿಕ್ ಓಜಾರಿಯೊರವರು ಬರೆದಿದ್ದಾರೆ. ಜೋಯೆಲ್ ಪಿರೇರಾರವರು ಚಿತ್ರಕಥೆ ಹೆಣೆದಿರುವುದರೊಂದಿಗೆ ಸಹ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ವಿಲಾಸ್ ರತ್ನಾಕರ್ರವರ ನಿರ್ದೇಶನದಲ್ಲಿ ಚಿತ್ರವು ಉತ್ತಮವಾಗಿ ಮೂಡಿ ಬಂದಿದ್ದು 5೦೦ಕ್ಕೂ ಮಿಕ್ಕಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪುತ್ತೂರಿನ ಕಲಾವಿದ ಪ್ರವೀಣ್ ಪಿಂಟೋರವರಿಗೆ ಗೌರವ..
ಚಿತ್ರದಲ್ಲಿ ಬಣ್ಣ ಹಚ್ಚಿದ ಕಲಾವಿದರ ಪೈಕಿ ಪುತ್ತೂರಿನ ದರ್ಬೆ ನಿವಾಸಿ ಪ್ರವೀಣ್ ಪಿಂಟೋರವರು ಓರ್ವರಾಗಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಪ್ರವೀಣ್ ಪಿಂಟೋರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಅವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.