ಪುತ್ತೂರು: ಉಜಿರೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ವತಿಯಿಂದ ಸೆ.10ರಂದು ನಡೆದ ಯಕ್ಷಭಾರತಿ ಬೆಳ್ತಂಗಡಿ ಇದರ 9ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ ಹಾಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ, ಸಂಘಟಕರಾದ ಪುತ್ತೂರು ಬೊಳುವಾರಿನ ಭಾಸ್ಕರ್ ಬಾರ್ಯ ಅವರನ್ನು ದಂಪತಿ ಸಹಿತ 2ನೇ ವರ್ಷದ ಯಕ್ಷ ಭಾರತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕೊಕ್ಕಡದ ವೈದ್ಯ ಡಾ.ಮೋಹನ್ದಾಸ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಕಾರಂತ, ಸಮಾಜ ಸೇವಕ ಕೇಶವ ಭಟ್ ಅತ್ತಾಜೆ, ಕಲಾವಿದ ಆನಂದ ಶೆಟ್ಟಿ ಗುರುವಾಯನಕೆರೆ ಅವರಿಗೆ ಸೇವಾ ಗೌರವ ಸಮರ್ಪಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಸ್ಕರ ಬಾರ್ಯ ಅವರು ಯಕ್ಷಗಾನ ಕೇವಲ ಮನರಂಜನೆಯಷ್ಟೇ ಅಲ್ಲ, ಅದು ಮನಃಪರಿವರ್ತನೆಯ ಶ್ರೇಷ್ಠ ಕಲೆ. ಮುಂದಿನ ಜನಾಂಗಕ್ಕೆ ಪೌರಾಣಿಕತೆಯನ್ನು ತಿಳಿಸಿಕೊಡಬೇಕಾಗಿದೆ. ಸರಕಾರದಿಂದ ಹಿರಿಯ ಯಕ್ಷಗಾನ ಕಲಾವಿದರನ್ನು ಗುರುತಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಧನಂಜಯ ರಾವ್, ಮೂಡಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಮತ್ತು ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಯಕ್ಷ ಭಾರತಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಟ್ರಸ್ಟಿ ಹರೀಶ್ ರಾವ್ ಮುಂಡ್ರುಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿ, ವಿದ್ಯಾ ಕುಮಾರ್ ಕಾಂಚೋಡು ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವೀರ ಸಮೀರಜಾತ (ಪುರುಷಾಮೃಗ-ದುಶ್ಶಾಸನ ವಧೆ-ಗದಾಯುದ್ಧ) ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಯಕ್ಷಭಾರತಿಯ ೯ನೇ ವಾರ್ಷಿಕೋತ್ಸವವನ್ನು ಅಪರಾಹ್ನ ರೈತಬಂಧು ಆಹಾರೋದ್ಯಮ ಸಂಸ್ಥೆಯ ಶಿವಶಂಕರ ನಾಯಕ್ ಉದ್ಘಾಟಿಸಿ ಶುಭಕೋರಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಧರ್ಮಸ್ಥಳದ ಬಿ.ಭುಜಬಲಿ ಶುಭ ಕೋರಿದರು. ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ಭವ್ಯ ಹೊಳ್ಳ ವಂದಿಸಿದರು.