ಆಲಂಕಾರು: ಜಾಗದ ವಿವಾದ, ಸಹೋದರರ ನಡುವೆ ಜಗಳ-ಪೊಲೀಸರಿಗೆ ದೂರು

0

ಪುತ್ತೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಜಗಳ ನಡೆದು ಪರಸ್ಪರ ಹಲ್ಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿರುವ ಘಟನೆಯೊಂದು ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಕ್ವೆಯಲ್ಲಿ ಸೆ.10ರಂದು ಮಧ್ಯಾಹ್ನ ನಡೆದಿದೆ.


ಕಕ್ವೆ ದಿ.ನೇಮಣ್ಣ ಗೌಡರವರ ಪುತ್ರ ಲೋಕೇಶ (38ವ.)ರವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಅಣ್ಣ ಮೇದಪ್ಪ, ಅವರ ಪತ್ನಿ ರಾಜೀವಿ ಹಾಗೂ ಮಗ ಪ್ರಜ್ವಲ್ ವಿರುದ್ಧ ಹಲ್ಲೆ ಆರೋಪ ಹೊರಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಲೋಕೇಶ ಅವರ ಅಣ್ಣ ಮೇದಪ್ಪ(56ವ.)ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ತಮ್ಮ ಲೋಕೇಶನು ಇನ್ನಿಬ್ಬರು ತಮ್ಮಂದಿರಾದ ವಿಶ್ವನಾಥ ಹಾಗೂ ಪೂವಪ್ಪ ಅವರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡು ಕಡೆಯವರ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲೋಕೇಶ್ ದೂರಿನ ವಿವರ:
12 ವರ್ಷದ ಹಿಂದೆ ತಂದೆ ಜೀವಂತವಿದ್ದಾಗ ಮಕ್ಕಳಾದ ಲೋಕೇಶ, ಮೇದಪ್ಪ, ವಿಶ್ವನಾಥ, ಪೂವಪ್ಪರವರಿಗೆ ಆಸ್ತಿ ಪಾಲು ಮಾಡಿದ್ದರು. ಈ ಆಸ್ತಿಯಲ್ಲಿ ತಂದೆ, ತಾಯಿಗೂ ಪಾಲು ನೀಡಿದ್ದು ಲೋಕೇಶ ಅವರು ತಂದೆ ತಾಯಿಯನ್ನು ನೋಡಿಕೊಂಡಿದ್ದು ಅವರ ಪಾಲಿನ ಆಸ್ತಿಯನ್ನು ಅನುಭವಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಲೋಕೇಶರವರ ಅಣ್ಣ ಮೇದಪ್ಪ ತನ್ನ ತಂದೆ ತಾಯಿಯ ಆಸ್ತಿಯಲ್ಲಿ ನನಗೂ ಹಕ್ಕಿದೆ ನನಗೂ ಪಾಲು ಬೇಕು ಎಂದು ಜಗಳವಾಡುತ್ತಿದ್ದರು. ಅದರಂತೆ ಸೆ.10ರಂದು ಮಧ್ಯಾಹ್ನ ಲೋಕೇಶ್ ಅವರ ಅಣ್ಣಂದಿರಾದ ಪೂವಪ್ಪ, ವಿಶ್ವನಾಥ, ಅಣ್ಣನ ಮಗ ಮೇಗಶ್ಯಾಮ ಸೇರಿಕೊಂಡು ಜಾಗದ ವಿಷಯವನ್ನು ರಾಜಿಯಲ್ಲಿ ಇತ್ಯರ್ಥ ಮಾಡುವ ಉದ್ದೇಶದಿಂದ ಮೇದಪ್ಪರನ್ನು ತೋಟಕ್ಕೆ ಕರೆಸಿದ್ದು ಅಲ್ಲಿಗೆ ಮೇದಪ್ಪ, ಅವರ ಹೆಂಡತಿ ರಾಜೀವಿ ಮತ್ತು ಮಗ ಪ್ರಜ್ವಲ್ ಬಂದಿದ್ದು ಮಾತುಕತೆ ವೇಳೆ ಏಕಾಏಕಿ ಮೇದಪ್ಪರವರ ಮಗ ಪ್ರಜ್ವಲ್ ಹಾಗೂ ಮೇದಪ್ಪರ ಪತ್ನಿ ರಾಜೀವಿಯವರು ಲೋಕೇಶರನ್ನು ಗಟ್ಟಿಯಾಗಿ ಹಿಡಿದುಕೊಂಡು ಮೇದಪ್ಪರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಲೋಕೇಶರ ಬಲಕೈ ರಟ್ಟೆಗೆ ಕಡಿದು ಹಲ್ಲೆ ಮಾಡಿ ಪುನಃ ಕತ್ತಿಯನ್ನು ಬೀಸಿದಾಗ ಲೋಕೇಶರು ಕೈಯಲ್ಲಿದ್ದ ಕೊಡೆಯನ್ನು ಅಡ್ಡ ಹಿಡಿದಾಗ ಕತ್ತಿಯ ಪೆಟ್ಟು ಎಡ ಕೈ ರಟ್ಟೆಗೆ ಹಾಗೂ ಎಡ ಮುಂಗೈಗೆ ತಾಗಿದೆ. ನಂತರ ಪ್ರಜ್ವಲನು ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ಎಡಕಾಲಿಗೆ ತುಳಿದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಗಾಯಗೊಂಡಿರುವ ಲೋಕೇಶರವರು ಕಡಬ ಸರಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಲೋಕೇಶರವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಅ.ಕ್ರ 81/2023 ಕಲಂ:341, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


ಮೇದಪ್ಪರ ದೂರಿನ ವಿವರ:
ಸೆ.10ರಂದು ಮಧ್ಯಾಹ್ನ ತನ್ನ ತಂದೆ ತಾಯಿಯ ಪಾಲಿನ ಜಾಗವನ್ನು ಪಾಲು ಮಾಡುವ ಬಗ್ಗೆ ತಮ್ಮನಾದ ಆರೋಪಿ ಲೋಕೇಶನೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಲೋಕೇಶನು ತಮ್ಮಂದಿರಾದ ವಿಶ್ವನಾಥ ಮತ್ತು ಪೂವಪ್ಪ ಎಂಬರೊಂದಿಗೆ ಸೇರಿಕೊಂಡು, ಅವ್ಯಾಚವಾಗಿ ಬೈದು, ತನ್ನ ಕೈಯಲ್ಲಿದ್ದ ಕೊಡೆಯ ಕಬ್ಬಿಣದ ರಾಡ್‌ನಿಂದ ಹಾಗೂ ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೇದಪ್ಪ ಅವರು ನೀಡಿದ ದೂರಿನಂತೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:82/2023 ಕಲಂ:341, 323,324,ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here