ಅಂಬಿಕಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಚಾಲನೆ

0

ಸನಾತನ ಧರ್ಮಕ್ಕೆ ಸಾಹಿತ್ಯದ ಕೊಡುಗೆ ಅಪಾರವಾದದ್ದು : ಗುಣಾಜೆ ರಾಮಚಂದ್ರ ಭಟ್


ಪುತ್ತೂರು: ಕನ್ನಡ ಸಾಹಿತ್ಯಕ್ಕೆ ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ವರ್ಷಗಳ ಇತಿಹಾಸವಿದ್ದು, ಆಯಾ ಕಾಲಘಟ್ಟದಲ್ಲಿ ಪ್ರಸ್ತುತಗೊಂಡ ಸಾಹಿತ್ಯ ಪ್ರಕಾರಗಳಲ್ಲಿ ಸನಾತನ ಧರ್ಮದ ಬಗೆಗಿನ ಉಲ್ಲೇಖ ಹಾಗೂ ಸಂದೇಶಗಳು ಉಲ್ಲೇಖಿತಗೊಂಡಿವೆ. ಆ ನೆಲೆಯಲ್ಲಿ ಸನಾತನ ಧರ್ಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾದದ್ದು.ಸಾಹಿತ್ಯದ ಮೂಲಕ ಧರ್ಮ- ಸಂಸ್ಕೃತಿಗಳ ಪ್ರಸರಣ ಕಾರ್ಯಗಳು ನಿರಂತರವಾಗಿ ನಡೆದುಬಂದಿವೆ ಎಂದು ಕಾಸರಗೋಡಿನ ಹಿರಿಯ ಸಾಹಿತಿ, ವಿಶ್ರಾಂತ ಶಿಕ್ಷಕ ಗುಣಾಜೆ ರಾಮಚಂದ್ರ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಅಭಿಜ್ಞಾನ ಸಾಹಿತ್ಯ ವೇದಿಕೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಸನಾತನ ಪರಂಪರೆಗೆ ಕನ್ನಡ ಸಾಹಿತ್ಯದ ಕೊಡುಗೆ ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಿದರು.
ಸನಾತನ ಧರ್ಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಂದೂ ಧರ್ಮ ಕೇವಲ ಮತ ಎಂಬ ಆರ್ಥದಲ್ಲಿ ಸಾಕಾರಗೊಂಡಿಲ್ಲ. ಅದೊಂದು ಜೀವನ ವಿಧಾನ ಎಂಬುದು ಈಗಾಗಲೇ ಒಪ್ಪಿತವಾಗಿರುವ ಸತ್ಯ. ಇಂತಹ ಉತ್ಕೃಷ್ಟ ಜೀವನ ವಿಧಾನ ಹಿಂಸೆಗೆ ಆದ್ಯತೆ ನೀಡದೆ ಶಾಂತಿಯನ್ನೇ ಧೇನಿಸುತ್ತಾ, ಪಸರಿಸುತ್ತಾ ಬಂದಿದೆ. ಇದರರ್ಥ ಹಿಂದೂ ಜೀವನ ಪದ್ಧತಿಯನ್ನು ಅಳವಡಿಸಿದವರು ಬಲಹೀನರು ಎಂದಲ್ಲ, ಬದಲಾಗಿ ಬಲವನ್ನು ಪ್ರದರ್ಶನಕ್ಕಿಡದವರು ಎಂಬುದೇ ಆಗಿದೆ ಎಂದು ನುಡಿದರು.


ಮರ ಗಿಡ ಕಲ್ಲುಗಳಲ್ಲಿ ಭಗವಂತನನ್ನು ಕಾಣುವ ಸಂಪ್ರದಾಯ ಸನಾತನ ಧರ್ಮದಲ್ಲಿದೆ. ಎಲ್ಲೆಲ್ಲೂ ಭಗವಂತನನ್ನೇ ಕಾಣುವ ವಿಚಾರಗಳು ಸಾಹಿತ್ಯದಲ್ಲೂ ಸಾಕಷ್ಟು ಉಲ್ಲೇಖಗೊಂಡದ್ದನ್ನು ಕಾಣಬಹುದು. ಸನಾತನ ಧರ್ಮದ ಜೀವನ ಮೌಲ್ಯಗಳನ್ನು ಬಿಂಬಿಸುವ ಸಾಹಿತ್ಯಗಳು ನಮ್ಮ ಸಾಹಿತ್ಯ ಪ್ರಪಂಚದಲ್ಲಿ ಮೂಡಿಬಂದಿವೆ, ಬರುತ್ತಲೇ ಇವೆ. ಹಾಗಾಗಿ ಅತ್ಯುತ್ಕೃಷ್ಟ ಸಂಸ್ಕೃತಿಯೊಂದರ ಭಾಗವಾಗಿ ನಾವಿದ್ದೇವೆ ಎಂದು ಹೆಮ್ಮೆ ಪಡಬೇಕೇ ವಿನಃ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನವನ್ನು ಕಳೆದುಕೊಳ್ಳಬಾರದು ಎಂದು ಕರೆನೀಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕನ್ನಡವನ್ನು ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂದು ಟಿವಿ ಮಾಧ್ಯಮಗಳ ಬಾಯಿಯಲ್ಲಿ ಕನ್ನಡ ವಿಕೃತಗೊಳ್ಳುತ್ತಿದೆ. ಅತ್ತ ಕನ್ನಡವೂ ಅಲ್ಲದ ಇತ್ತ ಇಂಗ್ಲೀಷೂ ಅಲ್ಲದ ಕಂಗ್ಲೀಷ್ ಭಾಷೆ ಮಾಧ್ಯಮದ ಮೂಲಕ ಪ್ರಸಾರಗೊಳ್ಳುತ್ತಿದೆ. ಹೀಗಿರುವಾಗ ಕನ್ನಡ ಭಾಷೆ ಬೆಳೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ ಸಾಧ್ಯವಾದಷ್ಟೂ ಕನ್ನಡ ಕೀ ಪ್ಯಾಡ್‌ಗಳನ್ನು ಮೊಬೈಲ್‌ಗಳಿಗೆ ಅಳವಡಿಸಿ ಕನ್ನಡದಲ್ಲಿಯೇ ಸಂದೇಶ ಕಳುಹಿಸಲು ತೊಡಗಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಕ್ತಿಗೀತೆ ಸ್ಪರ್ಧೆಯಲ್ಲಿ ಅಂತಿಮ ಬಿ.ಕಾಂನ ಚೈತನ್ಯಾ ಸಿ ಪ್ರಥಮ ಸ್ಥಾನ ಗಳಿಸಿದರೆ ಅಂತಿಮ ಬಿ.ಕಾಂನ ಶ್ರೀಹರ್ಷಾ ದ್ವಿತೀಯ ಸ್ಥಾನ ಪಡೆದುಕೊಂಡರು. ಭಜನೆ ಸ್ಪರ್ಧೆಯಲ್ಲಿ ತೃತೀಯ ಬಿ.ಕಾಂನ ಸ್ವಾತಿ ಉಪಾಧ್ಯ, ಲೇಖಾ, ಮೇಘನಾ, ದ್ವಿತೀಯ ಬಿ.ಕಾಂನ ಪ್ರಿಯಾಲ್ ಹಾಗೂ ಶರಣ್ಯಾ ರೈ ತಂಡ ಪ್ರಥಮ ಸ್ಥಾನ ಗಳಿಸಿದರೆ ತೃತೀಯ ಬಿ.ಕಾಂನ ಚೈತನ್ಯಾ ಸಿ, ಮಹಿಮಾ ಮಂಜುನಾಥ ಹೆಗಡೆ, ಅನನ್ಯಲಕ್ಷ್ಮೀ, ಶ್ರೀಜಾ, ಶ್ರೀಹರ್ಷಾ ಹಾಗೂ ದ್ವಿತೀಯ ಬಿ.ಕಾಂನ ದೀಪಾ ದ್ವಿತೀಯ ಸ್ಥಾನ ಪಡೆದರು. ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಿ.ಎಯ ಅಶ್ವಿತ್ ರೈ ವಿಜೇತರಾದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಹಾಗೂ ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ. ಉಪಸ್ಥಿತರಿದ್ದರು. ಗುಣಾಜೆ ರಾಮಚಂದ್ರ ಭಟ್ ಅವರು ತಾವು ಬರೆದ ಎರಡು ಕೃತಿಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ನೀಡಿದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿನಿ ದೀಪಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಕೂವೆತ್ತಂಡ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಲಲಿತಕಲಾ ಸಂಘದ ಸಂಯೋಜಕ ವಿದ್ವಾನ್ ತೇಜಶಂಕರ ಸೋಮಯಾಜಿ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಸ್ಪೂರ್ತಿ ವಂದಿಸಿದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here