ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ.18 ರಂದು ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲುರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರಗಿತು. ಸಂಘದ ಕಾರ್ಯದರ್ಶಿ ಅರ್ಪಣಾ ಎ.ರವರು 2022-23 ನೇ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘವು ಕೆಯ್ಯೂರು ಗ್ರಾಮದ ತೆಗ್ಗು, ಎರಕ್ಕಳ, ಕಲ್ಲಗುಡ್ಡೆ, ಕೋಡಂಬು, ಬಲ್ಕಾಡ್, ಸರ್ವೆ ಗ್ರಾಮದ ಕೆಳಗಿನ ಸೊರಕೆ ವ್ಯಾಪ್ತಿಯನ್ನು ಹೊಂದಿದ್ದು ಸಂಘವು ವರದಿ ವರ್ಷದಲ್ಲಿ 139 ಮಂದಿ ಸದಸ್ಯರನ್ನು ಹೊಂದಿದ್ದು ಇದರಲ್ಲಿ 38 ಮಂದಿ ಹಾಲು ಹಾಕುತ್ತಿದ್ದಾರೆ. ಸಂಘವು ಪ್ರತಿದಿನ 222 ಲೀಟರ್ ಹಾಲನ್ನು ಸಂಗ್ರಹಿಸುತ್ತಿದ್ದು ರೂ.36950 ಪಾಲು ಬಂಡವಾಳ ಹೊಂದಿದೆ ಎಂದು ತಿಳಿಸಿದರು. ಸಂಘವು ವರದಿ ವರ್ಷದಲ್ಲಿ ರೂ.5693.37 ನಿವ್ವಳ ಲಾಭ ಪಡೆದುಕೊಂಡಿದೆ ಎಂದು ತಿಳಿಸಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್.ಕೆರವರು ಒಕ್ಕೂಟದ ಮಾಹಿತಿ ನೀಡುತ್ತಾ, ಒಕ್ಕೂಟವು ಹೈನುಗಾರಿಕಾ ರೈತರಿಗೆ ಹಲವು ಯೋಜನೆಗಳನ್ನು ತಂದಿದ್ದು ಮುಖ್ಯವಾಗಿ ಹೆಣ್ಣು ಕರು ಪೋಷಣಾ ಯೋಜನೆ ಇದ್ದು, ಹೆಣ್ಣು ಕರು ಹೊಂದಿದ ಹೈನುಗಾರ ಸದಸ್ಯರು ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ವಿಮೆ ಕಡ್ಡಾಯ ಮಾಡಬೇಕು, ವಿಮೆ ಮಾಡಿಸಿದ ರೈತರು ಜಾನುವಾರುಗಳ ಕಿವಿಯಿಂದ ಟ್ಯಾಗ್ ಬಿದ್ದು ಹೋಗದಂತೆ ಜಾಗೃತೆ ವಹಿಸಬೇಕು ಒಂದು ವೇಳೆ ಬಿದ್ದು ಹೋದರೆ ಕೂಡಲೇ ಕಾರ್ಯದರ್ಶಿಯವರ ಗಮನಕ್ಕೆ ತಂದು ಹೊಸ ಟ್ಯಾಗ್ ಮಾಡಿಸಿಕೊಳ್ಳಬೇಕು ಎಂದರು. ಇದಲ್ಲದೆ ರೈತರಿಗೆ ಹುಲ್ಲು ಕೊಚ್ಚುವ ಯಂತ್ರ, ಹಾಲು ಕರೆಯುವ ಯಂತ್ರಗಳು ವಿಶೇಷ ಸಬ್ಸಿಡಿ ದರದಲ್ಲಿ ದೊರೆಯುತ್ತದೆ. ಗೋಬರ್ ಗ್ಯಾಸ್, ಸ್ಲರಿ ಪಂಪುಗೂ ಸಬ್ಸಿಡಿ ಇದೆ ಎಂದರು. ಪ್ರತಿ ದಿನ ೫೦ ಲೀಟರ್ ಹಾಕುವವರಿಗೆ ಲೀಟರ್ಗೆ 40 ಪೈಸೆ ಹಾಗೇ 100 ಲೀಟರ್ ಹಾಕುವ ರೈತರಿಗೆ 60 ಪೈಸೆ ಒಕ್ಕೂಟವು ಪ್ರೋತ್ಸಾಹಧನ ನೀಡುತ್ತಿದೆ ಎಂದು ತಿಳಿಸಿದರು. ರೈತರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಬಹುಮಾನ ವಿತರಣೆ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಡೊಂಬಯ್ಯ ಗೌಡ ಕೋಡಂಬು ಪ್ರಥಮ ಬಹುಮಾನ ಪಡೆದುಕೊಂಡರೆ, ಬೆಳಿಯಪ್ಪ ಗೌಡ ಕಲ್ಲಗುಡ್ಡೆ ದ್ವಿತೀಯ ಹಾಗೂ ಪ್ರಮೋದ್ ಕುಮಾರ್ ಬರೆಮೇಲು ತೃತೀಯ ಬಹುಮಾನ ಪಡೆದುಕೊಂಡರು.
ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲುರವರು ಮಾತನಾಡಿ, ಸಂಘವು 19 ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂಘವು ಕಳೆದ ವರ್ಷದಿಂದ ಈ ವರ್ಷ ಹೆಚ್ಚು ಹಾಲನ್ನು ಸಂಗ್ರಹಿಸಿದ್ದು ಇದಕ್ಕೆ ಎಲ್ಲಾ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಸಂಘಕ್ಕೆ ಗಣಕಯಂತ್ರ ಖರೀದಿ ಮಾಡಿದ್ದುದರಿಂದ ಅದಕ್ಕೆ ತಿಂಗಳಿಗೆ ರೂ.6 ಸಾವಿರದಷ್ಟು ಕಡಿತಗೊಳ್ಳುತ್ತಿರುವುದರಿಂದ ಈ ವರ್ಷ ಸದಸ್ಯರಿಗೆ ಯಾವುದೇ ಬೋನಸ್ ಕೊಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸಂಘದ ಕಟ್ಟಡ ಇರುವ ಅಡಿಸ್ಥಳವನ್ನು ಅಳತೆ ಮಾಡಿ ಕೂಡಲೇ ರೇಕಾರ್ಡ್ ಮಾಡಿಸುವುದು, ಸಂಘದ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದರೆ ಅವರನ್ನು ಗುರುತಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ಮಾಡಬೇಕು ಎಂದು ಸದಸ್ಯರು ತಿಳಿಸಿದರು. ಸಂಘದಿಂದ ರೈತರಿಗೆ ಕೊಡುವ ಹಾಲಿನ ದರವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಸದಸ್ಯರಿಂದ ಕೇಳಿಬಂತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಪ್ರಸಾದ್ ರೈ, ತಾರಾನಾಥ ಎ, ಗಂಗಾಧರ ಗೌಡ, ಹರಿಕೃಷ್ಣ ಜಿ, ಬಾಳಪ್ಪ ಗೌಡ, ಸಂಜೀವ ಆಳ್ವ, ಜಲಜಾಕ್ಷಿ ಎ.ರೈ, ಲೀಲಾವತಿ ರೈ, ಶೀಲಾವತಿ ಎ ಉಪಸ್ಥಿತರಿದ್ದರು. ಮಹಿಮಾ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ರಮಾನಾಥ ರೈ ಕೋಡಂಬು ವಂದಿಸಿದರು. ಸಂಘದ ಸಿಬ್ಬಂದಿ ಸುವಾಸಿನಿ ಸಹಕರಿಸಿದ್ದರು.