ಗೇರು ಸಂಶೋಧನಾ ನಿರ್ದೇಶನಾಲಯಲ್ಲಿ ‘ಹಿಂದಿ ದಿವಸ’ ಆಚರಣೆ

0

ಪುತ್ತೂರು: ಗೇರು ಸಂಶೊಧನಾ ನಿರ್ದೇಶನಾಲಯ, ಮೊಟ್ಟೆತ್ತಡ್ಕದಲ್ಲಿ ಪುತ್ತೂರು ನಗರ  ರಾಜಭಾಷಾ ಕಾರ್ಯಾನ್ವಯನ ಸಮಿತಿ ಆಶ್ರಯದಲ್ಲಿ ಸೆ.14ರಂದು  ‘ಹಿಂದಿ ದಿವಸ’ ಆಚರಿಸಲಾಯಿತು. ‘ಹಿಂದಿ  ಪಕ್ಷ’ ಆಚರಣೆಯ ವಿವಿಧ ಚಟುವಟಿಕೆಗಳ ಉದ್ಘಾಟನೆ ನಡೆಯಿತು.

ಸೆ.14, 1949ರಂದು ಹಿಂದಿ ಭಾಷೆಗೆ ಕೇಂದ್ರ ಸರಕಾರಿ ಕಛೇರಿಗಳಲಿ ಆಡಳಿತ ಭಾಷೆಯಾಗಿ ಬಳಕೆ ಮಾಡಬೇಕೆಂಬ ಸಾಂವಿಧಾನಿಕ ಸ್ಥಾನಮಾನ ನೀಡಲಾಯಿತು. ಪ್ರತೀ ವರ್ಷ ದೇಶದೆಲ್ಲೆಡೆ ಆ ದಿವಸವನ್ನು ಹಿಂದಿ ದಿವಸ ಎಂದು ಆಚರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಶ್ರೀವಿದ್ಯಾ ಜಗನ್ನಿವಾಸ ರಾವ್‍ ಸನ್ಮಾನ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಹಿಂದಿ ಭಾಷೆಯು ಕೇಂದ್ರ ಸರಕಾರಿ ಕಛೇರಿಗಳಲ್ಲಿ ಆಧಿಕಾರಿಕ ಭಾಷೆಯಾಗಿ ಬಳಕೆಗೆ ಬಂದುದರ ಹಿನ್ನೆಲೆ,  ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂವಹನ ಭಾಷೆಯಾಗಿ ಅದು ನಿರ್ವಹಿಸಿದ ಪಾತ್ರ ಹಾಗೂ ಇಂದಿನ ದಿನದಲ್ಲಿ ಹಿಂದಿ ಭಾಷೆಯ ಪ್ರಾಯೋಗಿಕ ಅವಶ್ಯಕತೆಗಳ ಕುರಿತು   ಮಾಹಿತಿ ಹಂಚಿಕೊಂಡರು. ಇಂದು ವಿದ್ಯಾರ್ಥಿಗಳಲ್ಲಿ ಈ ಭಾಷೆಯ ಕುರಿತು ‘ತೃತೀಯ’ ಭಾಷೆ ಎಂಬ ಅನಾದರ ಇದೆ, ಅದು ಹೋಗಬೇಕು, ಹಿಂದಿ ಭಾಷೆಗೆ ದೇಶದ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಶಕ್ತಿ ಇದೆ ಎಂದು ನುಡಿದರು.

ಬ್ಯಾಂಕ್ ಆಫ್ ಬರೋಡಾ, ಕ್ಷೇತ್ರಿಯ ಕಾರ್ಯಾಲಯ, ಪುತ್ತೂರಿನಲ್ಲಿ ಕ್ಷೇತ್ರಿಯ ಪ್ರಬಂಧಕ ದೇವಿಪ್ರಸಾದ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಾಲಯಗಳಲ್ಲಿ ಹಿಂದಿ ಭಾಷೆಯ ಬಳಕೆ ಮತ್ತು ಅಭಿವೃದ್ಧಿಯ ಕುರಿತಾದ ಎಲ್ಲ ಚಟುವಟಿಕೆಗಳಲ್ಲಿ ತಾವೂ ಮತ್ತು ತಮ್ಮ ಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.

ಡಾ.ಜೆ. ದಿನಕರ ಅಡಿಗ, ನಿರ್ದೇಶಕರು, ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂದು ದೇಶ ಸುತ್ತಲು ಬೇಕಿರುವ  ಹಿಂದಿ ಭಾಷೆಯ ಪ್ರಾಯೋಗಿಕ ಜ್ಞಾನದ ಕುರಿತು ಮಾರ್ಮಿಕವಾದ ವಿಚಾರಗಳನ್ನು ಹಂಚಿಕೊಂಡರು. ಇತ್ತಿಚೆಗೆ ನಮ್ಮ ದೇಶ ಆಯೊಜಿಸಿದ್ದ ಜಿ-20 ದೇಶಗಳ ಅಪೂರ್ವ ಸಮ್ಮೆಳನದ ಉದ್ದಗಲಕ್ಕೂ ನಮ್ಮ ಪ್ರಧಾನಿಯವರು  ಹಿಂದಿ ಭಾಷೆಯಲ್ಲೆ ಸಂವಹನ ಮಾಡಿದ್ದನ್ನು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪೋಸ್ಟ್ ಆಫೀಸಿನ ಸುಮಾ ಮತ್ತು ಸುಜಾತ, ಜೀವವಿಮಾ ನಿಗಮದ ಡಿ. ಪಿ. ಭಟ್‍, ಡಿ.ಸಿ.ಆರ್ ನ ಪದ್ಮಿನಿ ಕುಟ್ಟಿ ಮತ್ತು ರಘುರಾಮ ಹಿಂದಿ ಹಾಡನ್ನು ಹಾಡಿ ರಂಜಿಸಿದರು. ಡಾ. ವೀಣಾ, ಹಿಂದಿ ಕಾವ್ಯ ವಾಚನ ಮಾಡಿದರು. ರೇಶ್ಮಾ ಹಿಂದಿ ದಿವಸದ ಸಂದೇಶ ವಾಚಿಸಿದರು.  ಹಿಂದಿ ಭಾಷೆಯಲ್ಲಿ ಆಫೀಸಿನ ಕೆಲಸಗಳನ್ನು ಮಾಡುವ ನೌಕರರನ್ನು ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ಪ್ರಕಾಶ ಭಟ್‍, ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here