ಕುಂಬ್ರ ಶ್ರೀರಾಮ ಭಜನಾ ಮಂದಿರದ 42 ನೇ ಸಾರ್ವಜನಿಕ ಗಣೇಶೋತ್ಸವ-ಧಾರ್ಮಿಕ ಸಭೆ

0

ಹಿಂದೂ ಧರ್ಮದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಹಿಂದೂ ಸಮಾಜದಲ್ಲಿ ಶಕ್ತಿ ತುಂಬಬೇಕು, ಹಿಂದೂಗಳು ಒಗ್ಗಟ್ಟಾಗಬೇಕು ಎಂಬ ನಿಟ್ಟಿನಲ್ಲಿ ಅಂದು ಬಾಲಗಂಗಾಧರನಾಥ ತಿಲಕರು ಗಲ್ಲಿಗಲ್ಲಿಗಳಲ್ಲಿ ಗಣೇಶನನ್ನು ಕೂರಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸಲು ಕರೆ ನೀಡಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚುಹಚ್ಚುವ ಕೆಲಸ ಇದರಿಂದಾಯಿತು. ಇಂದಿನ ದಿನಗಳಲ್ಲೂ ಮತ್ತೆ ಹಿಂದೂ ಸಮಾಜ, ಹಿಂದೂಗಳು ಒಗ್ಗಟ್ಟಾಗಬೇಕಾದ ಅಗತ್ಯತೆ ಇದೆ. ಆ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಸನಾತನ ಹಿಂದೂ ಧರ್ಮವನ್ನು ಉಳಿಸಬೇಕಾದ ಅಗತ್ಯತೆ ನಮ್ಮಲ್ಲಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಅವರು ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ ೪೨ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರನೇ ದಿನವಾದ ಸೆ.21 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವಂತಹ ಕೆಲಸ ಒಂದು ಕಡೆಯಲ್ಲಿ ನಡೆಯುತ್ತಿದ್ದರೆ ಇನ್ನೊಂದು ಕಡೆಯಲ್ಲಿ ನಮ್ಮ ಆಚರಣೆ, ಸಂಭ್ರಮವನ್ನು ಹತ್ತಿಕ್ಕುವ ಕೆಲಸ ರಾಜಕೀಯದ ಕಡೆಯಿಂದ ನಡೆಯುತ್ತಿದೆ. ಗೋಮಾತೆಯ ಹತ್ಯೆ, ಮಾತೆಯರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು ಹಿಂದೂಗಳ ಭಾವನೆಯ ಮೇಲೆ ಚೆಲ್ಲಾಟ ಆಡುವ ಕೆಲಸ ಆಗುತ್ತಿರುವುದು ದುರಂತ ಇದರ ವಿರುದ್ಧ ನಾವೆಲ್ಲರೂ ಎದ್ದು ನಿಲ್ಲಬೇಕಾದ ಅಗತ್ಯತೆ ಇದೆ ಎಂದು ಅರುಣ್ ಪುತ್ತಿಲರವರು, ಹಿಂದೂ ರಾಷ್ಟ್ರದ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಸಮಾಜದಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಹಿಂದೂ ಸಮಾಜದ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು. ಗಣೇಶೋತ್ಸವದ ಮೆರವಣಿಗೆಯನ್ನು ಹತ್ತಿಕ್ಕುವ ಸಲುವಾಗಿ ಪೊಲೀಸ್ ಇಲಾಖೆ, ಸರಕಾರ ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ ಆದರೆ ನಾವು ನಮ್ಮ ಆಚರಣೆ, ಮೆರವಣಿಗೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದು ಸರಿಯಲ್ಲ ಇಲಾಖೆಯಿಂದ ಯಾವುದೇ ಅಡೆತಡೆ ಇದ್ದರೂ ಅದಕ್ಕೆ ಹಿಂಜರಿಯಬೇಡಿ ನಿಮ್ಮ ಜೊತೆ ನಾನಿದ್ದೇನೆ ಧೈರ್ಯದಿಂದ ಮೆರವಣಿಗೆ ಮಾಡಿ ಎಂದು ಅರುಣ್ ಪುತ್ತಿಲ ಧೈರ್ಯ ತುಂಬಿದ ಮಾತುಗಳೊಂದಿಗೆ ಶುಭ ಹಾರೈಸಿದರು.


ತುಳುನಾಡಿನ ಬಾವಕುಮಾರ ನಮ್ಮೆಲ್ಲರ ಆರಾಧ್ಯ ದೇವರು: ರವೀಶ್ ಪಡುಮಲೆ
ಜಾನಪದ ನಂಬಿಕೆ ಮತ್ತು ಹಿಂದೂ ಧರ್ಮ ಎಂಬ ವಿಷಯದಲ್ಲಿ ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರೋಫೆಸರ್ ಡಾ.ರವೀಶ್ ಪಡುಮಲೆ ಮಾತನಾಡಿ, ನಾವಿಂದು ಆರಾಧಿಸುತ್ತಿರುವ ಮೊದಲ ವಂದಿತ ಗಣೇಶನೇ ತುಳುನಾಡಿನ ಬಾವ ಕುಮಾರನಾಗಿದ್ದಾನೆ. ತುಳುನಾಡಿದ ದೈವದ ಸಂದಿಯಲ್ಲಿ ಬಾವ ಕುಮಾರನ ಬಗ್ಗೆ ಬಹಳ ಸೊಗಸಾದ ಪಾಡ್ದನವಿದೆ, ಕೈಲಾಸದಿಂದ ತುಳುನಾಡಿಗೆ ಇಳಿದು ಇಂದು ಪೂಜೆ ಪುನಸ್ಕಾರಗಳನ್ನು ಪಡೆಯುತ್ತಿರುವ ಬಾವ ಕುಮಾರ ನಮ್ಮೆಲ್ಲರ ಆರಾಧ್ಯ ದೇವರಾಗಿದ್ದಾರೆ ಎಂದರು. ಬಾವ ಕುಮಾರನ ಬಗ್ಗೆ ಬಹಳ ಸೊಗಸಾದ ಕಥಾ ನಿರೂಪಣೆಯೊಂದಿಗೆ ವಿವರಣೆ ನೀಡಿದರು. ಹಿಂದೂ ಸಮಾಜ ಮತ್ತು ಹಿಂದೂಗಳನ್ನು ಒಟ್ಟು ಸೇರಿಸಬೇಕು ಎಂಬ ನಿಟ್ಟಿನಲ್ಲಿ ಅಂದು ತಿಲಕರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಜಾರಿಗೆ ತಂದರು. ಆ ಮೂಲಕ ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಂಸ್ಕೃತಿ,ಸಂಸ್ಕಾರವನ್ನು ಜಾಗೃತಿ ಮೂಡಿಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ, ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಕರುಣಾ ರೈ ಬಿಜಳ, ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರತನ್ ರೈ ಕುಂಬ್ರ ಸ್ವಾಗತಿಸಿದರು. ವೈಷ್ಣವಿ, ಸುಧೀಕ್ಷಾ ಪ್ರಾರ್ಥಿಸಿದರು. ಅರ್ಧ ಏಕಾಹ ಭಜನೆಯ ಸಂಚಾಲಕ ಹರೀಶ್ ರೈ ಮುಗೇರು ಪ್ತಾಸ್ತಾವಿಕ ಮಾತುಗಳನ್ನಾಡಿದರು. ಚರಣ್, ಚಂದ್ರಶೇಖರ ಕುರಿಕ್ಕಾರ, ನೇಮಿರಾಜ್ ಕುರಿಕ್ಕಾರ, ರಾಮಯ್ಯ ಗೌಡ ಬೊಳ್ಳಾಡಿ, ಶಿವರಾಮ ಗೌಡ ಬೊಳ್ಳಾಡಿ, ಉದಯ ಮಡಿವಾಳ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮಂದಿರದ ಆಡಳಿತ ಸಮಿತಿ ಪ್ರ.ಕಾರ್ಯದರ್ಶಿ ಅಂಕಿತ್ ಕುಯ್ಯಾರು ವಂದಿಸಿದರು. ಯುವರಾಜ್ ಪೂಂಜಾ ಕಾರ್ಯಕ್ರಮ ನಿರೂಪಿಸಿದರು.

ಸನಾತನ ಧರ್ಮಕ್ಕೆ ಅಳಿವಿಲ್ಲ
ಭಾರತೀಯ ಸನಾತನ ಧರ್ಮದ ಬಗ್ಗೆ ಹಲವು ಮಂದಿ ಈಗಾಗಲೇ ಅವಹೇಳನ ಮಾಡಲು ಹೊರಟಿದ್ದಾರೆ ಇದು ಸರಿಯಲ್ಲ ಎಂದ ಡಾ.ರವೀಶ ಪಡುಮಲೆಯವರು, ಸೂರ್ಯ ಚಂದ್ರರು ಇರುವ ತನಕ ಸನಾತನ ಧರ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದರು. ಹಿಂದೂ ಧರ್ಮದಿಂದ ಮತಾಂತರಗೊಂಡ ಉದಯನಿಧಿ ಸ್ಟಾಲಿನ್‌ನಂತಹ ಅದೆಷ್ಟೇ ಮಂದಿ ಬಂದರೂ ಸನಾತನ ಧರ್ಮದ ನಾಶ ಅಸಾಧ್ಯ ಎಂದ ರವೀಶ್ ಪಡುಮಲೆಯವರು ಸನಾತನ ಧರ್ಮ ನಮ್ಮೆಲ್ಲರ ಜೀವನ ಪದ್ಧತಿಯಾಗಿದೆ. ಇದರಲ್ಲಿ ಅಸ್ಪಶೃತೆ ಇದೆ ಎನ್ನುವ ಸ್ಟಾಲಿನ್‌ನ ಮಾತನ್ನ ನಾನು ಒಪ್ಪುವುದಿಲ್ಲ ಸನಾತನ ಧರ್ಮದಲ್ಲಿ ಅಸ್ಪಶೃತೆ ಇರಲು ಸಾಧ್ಯವಿಲ್ಲ, ಸನಾನತ ಧರ್ಮವನ್ನು ಹಿಯಾಳಿಸುವವರನ್ನು ಈ ಸಂದರ್ಭದಲ್ಲಿ ಖಂಡಿಸುತ್ತೇನೆ ಎಂದು ಅವರು ಹೇಳಿದರು.


ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮ
ಬೆಳಿಗ್ಗೆ ಮತ್ತು ಸಂಜೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ತಂಡದವರು ವೈಧಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಬೃಂದಾವನ ನಾಟ್ಯಾಲಯ ಕುಂಬ್ರ ಇವರಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here