ಪುತ್ತೂರು(ದುಬೈ): ಧರ್ಮಗಳು ಭೋಧಿಸುವುದು ಶಾಂತಿಯನ್ನಾಗಿದೆ. ಧರ್ಮಗಳು ಅನ್ಯೋನ್ಯತೆಯಿಂದ ಪರಸ್ಪರ ಸಹೋದರರಂತೆ ಬಾಳಿದಾಗ ಸಮಾಜ ಅಭಿವೃದ್ಧಿಯಾಗುವುದು. ಸ್ವಹಿತಾಸಕ್ತಿಗೋಸ್ಕರ, ರಾಜಕೀಯ ಮೇಲಾಟದಲ್ಲಿ ಇಂದು ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿದ್ದು, ಕಚ್ಚಾಟ, ಹಿಂಸೆಗಳು ಮೇಳೈಸುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಮಕ್ಕಳನ್ನು ಇವುಗಳಿಗೆ ಪ್ರೇರೇಪಿಸದೆ, ಉತ್ತಮ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಗುರುತಿಸುವಂತೆ ಮಾಡಬೇಕಾಗಿರುವುದು ನಮ್ಮ ಮೇಲಿನ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರ, ಧಾರ್ಮಿಕ ಹಿಂಸಾಚಾರ, ಮಾದಕ ವ್ಯಸನಗಳನ್ನ ಹೋಗಲಾಡಿಸಬೇಕಾಗಿದ್ದು ಇವ್ವೆಲ್ಲದಕ್ಕೂ ಶಿಕ್ಷಣ ಅತ್ಯಗತ್ಯವಾಗಿದೆ. ಇಂದು ಯುವ ಸಮೂಹವು ಕೇವಲ ಪ್ರಾಥಮಿಕ ಶಿಕ್ಷಣವನ್ನು ಪಡೆದು ವಿದೇಶಗಳತ್ತ ಮುಖ ಮಾಡುತ್ತಿದ್ದು, ಮುಂದಿನ ತಲೆಮಾರುಗಳಿಗೆ ಇವು ದೊಡ್ಡ ದುರಂತವಾಗಿದ್ದು, ಉತ್ತಮ ಶಿಕ್ಷಣವನ್ನು ಪಡೆದು, ಸಮಾಜದಲ್ಲಿ ಗುರುತಿಸಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿ ಬದುಕುವುದನ್ನು ಪ್ರೇರೇಪಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಕೊಡಿಂಬಾಡಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಯು ಎ ಇ ಗೆ ಭೇಟಿ ನೀಡಿದ ಶಾಸಕರು ಕೆ ಐ ಸಿ ಮೀಲಾದ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಂಡ್ ಮೀಲಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ ಐ ಎ ಅಕಾಡೆಮಿ ಡೈರೆಕ್ಟರ್ ಹಾಜಿ ಮೊಹಿಯುದ್ದೀನ್ ದಿಬ್ಬ ಮಾತನಾಡಿ ಪ್ರವಾದಿ ವಿಶ್ವದಲ್ಲಿ ಒಂದೇ ಒಂದು ಫೋಟೋ, ಅಥವಾ ಮೂರ್ತಿ ಇಲ್ಲದೆ ಜಗತ್ತಿನಾದ್ಯಂತ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿರುವ ಏಕೈಕ ನಾಯಕರಾಗಿದ್ದಾರೆ, ಓರ್ವ ಧರ್ಮ ಭೋದಕರಾಗಿ ಮಾತ್ರ ಗುರುತಿಸಲ್ಪಡದೆ ಸಮಾನತೆಯ ಹರಿಕಾರರಾಗಿದ್ದರು ಎಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿದ ಕೆಐಸಿ ಮೀಲಾದ್ ಸಮಿತಿ ಚೇರ್ ಮ್ಯಾನ್ ಜಬ್ಬಾರ್ ಬೈತಡ್ಕ ಮಾತನಾಡಿ, ಈ ಹಿಂದೆ ಕೆಐಸಿಯು ಕೇವಲ ಯುಎಇ ಗೆ ಸೀಮಿತವಾಗಿತ್ತು. ಆದರೆ ಇಂದು ಕೆಐಸಿ ಯ ಅರಬ್ ರಾಷ್ಟ್ರಗಳನ್ನೊಳಗೊಂಡ ಸಮಿತಿ ಕೆಐಸಿಜಿಸಿಸಿ ಸಮಿತಿ ಕಾರ್ಯರೂಪಕ್ಕೆ ಬಂದಿದ್ದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮೌಲ್ಯಯುತ, ಶಿಸ್ತುಬದ್ಧ ಶಿಕ್ಷಣವನ್ನು ನೀಡುತ್ತಿರುವ ಕೆಐಸಿ ಅಕಾಡೆಮಿ ಕುಂಬ್ರ ಸಂಸ್ಥೆಯ ಅಭಿವೃದ್ಧಿಯಲ್ಲಿ ತಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿದ ಇಸಾಕ್ ಕೌಸರಿ ಪಲೊಟ್ಟು ವಿದ್ಯಾಭ್ಯಾಸಕ್ಕೆ ಇಸ್ಲಾಮ್ ನೀಡಿದ ಮಹತ್ವದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿದ ಹಮೀದ್ ಮುಸ್ಲಿಯಾರ್ ನೀರ್ಕಜೆ, ಪ್ರವಾದಿಯವರ ಜೀವನದ ಪ್ರತಿಯೊಂದು ಘಟನೆಗಳು ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ಅತ್ಯಂತ ನಿಕೃಷ್ಟವಾಗಿದ್ದ ಸಮುದಾಯವೊಂದನ್ನು ಆಧರ್ಮದಿಂದ ಧರ್ಮದೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ, ಮೌಢ್ಯದಿಂದ ನೈಜತೆಯೆಡೆಗೆ ಸಮುದ್ಧೀಕರಿಸಿದ ಕೀರ್ತಿ ಪ್ರವಾದಿಯವರಿಗೆ ಸಲ್ಲುತ್ತದೆ. ಮಹಿಳಾ ಸಮಾಜವನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಿದ್ದ ಕಾಲದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿದ ಇಸ್ಲಾಮ್ ಧರ್ಮದ ಕೊನೆಯ ಪ್ರವಾದಿ ಅವರ ಚರ್ಯೆಯಂತೆ ಜೀವಿಸಿ ಪರಲೋಕ ಪ್ರಾಪ್ತರಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದ ಬಷೀರ್ ಹುದವಿ, ಅಜ್ಞಾನ ಅಂಧಕಾರದಿಂದ ಮಿಂದೇಳುತ್ತಿದ್ದ ಸಮುದಾಯವೊಂದನ್ನು ಸುಜ್ಞಾನದೆಡೆಗೆ ತಂದು, ಪವಿತ್ರ ಇಸ್ಲಾಮಿನ ನೈಜ ಸಂದೇಶವನ್ನು ಸಾರಿದ ಮಹಾನ್ ಪ್ರವಾದಿಯವರ ಜೀವನ ಶೈಲಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಕರೆನೀಡಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅಥಿತಿ ಕೆಐಸಿಜಿಸಿಸಿ ಅಧ್ಯಕ್ಷ, ಅನಿವಾಸಿ ಉದ್ಯಮಿ ಅಶ್ರಫ್ ಷಾ ಮಾಂತೂರ್ ಮಾತನಾಡಿ, ಪರಸ್ಪರ ಸಹೋದರತೆ, ಅನ್ಯೋನ್ಯತೆಯಿಂದ ಕೂಡಿದ ನವ ಸಮಾಜದ ಗುರಿಯೊಂದಿಗೆ,ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿ ಸರಕಾರ ನೀಡುತ್ತಿರುವ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡುವಲ್ಲಿ ಶ್ರಮಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ರವರ ಕಾರ್ಯ ವೈಖರಿಯ ಕುರಿತು ಪ್ರಶಂಶಿಸಿ, ಅನಿವಾಸಿಗಳ ಕಷ್ಟಗಳ ಕುರಿತು ವಿವರಿಸಿ, ಮುಂದೆ ಸರಕಾರದಲ್ಲಿ ಅನಿವಾಸಿಗಳಿಗಾಗಿ ನೂತನ ಯೋಜನೆಗಳನ್ನು ಜಾರಿಗೊಳಿಸಲು ಶಾಸಕರು ಪರಿಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅಬ್ದುಲ್ ಖಾದರ್ ಬೈತಡ್ಕ ರವರು, ಪ್ರವಾದಿ ಜೀವನದ ಕುರಿತು ವಿವರಿಸಿ, ಇಂದು ವೈಜ್ಞಾನಿಕವಾಗಿ ಕಂಡು ಕೊಳ್ಳುತ್ತಿರುವ ಪ್ರತಿಯೊಂದು ಆವಿಷ್ಕಾರಗಳು ಶತಮಾನಗಳ ಹಿಂದೆ ಖುರ್ ಆನ್ ಉಲ್ಲೇಖಿಸಿದೆ. ಪ್ರವಾದಿರವರು ಮಾನವ ಕುಲದ ವಿಮೋಚಕರಾಗಿ, ಅಸ್ಪೃಶ್ಯತೆ ಅಂಧಾಕಾರದ ವಿರುದ್ಧವಾಗಿ ಮಾನವ ಸಮಾಜವನ್ನು ಬೆಳಕಿನೆಡೆಗೆ ಕೊಂಡೊಯ್ದ ಮಹಾ ಪುರುಷರಾಗಿದ್ದು, ಮಾನವ ಸಮಾಜದ ಕೊನೆಯ ಪ್ರವಾದಿಯಾಗಿರುತ್ತಾರೆ, ಅವರ ಪ್ರತಿಯೊಂದು ಹೆಜ್ಜೆಗಳು ನಮಗೆ ಮಾದರಿಯಾಗಿದ್ದು ಅವರ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಮನವಿ ಮಾಡಿದರು.
ಕೆ ಐ ಸಿ ಯು ಎ ಇ ಸಮಿತಿ ಆಯೋಜಿಸಿದ್ದ ಈ ಗ್ರಾಂಡ್ ಮೀಲಾದ್ ಕಾರ್ಯಕ್ರಮದ ಆರಂಭದಲ್ಲಿ ಸಿರಾಜುದ್ದೀನ್ ಫೈಝಿ ಬಂಟ್ವಾಳ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಸಫ್ವಾನ್ ಮತ್ತು ತಂಡದವರಿಂದ ಅತ್ಯಾಕರ್ಷಕ ಬುರ್ದಾ ಆಲಾಪನೆ ನಡೆಯಿತು.
ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ ಯೂಸುಫ್ ಹಾಜಿ ಬೇರಿಕೆ, ದಾರುನ್ನೂರ್ ಕಾಶಿಪಟ್ನ ಯುಎಇ ಸಮಿತಿ ಅಧ್ಯಕ್ಷ ಮುಹಮ್ಮದ್ ಮಾಡಾವು, ಶಂಸುಲ್ ಉಲಮಾ ತೋಡಾರ್ ಅಧ್ಯಕ್ಷರಾದ ಸಲೀಂ ಮೂಡಬಿದ್ರೆ , ನೂರುಲ್ ಹುದಾ ಮಾಡನ್ನೂರ್ ಅಧ್ಯಕ್ಷರಾದ ಷರೀಫ್ ಕಾವು,ದಾರುಲ್ ಹಸನಿಯಾ ಸಾಲ್ಮರ ಅಧ್ಯಕ್ಷರಾದ ಅನೀಸ್ ಪುರುಷರಕಟ್ಟೆ , ಶಂಸುದ್ದೀನ್ ಸೂರಲ್ಪಾಡಿ, ದಾರುಸ್ಸಲಾಂ ಬೆಳ್ತಂಗಡಿ ಕಾರ್ಯದರ್ಶಿ ಇಬ್ರಾಹಿಂ ಆತೂರ್, ವಿಖಾಯ ಚೇರ್ಮನ್ ನವಾಜ್ ಬಿ ಸಿ ರೋಡ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗು ಹಿರಿಯ – ಕಿರಿಯ ವಿಭಾಗದಲ್ಲಿ ಇಸ್ಲಾಮಿಕ್ ಕಲಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೀಲಾದ್ ಸಮಿತಿ ಕಾರ್ಯದರ್ಶಿ ರಾಝಿಕ್ ಹಾರಾಡಿ ವಂದಿಸಿದರು. ಅಝರ್ ಹಂಡೇಲ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್ ಮಣಿಲ, ಅಶ್ರಫ್ ಅರ್ತಿಕೆರೆ, ಅಬ್ದುಲ್ ಸಲಾಂ ಬಪ್ಪಳಿಗೆ, ಅಬ್ದುಲ್ ರಝಾಕ್ ಸೊಂಪಾಡಿ, ಬದ್ರುದೀನ್ ಹೆಂತಾರ್ ಶರೀಫ್ ಕೊಡಿನೀರ್, ಅಸೀಫ್ ಮರೀಲ್, ಆರೀಫ್ ಕೂರ್ನಡ್ಕ, ಅಕ್ರಮ್ ಕೂರ್ನಡ್ಕ, ಆಶಿಕ್ ಕೂರ್ನಡ್ಕ, ಜಾಬೀರ್ ಬೆಟ್ಟಂಪಾಡಿ, ನಾಸೀರ್ ಬಪ್ಪಳಿಗೆ, ಜಾಬೀರ್ ಬಪ್ಪಳಿಗೆ, ಇಸಾಕ್ ಕುಡ್ತಮುಗೇರ್, ಉಸ್ಮಾನ್ ಮರೀಲ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.