ರಾಮಕುಂಜ: ಕಡಬ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟ ಸೆ.22ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಸರಕಾರಿ ಪ್ರೌಢಶಾಲೆ ವಳಾಲು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಚಕ್ರಪಾಣಿ ಎ.ವಿ.ಯವರು ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಯ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕ್ರೀಡೆಯು ಪ್ರೋತ್ಸಾಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಖೋ ಖೋ ಪಂದ್ಯಾಟವು ವಿದ್ಯಾರ್ಥಿಗಳು ಸದಾ ಕಾರ್ಯಪ್ರವೃತರಾಗುವಂತೆ ಮಾಡುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಇಲ್ಲಿನ ಮುಖ್ಯಗುರು ಕಮಲ ಇವರು ಮಾತನಾಡಿ, ಸೋಲು ಮತ್ತು ಗೆಲುವು ಒಂದು ಪಂದ್ಯಾಟದಲ್ಲಿ ಸಹಜ. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ ಸದಾ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುವಂಥದ್ದು ಒಬ್ಬ ಕ್ರೀಡಾಪಟುವಿನ ಶ್ರೇಷ್ಠವಾದ ಗುಣ ಎಂದರು. ಇನ್ನೋರ್ವ ಅತಿಥಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸ್ಕರಿಯ ಎಂ.ಎ.ಅವರು ಶುಭ ಹಾರೈಸಿದರು. ಸುಬ್ರಹ್ಮಣ್ಯ ಪಿ.ಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ., ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ.ನಿರೂಪಿಸಿ, ವಂದಿಸಿದರು.
ಬಾಲಕರ ವಿಭಾಗದಲ್ಲಿ ರಾಮಕುಂಜ, ಬಾಲಕಿಯರ ವಿಭಾಗದಲ್ಲಿ ನೂಜಿಬಾಳ್ತಿಲಕ್ಕೆ ಪ್ರಥಮ ಸ್ಥಾನ:
ಬಾಲಕರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು. ಶ್ರೀ ಸುಬ್ರಹ್ಮಣ್ಯ ಪಿ.ಯು ಕಾಲೇಜಿನ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ಓಟಗಾರನಾಗಿ ಚಂದನ್, ಉತ್ತಮ ಹಿಡಿತಗಾರನಾಗಿ ಆಶ್ಲೇಶ್, ಸರ್ವಾಂಗೀಣ ಆಟಗಾರನಾಗಿ ನಿಶಾಂತ್ ಮೂಡಿಬಂದರು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಥನಿ ಪಿಯು ಕಾಲೇಜು ನೂಜಿಬಾಳ್ತಿಲ ತಂಡ ಪಡೆದುಕೊಂಡಿತು. ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ಹಿಡಿತ ಗಾರ್ತಿಯಾಗಿ ಆಶಿತಾ, ಉತ್ತಮ ಓಟಗಾರ್ತಿಯಾಗಿ ಮೋಹಿನಿ, ಸರ್ವಾಂಗೀಣ ಆಟಗಾರ್ತಿಯಾಗಿ ಲಿಖಿತ ಮೂಡಿಬಂದರು. ರಾಮಣ್ಣ, ರಾಘವ, ಪ್ರದೀಪ್, ವಿನಯ್ ಕುಮಾರ್, ಪ್ರಫುಲ್ಲ ಅವರು ಖೋ ಖೋ ಪಂದ್ಯಾಟ ನಡೆಸಿಕೊಟ್ಟರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ ಪಜ್ಜಡ್ಕರವರು ಬಹುಮಾನ ವಿತರಿಸಿದರು.