@ ಸಿಶೇ ಕಜೆಮಾರ್
ಕೋಡಿಂಬಾಡಿ ಅಶೋಕ್ ಕುಮಾರ್ ರೈ.. ಶಾಸಕರಾದ ಬಳಿಕವೂ ತನ್ನ ಸಮಾಜಮುಖಿ ಚಟುವಟಿಕೆಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಕೂಡ ಮಾಡದೆ ಮುಂದುವರಿಸಿಕೊಂಡು ಬಂದಿರುವ ಓರ್ವ ವಿಭಿನ್ನ ವಿಶಿಷ್ಠ ವ್ಯಕ್ತಿತ್ವದ ಜನನಾಯಕ. ಶಾಸಕರಾಗುವ ಮೊದಲಿನ ದಿನಗಳನ್ನು ಅವಲೋಕನ ಮಾಡಿದರೆ ಅಲ್ಲಿ ಕಾಣುವ ಅಶೋಕ್ ರೈಗೂ ಈಗಿನ ಎಂಎಲ್‌ಎ ಅಶೋಕ್ ರೈಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಏಕೆಂದರೆ ಅಂದು ಕೂಡ ಬಡವರ ಪರ ಕಾಳಜಿ ಹೊಂದಿದ್ದರು ಇಂದು ರಾಜಕೀಯವಾಗಿ ಪುತ್ತೂರಿನ ಶಾಸಕರಾದರೂ ಅದೇ ಕಾಳಜಿ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ ಅದಕ್ಕೆ ಉತ್ತಮ ನಿದರ್ಶನ ‘ಅಶೋಕ ಜನಮನ’ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮವಾಗಿದೆ. ತನ್ನ ರೈ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಈ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಇಂದಿಗೆ 12 ವರ್ಷಗಳು ಸಂದಿವೆ. ಇದು 13 ನೇ ವರ್ಷದ ಕಾರ್ಯಕ್ರಮವಾಗಿದೆ. ಮೊದಲಿಗೆ ತನ್ನ ಕೋಡಿಂಬಾಡಿ ಮನೆಯಲ್ಲಿ ಆರಂಭವಾದ ಈ ವಸ್ತ್ರ ವಿತರಣಾ ಕಾರ್ಯಕ್ರಮ ಇಂದು ಬೃಹತ್ ಮಟ್ಟದಲ್ಲಿ ನಡೆಯುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ರಾಜಕೀಯ ರಹಿತವಾಗಿ ಯಾವುದೇ ಜಾತಿ,ಮತ,ಧರ್ಮ ಇದ್ಯಾವುದರ ಗೊಡವೆಗಳಿಲ್ಲದೆ ನಡೆಯುತ್ತದೆ. ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸುತ್ತಾರೆ. ಕಳೆದ ವರ್ಷ ಸುಮಾರು 85 ಸಾವಿರ ಮಂದಿ ಭಾಗವಹಿಸಿದ್ದು ಈ ವರ್ಷ ಬರೋಬ್ಬರಿ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.ಕಳೆದ ವರ್ಷ ಮಹಿಳೆಯರಿಗೆ ಸೀರೆ, ಪುರುಷರಿಗೆ ಬೆಡ್‌ಶೀಟ್ ವಿತರಣೆ ಮಾಡಲಾಗಿದ್ದು ಈ ವರ್ಷ ಸ್ಟೀಲ್ ಬಟ್ಟಲು, ಲೋಟ, ಪಿಂಗಾಣಿ ಮತ್ತು ಬೋಗುಣಿ ಇರುವ ಪಾತ್ರೆ ಸೆಟ್ ಹಾಗೇ ಒಂದು ಬಾತ್ ಟವಲ್ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಈ ಉಡುಗೊರೆ ಕೊಡುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ. ಇಷ್ಟಕ್ಕೂ ಈ ಕಾರ್ಯಕ್ರಮದ ಹಿಂದಿನ ಕಥೆ ಎಂತಹುದು ಅಂತ ತಿಳಿಯುತ್ತಾ ಹೋದರೆ ಇಂಟರೆಸ್ಟಿಂಗ್ ಕಥೆಯೊಂದು ತೆರೆದುಕೊಳ್ಳುತ್ತದೆ.
ಅಮ್ಮನಿಗೆ ಮಾತು ಕೊಟ್ಟ ರೈ…
12 ವರ್ಷಗಳ ಹಿಂದೆ ತನ್ನ ಕೋಡಿಂಬಾಡಿ ಮನೆಯಲ್ಲಿ ದೀಪಾವಳಿ ಉಡುಗೊರೆ ನೀಡಲು ಆರಂಭಿಸಿದ್ದರು ಅಶೋಕ್ ಕುಮಾರ್ ರೈಯವರು, ಪ್ರಾರಂಭದಲ್ಲಿ ತನ್ನ ಮನೆಯ ಕೆಲಸಗಾರ ಕಾರ್ಮಿಕರಿಗೆ, ಹಿತೈಷಿಗಳಿಗೆ ಹೀಗೆ ಒಂದಿಪ್ಪತೈದು ಮಂದಿಗೆ ವಸ್ತ್ರದಾನ. ದೀಪಾವಳಿ ದಿನ ಮನೆಯಲ್ಲಿ ಪರ್ಬೊ ಆಚರಣೆಯೊಂದಿಗೆ ವಸ್ತ್ರದಾನ ಕಾರ್ಯಕ್ರಮ ಮಾಡಿದ್ದರು. ಹೀಗೆ ಆರಂಭವಾದ ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ವರ್ಷದಿಂದ ವರ್ಷಕ್ಕೆ ಸೇರುವ ಜನರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಹೋಯಿತು. 25 ರಿಂದ ಆರಂಭವಾದ ಜನರ ಸಂಖ್ಯೆ ಸಾವಿರಕ್ಕೆ ತಲುಪಿತು. ಹೀಗೆ ಒಂದು ವರ್ಷ ಅಶೋಕ್ ರೈಯವರ ತಾಯಿ ಮಗನನ್ನು ಕರೆದು ಹತ್ತಿರ ಕುಳ್ಳಿರಿಸಿಕೊಂಡು ಒಂದು ಪ್ರಶ್ನೆ ಕೇಳಿದ್ದರು. ತಾಯಿ ಅಂದ್ರೆನೆ ಹಾಗೆನೇ 9 ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ ಮಗನ ಎಲ್ಲಾ ಕಷ್ಟಗಳಲ್ಲೂ ಪಾಲು ಪಡೆಯುವ ಏಕೈಕ ಜೀವ. ಅಶೋಕ್ ರೈಯವರಿಗೆ ತಾಯಿ ಅಂದ್ರೆನೇ ಅದೇನೋ ಪ್ರೀತಿ. ತಾಯಿಯನ್ನು ದೇವರಂತೆ ಕಾಣುವ ಮನುಷ್ಯ. ಪ್ರತಿಯೊಂದು ಕೆಲಸದ ಆರಂಭಕ್ಕೂ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಅಶೋಕ್ ರೈಯವರಿಗೆ ಅಂದು ತಾಯಿ ಏನು ಪ್ರಶ್ನೆ ಕೇಳುತ್ತಾರೆ ಎಂದು ಕುತೂಹಲವಿತ್ತು. ಮಗನನ್ನು ಹತ್ತಿರ ಕುಳ್ಳಿರಿಸಿಕೊಂಡ ತಾಯಿ ‘ನೋಡು ಮಗ ನಾವು ದೀಪಾವಳಿಗೆ ಕೊಡುವ ಈ ವಸ್ತ್ರದಾನಕ್ಕೆ ಆರಂಭದಲ್ಲಿ 26 ಜನ ಇದ್ದರು ಈಗ ಸಾವಿರಕ್ಕೆ ತಲುಪಿದೆ. ಇನ್ನು ಹೀಗೆ ಮುಂದುವರಿದರೆ ಲಕ್ಷ ಜನ ಬರಬಹುದು… ನಿನಗೆ ಅಷ್ಟೊಂದು ಜನರಿಗೆ ವಸ್ತ್ರದಾನ ಮಾಡಲು ಸಾಧ್ಯವಾ ಮಗ…’ ? ಎಂದು ಕೇಳಿಯೇ ಬಿಟ್ಟರು. ಒಂದು ಕ್ಷಣ ತಾಯಿಯ ಮುಖವನ್ನೇ ನೋಡಿದ ಅಶೋಕ್ ರೈಯವರು ತಾಯಿಯ ಕೈ ಹಿಡಿದುಕೊಂಡು ‘ಅಮ್ಮಾ ನನಗೆ ದೇವರು ಎಲ್ಲಿಯವರೆಗೆ ಶಕ್ತಿ ಕೊಡುತ್ತಾರೋ ಅಲ್ಲಿಯವರೆಗೇ ವಸ್ತ್ರದಾನ ಮಾಡಿಯೇ ಮಾಡುತ್ತೇನೆ.ನಿಮ್ಮ ಆಶೀರ್ವಾದ ಇರಲಿ’ ಎಂದು ಮಾತು ಕೊಟ್ಟೇ ಬಿಟ್ಟರು. ಅಂದು ತಾಯಿಗೆ ಕೊಟ್ಟ ಮಾತಿನಂತೆ ಇಂದು ಲಕ್ಷ ಜನ ಸೇರುತ್ತಿದ್ದಾರೆ ಅವರೆಲ್ಲರಿಗೂ ವಸ್ತ್ರದಾನ ಮಾಡುವ ಶಕ್ತಿಯನ್ನು ದೇವರು ಅಶೋಕ್ ರೈಯವರಿಗೆ ಕೊಟ್ಟಿದ್ದಾರೆ ಎಂದರೆ ಅದು ಅಮ್ಮನ ಆಶೀರ್ವಾದ, ದೇವರ ಅನುಗ್ರಹವಾಗಿದೆ.
ಸದಾ ಬಡವರ ಪರ ಮಿಡಿಯುವ ಹೃದಯ…
ಮೊದಲೇ ಹೇಳಿದಂತೆ ಶಾಸಕನಾಗುವ ಮೊದಲಿನ ಅಶೋಕ್ ರೈಗೂ ಈಗಿನ ಎಂಎಲ್‌ಎ ಅಶೋಕ್ ರೈಗೂ ಅಷ್ಟೇನೂ ವ್ಯತ್ಯಾಸ ಕಾಣುವುದಿಲ್ಲ ಏಕೆಂದರೆ ಅಶೋಕ್ ರೈಯವರದ್ದು ಸದಾ ಬಡವರ ಪರ ಮಿಡಿಯುವ ಹೃದಯವಾಗಿದೆ. ಬಹಳ ವರ್ಷಗಳಿಂದಲೇ ತನ್ನ ಟ್ರಸ್ಟ್ ಮೂಲಕ ಬಡವರ ಸೇವೆಯನ್ನು ಮಾಡುತ್ತಾ ಬಂದಿದ್ದರು. ಚಿಕಿತ್ಸೆಗೆ ಆರ್ಥಿಕ ಸಹಾಯ ಸೇರಿದಂತೆ ಅದೆಷ್ಟೋ ಮಂದಿಗೆ ಮನೆ ನಿರ್ಮಾಣಕ್ಕೆ ಬೇಕಾದ ಸಿಮೆಂಟ್,ಕಲ್ಲು,ಇಟ್ಟಿಗೆ, ಶೀಟು, ಪಕ್ಕಾಸು ಇತ್ಯಾದಿಗಳನ್ನು ಕೊಟ್ಟಿದ್ದಾರೆ. ಅವರೇ ಹೇಳುವಂತೆ 30 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ.ಕಷ್ಟ ಎಂದು ತನ್ನ ಹತ್ತಿರ ಬಂದ ಯಾರನ್ನೂ ಅವರು ಬರಿಗೈಯಲ್ಲಿ ಕಳುಹಿಸಿಕೊಟ್ಟ ಉದಾಹರಣೆಗಳಿಲ್ಲ, ಎಲ್ಲೋ ಒಂದು ಕಡೆ ಸಾವು ನೋವುಗಳಾದರೆ ಅಲ್ಲಿಗೆ ತೆರಳುವ ಅಶೋಕ್ ರೈಯವರು ತನ್ನ ಕೈಯಿಂದ ಸಾಧ್ಯವಾಗುವ ಒಂದು ಮೊತ್ತದ ಹಣವನ್ನು ಕೊಟ್ಟು ಸಾಂತ್ವನ ಹೇಳುವ ಹೃದಯವಂತರಾಗಿದ್ದಾರೆ.ಸದಾ ಬಡವರ ದೀನ ದಲಿತರ ಪರ ನಿಲ್ಲುವ ಇವರು ಅವರ ಕಷ್ಟಗಳನ್ನು ಹತ್ತಿರದಿಂದ ಕೇಳಿ ಅದಕ್ಕೊಂದು ಪರಿಹಾರವನ್ನು ಕೊಡುವ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅಶೋಕ್ ರೈಯವರು ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ.
25ರಿಂದ 1 ಲಕ್ಷದವರೇಗೆ…
ತುಳುನಾಡಿನ ಆಚಾರ ವಿಚಾರಗಳನ್ನು ತಿಳಿಯುತ್ತಾ ಹೋದರೆ ನಮಗೆ ಬಹಳಷ್ಟು ವಿಷಯಗಳು ತಿಳಿದುಬರುತ್ತವೆ ಅದರಲ್ಲಿ ದೀಪಾವಳಿ ಹಬ್ಬದ ದಿನ ವಸ್ತ್ರದಾನ ಕೂಡ ತುಳುನಾಡಿನ ಒಂದು ಸಂಸ್ಕೃತಿಯಾಗಿದೆ. ತುಳುವರು ದೀಪವಾಳಿಯನ್ನು ಮಾತ್ರ ಪರ್ಬೊ ಎಂದು ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಒಂದು ಮನೆ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದೀಪಾವಳಿ ದಿನ ಮನೆಯ ಅಥವಾ ಸಂಸ್ಥೆಯ ಮಾಲೀಕ ಹೊಸ ಬಟ್ಟೆಬರೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದರು. ಇಂದಿಗೂ ಈ ಸಂಸ್ಕೃತಿ ಉಳಿದುಕೊಂಡು ಬಂದಿದೆ. ಹಬ್ಬದ ದಿನ ತನ್ನ ಕಾರ್ಮಿಕರಿಗೆ ಪ್ರೀತಿಯಿಂದ ಬಟ್ಟೆಬರೆಗಳನ್ನು ಕೊಟ್ಟು ಪರ್ಬೊದ ಶುಭಾಶಯ ಹೇಳುವ ಸಂಸ್ಕೃತಿ ಇದಾಗಿದೆ. ಇದೇ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಅಶೋಕ್ ರೈಯವರು ತನ್ನ ಆರಂಭದ ದಿನಗಳಲ್ಲಿ ಕೇವಲ 25 ಮಂದಿ ತನ್ನದೇ ಮನೆಯ ಕಾರ್ಮಿಕರಿಗೆ ಬಟ್ಟಬರೆಗಳನ್ನು ಕೊಡುಗೆ ನೀಡುವ ಮೂಲಕ ಈ ವಸ್ತ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ನೂರು, ಇನ್ನೂರು ಹೀಗೆ ಜನರ ಸಂಖ್ಯೆ ಬೆಳೆಯುತ್ತಾ ಹೋಗಿದ್ದು ಕಳೆದ ವಸ್ತ್ರ 85 ಸಾವಿರ ಮಂದಿಗೆ ವಸ್ತ್ರದಾನ ಮಾಡಿದ್ದರು. ಈ ವರ್ಷ ಬರೋಬ್ಬರಿ 1 ಲಕ್ಷ ಮಂದಿಗೆ ವಸ್ತ್ರದಾನ ಮಾಡುವ ಉದ್ದೇಶವನ್ನು ರೈಯವರು ಇಟ್ಟುಕೊಂಡಿದ್ದಾರೆ.
ವಸ್ತ್ರದಾನಕ್ಕೆ 4 ಕೋಟಿ ರೂ. ಖರ್ಚು…!
ಇಷ್ಟೊಂದು ಮಂದಿಗೆ ವಸ್ತ್ರದಾನ ಮಾಡಬೇಕಾದರೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಮೊನ್ನೆ ಒಬ್ಬರು ಪಂಚಾಯತ್ ಅಧ್ಯಕ್ಷರಲ್ಲಿ ಈ ಬಗ್ಗೆ ಮಾತನಾಡಿದಾಗ ‘ಅಶೋಕ್ ರೈಯವರಿಗೆ ಏನು ಅವರಲ್ಲಿ ಬೇಕಾದಷ್ಟು ಹಣ ಇದೆ’ ಎಂದು ಹೇಳಿದರು. ಇದು ನಿಜವಿರಬಹುದು ಹಾಗಂತ ಕೋಟಿ ಇದ್ದವರೂ ಈ ಸಮಾಜದಲ್ಲಿ ಅದೆಷ್ಟೋ ಮಂದಿ ಇದ್ದಾರೆ. ಹಣ ಇದ್ದವರು ಎಲ್ಲರೂ ಅಶೋಕ್ ರೈ ಆಗಲು ಸಾಧ್ಯವಿಲ್ಲ ಇಲ್ಲಿ ಹಣಕ್ಕಿಂತಲೂ ‘ಕೈ ಎತ್ತಿ ಕೊಡುವ ಗುಣ’ ಮುಖ್ಯವಾಗುತ್ತದೆ. ಅಶೋಕ್ ರೈಯವರೇ ಹೇಳುವಂತೆ ಈ ವಸ್ತ್ರದಾನ ಕಾರ್ಯಕ್ರಮಕ್ಕೆ ಅವರಿಗೆ ಪ್ರತಿ ವರ್ಷ 4 ಕೋಟಿ ರೂಪಾಯಿ ಖರ್ಚು ತಗಲುತ್ತದೆ ಅಂತೆ. ಪ್ರತಿ ತಿಂಗಳು ಬರೋಬ್ಬರಿ 35 ಲಕ್ಷ ರೂಪಾಯಿ ವಸ್ತ್ರವಿತರಣಾ ಕಾರ್ಯಕ್ರಮಕ್ಕಂತಲೇ ಎತ್ತಿ ಇಡಬೇಕಾಗುತ್ತದೆ ಎನ್ನುತ್ತಾರೆ.ಯೋಚನೆ ಮಾಡಿ ಇಷ್ಟೊಂದು ಹಣವನ್ನು ಪ್ರತಿ ತಿಂಗಳು ಎತ್ತಿ ಇಟ್ಟು ದೀಪಾವಳಿಗೆ ವಸ್ತ್ರವಿತರಣಾ ಕಾರ್ಯಕ್ರಮದೊಂದಿಗೆ ಅದಷ್ಟೋ ಮಂದಿಗೆ ಅನ್ನದಾನ ನೀಡುತ್ತಾ ಬಂದಿದ್ದಾರೆ.
ಮುಗಿಸುವ ಮುನ್ನ…
ಶಾಸಕರಾದ ಬಳಿಕ ಅಶೋಕ್ ಕುಮಾರ್ ರೈಯವರನ್ನು ಗಮನಿಸುತ್ತಾ ಹೋದರೆ ಪುತ್ತೂರಿನ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಅಭಿವೃದ್ಧಿ ಪರ ಚಿಂತನೆಗಳನ್ನು ಇಟ್ಟುಕೊಂಡು ಮುನ್ನೆಡೆಯುವ ಇವರ ಎಲ್ಲಾ ಯೋಚನೆ, ಯೋಜನೆಗಳು ಕಾರ್ಯಗತವಾದರೆ ಬಹುಷಹ ಪುತ್ತೂರು ಜಿಲ್ಲೆಯಲ್ಲೇ ನಂಬರ್ 1 ತಾಲೂಕು ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಏನೇ ಆಗಲಿ ರಾಜಕೀಯವಾಗಿ ಅಶೋಕ್ ಕುಮಾರ್ ರೈಯವರಿಗೆ ತನ್ನದೇ ವರ್ಚಸ್ಸು ಇದ್ದರೆ ಸಾಮಾಜಿಕವಾಗಿ ಅವರು ಎವರ್‌ಗ್ರೀನ್ ನಾಯಕ.