ಸಹೋದರತ್ವ ಭಾವನೆಯಿದ್ದಲ್ಲಿ ದೇಶ ವಿಶ್ವಗುರು, ಶ್ರೀಮಂತ-ಅಶೋಕ್ ರೈ
ಪುತ್ತೂರು: ನಮ್ಮ ಬಾಲ್ಯ ಜೀವನವು ಹೇಗಿತ್ತು, ಈಗ ಹೇಗಿದೆ?. ನಮ್ಮ ಬಾಲ್ಯ ಜೀವನದಲ್ಲಿ ಎಲ್ಲರೂ ಪ್ರೀತಿಯಿಂದ, ಸಹೋದರತ್ವ ಭಾವನೆಯಿಂದ ಜೀವನ ಸಾಗಿಸುತ್ತಿದ್ದೇವು. ನಮ್ಮಲ್ಲಿ ಜಾತಿ-ಧರ್ಮದ ಭಾವನೆಯೇ ಇರಲಿಲ್ಲ. ಆದರೆ ಈಗ ಜನರ ಮನಸ್ಸಿನಲ್ಲಿ ಜಾತಿ-ಧರ್ಮದ ವಿಷಭೀಜವನ್ನು ರಾಜಕೀಯವಾಗಿ ಭಿತ್ತಿ ನಮ್ಮೊಳಗೆ ಬಡಿದಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ದೇಶ ವಿಶ್ಚಗುರುವಾಗಬೇಕಾದರೆ ಹಾಗೂ ಶ್ರೀಮಂತ ದೇಶ ಎನಿಸಿಕೊಳ್ಳಬೇಕಾದರೆ ಅಲ್ಲಿ ಪರಸ್ಪರ ಪ್ರೀತಿ, ಸಹೋದರತ್ವ ಭಾವನೆ, ಪರಸ್ಪರ ಕಣ್ಣೀರೊರೆಸುವ ಗುಣಗಳಿದ್ದಲ್ಲಿ ಮಾತ್ರ ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸೆ.24 ರಂದು ಸಂಜೆ ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ನಿರ್ಮಿಸಲ್ಪಟ್ಟ ನೂತನ ಬದ್ರಿಯಾ ರೆಸಿಡೆನ್ಸಿಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳಿಗೆ ಬಡವರೇ ಹೆಚ್ಚಾಗಿ ಸಹಕರಿಸುತ್ತಿರುವುದು ಶ್ರೀಮಂತರಲ್ಲಿ ಅಂತಹ ನಿರೀಕ್ಷೆ ಇಟ್ಟುಕೊಳ್ಳಲಾಗದು. ಮೊಟ್ಟೆತ್ತಡ್ಕ ಪ್ರದೇಶವು ಜಾತಿ-ಮತ-ಧರ್ಮ ಮರೆತು ಎಲ್ಲರೂ ಒಗ್ಗಟ್ಟಿನಲ್ಲಿ ಬಾಳುವ ಪ್ರದೇಶವಾಗಿದೆ ಮಾತ್ರವಲ್ಲ ಇದು ಹೀಗೆಯೇ ಮುಂದುವರೆಯಲಿ ಎಂದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮದ್ ಬಡಗನ್ನೂರು ಮಾತನಾಡಿ, ಜಾತ್ಯಾತೀತತೆಯ ವಿಚಾರಧಾರೆಗಳು ದೇಶದಲ್ಲಿ, ರಾಜ್ಯದಲ್ಲಿ ಆರಂಭವಾಗುತ್ತದೆಯೋ ಆವಾಗ ದೇಶ, ರಾಜ್ಯ ಅಭಿವೃದ್ಧಿ ಹೊಂದುತ್ತದೆ. ಯಾವುದೇ ಸರಕಾರಗಳು ಜಾತ್ಯಾತೀತತೆಯ ನೆಲೆಗಟ್ಟಿನಲ್ಲಿ ಬಂದಾಗ ಅಲ್ಲಿ ಮನುಷ್ಯನಿಗೆ ಅನ್ನ, ವಸತಿ, ಬದುಕಿಗೆ ವಾತಾವರಣ ಉತ್ತಮವಿರುತ್ತದೆ. ಹುಟ್ಟಿದ ಮನುಷ್ಯ ಒಂದು ದಿನ ಬಿಟ್ಟು ಹೋಗಬೇಕಾಗುತ್ತದೆ. ಆದರೆ ಹುಟ್ಟು-ಸಾವಿನ ಮಧ್ಯೆ ನಾವು ಪರಸ್ಪರ ಅನ್ಯೋನ್ಯತೆಯಿಂದ ಬಾಳುವುದೇ ಮುಖ್ಯವಾಗುತ್ತದೆ ಎಂದರು.
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿರವರು 30 ವರ್ಷದ ಹಿಂದೆ ಈ ಭಾಗದಲ್ಲಿ ಮಂಡಲ ಪ್ರಧಾನರಾಗಿದ್ದ ಸಂದರ್ಭದಲ್ಲಿ ನನ್ನ ರಾಜಕೀಯ ಜೀವನ ಆರಂಭವಾಗಿತ್ತು. ಗುಡ್ಡಕಾಡಿನ ಪ್ರದೇಶವಾಗಿರುವ ಈ ಮೊಟ್ಟೆತ್ತಡ್ಕ ಪ್ರದೇಶವು ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿತ್ತು. ಈ ಭಾಗದಲ್ಲಿನ ಮಸೀದಿ ಕೂಡ ಸಾಕಷ್ಟು ಎಡರು-ತೊಡರುಗಳನ್ನು ದಾಟಿ ಬಂದಿರುತ್ತದೆ. ಪ್ರತಿ ಮಸೀದಿಯಲ್ಲಿ ಏನಾದರೂ ಸಮಸ್ಯೆ ಗೊಂದಲ ಇದೆ ನಿಜ. ಆದರೆ ಈ ಮಸೀದಿಯಲ್ಲಿ ಯಾವುದೇ ಸಮಸ್ಯೆ, ಗೊಂದಲಗಳಿಲ್ಲದೆ ಎಲ್ಲರೂ ಅಭಿವೃದ್ಧಿಯತ್ತ ಕೈಜೋಡಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಉಚಿತ ಕರೆಂಟ್, ಮಹಿಳೆಯರಿಗೆ ರೂ.2000, ಉಚಿತ ಬಸ್, ಉಚಿತ ಅಕ್ಕಿ ಯೋಜನೆ ಎಲ್ಲರಿಗೂ ನೀಡುತ್ತಿದೆ ಎಂದರು.
ಮೊಟ್ಟೆತ್ತಡ್ಕ ಖತೀಬರಾದ ಉಸ್ತಾದ್ ಅಬ್ಬಾಸ್ ಮದನಿ ಮಾತನಾಡಿ, ಕುಂಬೋಳ್ ಮನೆತನದ ಸುಪುತ್ರರಾದ ಅಸಯ್ಯದ್ ಆಲೀ ತಂಙಳ್ ರವರ ಪವಿತ್ರ ಹಸ್ತದಿಂದ ಮಸೀದಿಯ ರೆಸಿಡೆನ್ಸಿ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿಯಾಗಿದೆ. ಬದ್ರಿಯಾ ಜುಮಾ ಮಸೀದಿಯು ಸರ್ವರ ಸಹಕಾರದಿಂದ ಬೆಳೆಯುತ್ತಾ ಬರುವುದು ಶ್ಲಾಘನೀಯ ಎಂದರು.
ಗೌರವಾರ್ಪಣೆ:
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಉದ್ಘಾಟನೆ ನೆರವೇರಿಸಿದ ಕುಂಬೋಳ್ ಮನೆತನದ ಅಸಯ್ಯದ್ ಆಲೀ ತಂಙಳ್, ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಜಮಾಲುದ್ದೀನ್ ಸಂಪ್ಯ, ಪಿ.ಎಂ ಹನೀಫ್, ಅಝೀಜ್ ಹಾಜಿ, ಮಸೀದಿಯ ಜಾಗಕ್ಕೆ ಶ್ರಮಿಸಿದ ಉಸ್ತಾದ್ ಇಸ್ಮಾಯಿಲ್ ಮದನಿ, ಮುಕ್ರಂಪಾಡಿ ಖತೀಬ್ ಸಿದ್ಧೀಕ್ ಫೈಝಿ, ಮೊಟ್ಟೆತ್ತಡ್ಕದ ಅಪತ್ಭಾಂದವ ಅಬ್ದುಲ್ಲ ಕೆ.ರವರುಗಳನ್ನು ಗುರುತಿಸಿ ಶಾಲು ಹೊದಿಸುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಕೂರ್ನಡ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ದರ್ಬೆ ಮಸೀದಿಯ ಖತೀಬ್ ಅಬ್ದುಲ್ ಕರೀಮ್ ದಾರಿಮಿ, ಮೊಟ್ಟೆತ್ತಡ್ಕ ಮಸೀದಿಯ ಖತೀಬ್ ಅಬ್ಬಾಸ್ ಮದನಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಇಸ್ಮಾಯಿಲ್ ಮದನಿ ಕಂಬಳಬೆಟ್ಟು, ಮೊಹಮದ್ ಸಾಬ್ ಕೂರ್ನಡ್ಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಿಕ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಇಂಟರ್ ಲಾಕ್, ದಫನ ಭೂಮಿಗೆ ಆವರಣ ಗೋಡೆ ನಿರ್ಮಿಸುವಂತೆ ಶಾಸಕರಿಗೆ ಮನವಿ..
ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ವ್ಯಾಪ್ತಿಯಲ್ಲಿ ಸುಮಾರು 145 ಮನೆಗಳಿದ್ದು ಇದರಲ್ಲಿ 130 ಮನೆಗಳು ಬಡ ಕುಟುಂಬವಾಗಿರುತ್ತದೆ. ಮಸೀದಿಗೆ ಉಸ್ತಾದರ ಸಂಬಳ, ವಿದ್ಯುತ್ ವೆಚ್ಚ ಹಾಗೂ ಇನ್ನಿತರ ಖರ್ಚು ಸೇರಿದಂತೆ ತಿಂಗಳಿಗೆ 70- 80 ಸಾವಿರ ಖರ್ಚು ಬರುತ್ತದೆ. ಇದೀಗ ಸರ್ವರ ಸಹಕಾರದಿಂದ ನಾಲ್ಕು ಮನೆಗಳುಳ್ಳ ರೆಸಿಡೆನ್ಸಿ ಉದ್ಘಾಟನೆಗೊಂಡಿದ್ದು ಇದರಿಂದ ತಿಂಗಳ ಖರ್ಚು ಸ್ವಲ್ಪದರ ಮಟ್ಟಿಗೆ ಸರಿದೂಗಿಸಬಹುದಾಗಿದೆ. ಮಸೀದಿ ಸಮೀಪ ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈಯವರ ನೇತೃತ್ವದಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲು ಪರ್ಮಿಶನ್ ದೊರೆತಿದ್ದು ಮುಂದಿನ ದಿನಗಳಲ್ಲಿ ಮಸೀದಿಯ ಆವರಣಕ್ಕೆ ಇಂಟರ್ ಲಾಕ್, ಮಸೀದಿಯಿಂದ ಎರಡು ಕಿ.ಮೀ ದೂರವಿರುವ ಅಮ್ಮುಂಜ ಇಲ್ಲಿನ ದಫನ ಭೂಮಿಯ ಸುತ್ತಲೂ ಆವರಣ ಗೋಡೆಯ ನಿರ್ಮಾಣದ ಅಗತ್ಯವಿದ್ದು ಇದನ್ನು ಸರಕಾರದ ವತಿಯಿಂದ ಮಾಡಿಕೊಡಬೇಕು ಅನ್ನುವುದೇ ಶಾಸಕರಲ್ಲಿ ನಮ್ಮ ಮನವಿಯಾಗಿದೆ.
-ಅಬೂಬಕ್ಕರ್ ಕೂರ್ನಡ್ಕ, ಅಧ್ಯಕ್ಷರು,
-ಅನ್ವರ್ ಸಾದಿಕ್ ಮುಸ್ಲಿಯಾರ್, ಪ್ರ. ಕಾರ್ಯದರ್ಶಿ
ಬದ್ರಿಯಾ ಜುಮಾ ಮಸೀದಿ, ಮೊಟ್ಟೆತ್ತಡ್ಕ
ಮನವಿಗೆ ಸ್ಪಂದಿಸಲಿದ್ದೇನೆ..
ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ಮಸೀದಿಗೆ ಇಂಟರ್ ಲಾಕ್ ಅಳವಡಿಸುವ ಕುರಿತು ಸಲ್ಲಿಸಿದ ಮನವಿ ಸರಕಾರದ ಅನುಮೋದನೆಗೆ ಕಳಿಸಲಾಗಿದೆ. ಮಸೀದಿಯ ದಫನ ಭೂಮಿಗೆ ಆವರಣ ಗೋಡೆ ನಿರ್ಮಾಣ ಕುರಿತು ಆವರಣ ಗೋಡೆ ಹಾಗೂ ಇನ್ನಿತರ ಕೆಲಸ ಕಾರ್ಯಗಳ ಕುರಿತು ಎಸ್ಟಿಮೇಟ್ ಬಿಲ್ ತಯಾರಿಸಿ ಅದನ್ನು ಮಂಗಳೂರಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಬಳಿಕ ಶಾಸಕರ ಕಚೇರಿಯಲ್ಲಿ ಕೊಡಿ. ಮುಂದಿನ ದಿನಗಳಲ್ಲಿ ನಿಮ್ಮ ಮನವಿಯ ಬಗ್ಗೆ ಸ್ಪಂದಿಸಲಿದ್ದೇನೆ ಎಂದರು.
ಒಗ್ಗಟ್ಟಿನಿಂದ ಬಾಳಿದರೆ ಸಂಸ್ಥೆ, ಜಮಾಹತನ್ನು ಮುನ್ನೆಡೆಸಲು ಸಾಧ್ಯ…
ಎಲ್ಲರೂ ಒಗ್ಗಟ್ಟಿನಿಂದ ಬಾಳಿದರೆ ಮಾತ್ರ ಒಂದು ಸಂಸ್ಥೆಯನ್ನು, ಜಮಾಅತನ್ನು ಮುನ್ನೆಡೆಸಲಿಕ್ಕೆ ಸಾದ್ಯವಾಗುತ್ತದೆ. ಊರವರ ಸಹಕಾರ, ಸಹಾಯದಿಂದ ರೆಸಿಡೆನ್ಸಿಯನ್ನು ನಿರ್ಮಿಸಿರುವುದು ಸಂತೋಷದ ವಿಚಾರವಾಗಿದ್ದು ಈ ನಿಟ್ಟಿನಲ್ಲಿ ಕೈಜೋಡಿಸಿದ ಪ್ರತಿಯೋರ್ವರಿಗೂ ಅಲ್ಲಾಹ ದೇವರು ಆಶೀರ್ವಾದವನ್ನು ಕರುಣಿಸಲಿ.
-ಅಸಯ್ಯದ್ ಆಲೀ ತಂಙಳ್,
(ರೆಸಿಡೆನ್ಸಿ ಉದ್ಘಾಟಕರು)ಕುಂಬೋಳ್ ಮನೆತನದ ಸುಪುತ್ರರು