ವಿಟ್ಲದಲ್ಲಿ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ

0

ಜನ್ಯ ಪ್ರಕರಣಕ್ಕೊಂದು ಅಂತ್ಯ ಹಾಡುವವರೆಗೆ ಹೋರಾಟ ಮುಂದುವರೆಯಲಿದೆ: ಮಹೇಶ್ ಶೆಟ್ಟಿ ತಿಮರೋಡಿ

ವಿಟ್ಲ: ಸೌಜನ್ಯಳಲ್ಲಿ ಧರ್ಮವನ್ನು ಕಾಣುತ್ತಿದ್ದೇವೆ. ಸೌಜನ್ಯಳ ಶಕ್ತಿಯ ರಕ್ಷಣೆ ನಮಗಿದೆ. ಸತ್ಯವಿಲ್ಲದ ಹೋರಾಟ ಇದಲ್ಲ. ಸರಕಾರ ಮರು ತನಿಖೆಗೆ ಆದೇಶ ಮಾಡುವ ಅಗತ್ಯವಿದೆ. ಪ್ರಕರಣದಲ್ಲಿ ಭಾಗಿಯಾದವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ತುಳಿದಷ್ಟು ಮೇಲೇಳುವ ವ್ಯಕ್ತಿ ನಾನು. ಶಾಂತಿಯನ್ನು ಕ್ರಾಂತಿ ಮಾಡಲು ಅವಕಾಶ ಕೊಡಬೇಡಿ ಎಂದು ಸೌಜನ್ಯ ನ್ಯಾಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.


ಅವರು ಸೆ.24ರಂದು ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವಿಟ್ಲ ಇದರ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಸಮಾಜಕ್ಕೆ ಧರ್ಮವನ್ನು ಕೊಟ್ಟೇ ಕೊಡುತ್ತೇನೆ. ಈ ಹೋರಾಟ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ನ್ಯಾಯಾಂಗದಲ್ಲಿ ಉನ್ನತ ಮಟ್ಟದ ಹಿರಿಯ ಜಡ್ಜ್ ಗಳನ್ನು ನೇಮಕ ಮಾಡಿ ಆ ಮುಖಾಂತರ ತನಿಖೆ ನಡೆಯಲಿ. ಸೌಜನ್ಯ ಪ್ರಕರಣಕ್ಕೊಂದು ನಾಂದಿ ಹಾಡುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಧರ್ಮದ ಉಳಿವಿಗೆ ನಮ್ಮ ಈ ಹೋರಾಟ. ಪ್ರಕರಣದಲ್ಲಿ ಸತ್ಯವಿಲ್ಲದೇ ಹೋದಲ್ಲಿ ಹೋರಾಟ ಮಾಡಲು ಮುಂದಾದಾಗ ನ್ಯಾಯದೇವತೆ ಶಿಕ್ಷಿಸುವ ಕಾರ್ಯ ಮಾಡಬೇಕಿತ್ತು. ವಿಟ್ನೆಸ್ ನೀಡುವ ಕಾರ್ಯವನ್ನು ಮುಂದಿನ ದಿನದಲ್ಲಿ ನಡೆಯಲಿದೆ. ನ್ಯಾಯಾಲಯಕ್ಕೆ ಹೋಗದೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು, ರಸ್ತೆಯಲ್ಲಿ ಜನರನ್ನು ಒಟ್ಟು ಸೇರಿಸಿ ನ್ಯಾಯ ಭಿಕ್ಷೆ ಕೇಳಲಾಗುವುದು. ನಮ್ಮ ಸತ್ಯದ ಹೋರಾಟಕ್ಕೆ ಜಯ ಸಿಗಲಿರುವ ದಿನ ಇನ್ನು ದೂರವಿಲ್ಲ ಎಂದರು.


ದೈವ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ ಅನ್ಯಾಯದ ವಿರುದ್ದ ಹೋರಾಟ ಮಾಡುವ ಪರಿಸ್ಥಿತಿ ನಮ್ಮದಾಗಿದೆ. ಕಾಲು ಮಂಡಲದಲ್ಲಿ ಸತ್ಯ ಹೊರಬೀಳುವ ವಿಶ್ವಾಸ ನಮಗಿದೆ. ಸತ್ಯದ ಉತ್ತರದ ನಿರೀಕ್ಷೆ ನಮ್ಮಲ್ಲಿದೆ. ಅನ್ಯಾಯವನ್ನು ಸಹಿಸುವ ಪ್ರಶ್ನೇಯೇ ಇಲ್ಲ. ಸ್ತ್ರಿಶಕ್ತಿ ಎಂದರೆ ತುಳುನಾಡನ್ನು ಉಳಿಸಿದ ಶಕ್ತಿ. ಸೌಜನ್ಯಳನ್ನು ಭಾವನೆಯಲ್ಲಿ ನಿಮ್ಮ ಮನೆಮಗಳನ್ನಾಗಿ ಕಾಣಿರಿ. ಭಾವನೆಗೆ ಬೆಲೆ ಕೊಡುವ ಕೆಲಸವಾಗಬೇಕು. ದೈವಾರಾಧನೆಯ ಪ್ರಕಾರ ಯಾವುದೇ ಸಾಕ್ಷ್ಯ ನಾಶವಾಗಿಲ್ಲ. ನ್ಯಾಯಾಲಯದಲ್ಲಿ ಸಿಗದ ನ್ಯಾಯ ದೈವದ ಮುಂದೆ ಲಭಿಸಿದೆ. ಮಲರಾಯಿಯ ನಡೆಯಲ್ಲಿ ತೀರ್ಮಾನ ಸಿಗಬಹುದು ಎಂಬ ನಂಬಿಕೆಯಿಂದ ವಿಟ್ಲಕ್ಕೆ ಬಂದಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಕಾರ್ಯ ಸರಿಯಲ್ಲ. ರಾಜಕೀಯ ವ್ಯಕ್ತಿಗಳ ನಿಲುವಿನಲ್ಲಿ ಸ್ಪಷ್ಟತೆ ಇರಬೇಕು.ನಾವಿಂದು ಆಲೋಚನೆ ಮಾಡಬೇಕಾಗ ಕಾಲಘಟ್ಟವಿದೆ. ಸೋಲು ಗೆಲುವಿನ ಲೆಕ್ಕಚಾರ ಆಗುವ ದಿನ ಸನ್ನಿಹಿತವಾಗುತ್ತಿದೆ ಎಂದರು.


ನ್ಯಾಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾತನಾಡಿ ಎಲ್ಲರಲ್ಲಿಯೂ ಹೋರಾಟದ ಕಿಚ್ಚನ್ನು ಹಚ್ಚಿದವರು ಮಹೇಶ್ ಶೆಟ್ಟಿಯವರು. ನ್ಯಾಯಕೇಳಿದ ವಿಚಾರಕ್ಕೆ ಹೈಕೋರ್ಟ್ ನಲ್ಲಿ ಪಿಟಿಶನ್ ಕೊಟ್ಟಿದ್ದಾರೆ. ಬೀದಿ ಹೋರಾಟಗಳನ್ನು ಮಾಡುತ್ತಿರುವ ಕಾರಣ ಎಲ್ಲರಿಗೆ ಧೈರ್ಯ ಬಂದಿದೆ ಮತ್ತು ಹೆಣಗಳು ಬೀಳುವುದು ಕಡಿಮೆಯಾಗಿದೆ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ, ಸತ್ಯವಾಗಲು ಸಾಧ್ಯವಿಲ್ಲ. ಈ ಹೋರಾಟ ಸರ್ಕಾರಗಳ ವಿರುದ್ಧವಲ್ಲ, ನ್ಯಾಯಕ್ಕಾಗಿ ಮಾತ್ರವಾಗಿದೆ. ತನಿಖೆ ಆರಂಭವಾದರೆ ಕಛೇರಿಯ ಮುಂದೆ ಸಾಕ್ಷ್ಯಗಳು ಕ್ಯೂನಲ್ಲಿ ನಿಲ್ಲುತ್ತಾರೆ. ಮುಂದಿನ ದಿನ ಪತ್ರ ಚಳುವಳಿಯನ್ನು ಆರಂಭಿಸುವ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಬೇಕು. ಅನ್ಯಾಯಕ್ಕೆ ಒಳಗಾದವರ ನ್ಯಾಯಕ್ಕಾಗಿ ಈ ಹೋರಾಟ. ಸೌಜನ್ಯ ಪ್ರಕರಣದಲ್ಲಿ ಸಾಕ್ಷಿ ನಾಶ ಆರಂಭದಲ್ಲೇ ನಡೆದಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕು. ಅವರು ಹೆಣೆದ ಬಲಿಯಲ್ಲೇ ಅವರು ಸಿಕ್ಕಿಹಾಕಿಕೊಳ್ಳಲಿದ್ದಾರೆ. ಇಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದರು.

ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬ ಸೆರಗೊಡ್ಡಿ ನ್ಯಾಯಕ್ಕಾಗಿ ಎಲ್ಲರ ಸಹಕಾರ ಬೇಡಿದರು. ವಿವಿಧ ಸಂಘಟನೆಗಳ ಸಹಕಾರದಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆಯ ಬಳಿಯಿಂದ ವಿಟ್ಲ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, ಹಿರಿಯರಾದ ವೀರಪ್ಪ ಗೌಡ ರಾಯರಬೆಟ್ಟು, ಉದ್ಯಮಿ ಸುರೇಶ್ ಶೆಟ್ಟಿ ಮುಂಬಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಂದರ ಇಂದ್ರಪಡ್ಪು ಪ್ರಾರ್ಥಿಸಿದರು. ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೆಂಞಂತಿಮ್ಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೇತನ್ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here