ಚಿಕ್ಕಮುಡ್ನೂರು 2ನೇ ವಾರ್ಡ್‌ನಲ್ಲಿ ಸ್ವಚ್ಚತೆ

0

ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿಯ ಅಂಗವಾಗಿ ಅ.1ರಂದು ದೇಶದಾದ್ಯಂತ ಒಂದು ಗಂಟೆಕಾಲ ಸ್ವಚ್ಚತೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದು ನಗರ ಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು 2ನೇ ವಾರ್ಡ್‌ನ ಕೃಷ್ಣನಗರದಲ್ಲಿ ಸದಸ್ಯ ಸುಂದರ ಪೂಜಾರಿ ಬಡಾವು ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕೃಷ್ಣನಗರ ಶಾಲಾ ಬಳಿಯಿಂದ ಪ್ರಾರಂಭಗೊಂಡ ಸ್ವಚ್ಚತೆಗೆ ಪೌರಾಯುಕ್ತ ಮಧು ಎಸ್ ಮನೋಹರ್ ಚಾಲನೆ ನೀಡಿದರು. ಬಳಿಕ ಶಾಲಾ ಪರಿಸರ, ಮೈದಾನ, ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸೇರಿದಂತೆ ಹಲವು ಕಡೆಗಳಲ್ಲಿ ಕಸಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದರು.
ಚಾಲನೆ ನೀಡಿದ ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಸ್ವಚ್ಚತೆಯಲ್ಲಿ 36ನೇ ಸ್ಥಾನದಲ್ಲಿದ್ದ ನಗರ ಸಭೆ ಈಗ ಮೂರನೇ ಸ್ಥಾನದಲ್ಲಿದೆ. ಜನತೆ ನಮ್ಮೊಂದಿಗೆ ಕೈಜೋಡಿಸಿದರೆ ನಗರ ಸಭೆಯು ಪ್ರಥಮ ಸ್ಥಾನ ಪಡೆಯಲಿದೆ. ತ್ಯಾಜ್ಯ ವಿಲೇವಾರಿಗೆ ನಗರ ಸಭೆಯಿಂದ ಹಲವು ಯೋಜನೆಗಳನ್ನು ಕೈಗೊಂಡಿದ್ದು ಇದರ ಮೂಲಕ ನಗರವನ್ನು ತ್ಯಾಜ್ಯಮುಕ್ತ, ಸ್ವಚ್ಚ ಸುಂದರ ಹಾಗೂ ಮಾದರಿ ನಗರವನ್ನಾಗಿ ಮಾಡಲು ಸಾಧ್ಯವಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ನಗರ ಸಭಾ ಸದಸ್ಯರ ಲೀಲಾವತಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ, ಮುಖ್ಯಗುರು ಮರಿಯಮ್ಮ, ಶಿಕ್ಷಕರು, ಹಿರಿಯರಾದ ಬಿ.ಎನ್ ಹೆಗ್ಡೆ, ಆರೋಗ್ಯ ನಿರೀಕ್ಷಕಿ ವರುಣಾಕ್ಷಿ, ನಗರ ಸಭಾ ಪೌರಕಾರ್ಮಿಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here