ಉಪ್ಪಿನಂಗಡಿ: ಭಾಷಣ, ದೇಶ ಭಕ್ತಿ ಗೀತಾ ಸ್ಪರ್ಧೆ ಉದ್ಘಾಟನೆ

0

ಉಪ್ಪಿನಂಗಡಿ: ಪ್ರತಿಯೋರ್ವ ವ್ಯಕ್ತಿಯಲ್ಲೂ ಒಂದಲ್ಲ ಒಂದು ಬಗೆಯ ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸೂಕ್ತ ವೇದಿಕೆಯ ಅಗತ್ಯತೆ ಇದೆ. ಅಂತಹ ವೇದಿಕೆಯನ್ನು ಒದಗಿಸುವ ಮೂಲಕ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಸೈಂಟ್ ಮೇರೀಸ್ ಶಾಲಾ ಸಂಚಾಲಕ ಅಬೆಲ್ ಲೋಬೋ ತಿಳಿಸಿದರು.


ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯುತ್ತಿರುವ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಆದಿತ್ಯವಾರದಂದು ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ಆಯೋಜಿಸಲ್ಪಟ್ಟ ಭಾಷಣ ಸ್ಪರ್ಧೆ- ದೇಶ ಭಕ್ತಿ ಗೀತಾ ಗಾಯನ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಅನುರಾಧ ಆರ್. ಶೆಟ್ಟಿ , ಪುಸ್ತಕ ಓದುವ ಅಭ್ಯಾಸವು ವ್ಯಕ್ತಿಯನ್ನು ಸಮಾಜಕ್ಕೆ ಸಂಪತ್ತಾಗಿ ರೂಪುಗೊಳಿಸುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ರವರ ಪ್ರಯತ್ನ ಶ್ಲಾಘನೀಯವೆಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ವಲಯ ಸೇನಾನಿ ರವೀಂದ್ರ ದರ್ಬೆ ಮಾತನಾಡಿ, ಇಂದು ಎಳೆಯ ಮಕ್ಕಳು ಅಂತರ್ಜಾಲದ ಮಾಯಾ ಬಲೆಯೊಳಗೆ ಸಿಲುಕಿ ಬದುಕನ್ನು ದುರ್ಬಲಗೊಳಿಸುತ್ತಿರುವ ಈ ಸಮಯದಲ್ಲಿ ಪುಸ್ತಕದ ಓದುವಿಕೆಯೇ ಬದುಕಿಗೆ ಭರವಸೆಯ ಬೆಳಕು ಮೂಡಿಸಲು ಸಾಧ್ಯ. ಅದಕ್ಕಾಗಿ ಜ್ಞಾನ ದಾಹ ನೀಗಿಸಲು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಪುಸ್ತಕದತ್ತ ಚಿತ್ತ ವಿರಿಸಿ ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಸಾಪದ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ. ಸರ್ವೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂಗ್ವೆ ವಿಶ್ವನಾಥ ಶೆಟ್ಟಿ, ಅಜೀಜ್ ಬಸ್ತಿಕಾರ್, ಅಬ್ದುಲ್ ರಹಿಮಾನ್ ಯೂನಿಕ್, ಶಾಂತಾ ಕುಂಟಿನಿ, ಸ್ವರ್ಣೇಶ್ ಗಾಣಿಗ, ನಝೀರ್ ಮಠ , ಇಕ್ಬಾಲ್ ಮತ್ತಿತರರು ಭಾಗವಹಿಸಿದ್ದರು.


ರೋಟರಿ ನಿಕಟಪೂರ್ವಾಧ್ಯಕ್ಷ ಜಗದೀಶ್ ನಾಯಕ್ ಸ್ವಾಗತಿಸಿದರು. ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಕಾರ್ಯದರ್ಶಿ ಆಶಾಲತಾ ನಾಯಕ್ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ನವೀನ್ ಬ್ರಾಗ್ಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here