ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 19ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಹಾಗೂ ಆರೋಗ್ಯ ರಕ್ಷಾ ಸಮಿತಿ ಸಂಪ್ಯ ಇದರ ಆಶ್ರಯದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರದ 19ನೇ ತಿಂಗಳ ವೈದ್ಯಕೀಯ ಶಿಬಿರವು ಅ.1ರಂದು ನಡೆಯಿತು.


ಶಿಬಿರವನ್ನು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ನಮ್ಮ ಸಾಧನೆಗೆ ಆರೋಗ್ಯ ಮುಖ್ಯ. ಮನಸ್ಸು ಉತ್ತಮ ವಾಗಿರಬೇಕು. ಶುದ್ದ ಗಾಳಿ, ನೀರು ಆರೋಗ್ಯಕ್ಕೆ ಮುಖ್ಯವಾಗಿದ್ದು ಪ್ರಕೃತಿಯನ್ನು ನಾವು ಉಳಿಸಬೇಕು. ಪ್ರಕೃತಿ ಉಳಿಸಲು ನಿರ್ಮಲ ಮನಸ್ಸು ನಮ್ಮಲ್ಲಿರಬೇಕು ಎಂದರು. ದೇವಸ್ಥಾನದಲ್ಲಿ ನಡೆಯುವ ಉಚಿತ ವೈದ್ಯಕೀಯ ಸೇವೆ ಈ ಭಾಗಕ್ಕೆ ದೊಡ್ಡ ಕೊಡುಗೆ. ಇಂತಹ ಸೇವೆ ತಾಲೂಕಿನಲ್ಲಿ ಕಾಣಲು ಸಾಧ್ಯವಿಲ್ಲ. ಜನರಿಗೆ ನೀಡುವ ನಿಸ್ವಾರ್ಥವಾದ ಜನರ ಸೇವೆಯೇ ಜೀವನದ ದೊಡ್ಡ ಸಾಧನೆಯಾಗಿದೆ ಎಂದರು.


ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯ ಮಾತನಾಡಿ, ಆರೋಗ್ಯ ಇಲಾಖೆಯ ಸೌಲಭ್ಯಗಳು, ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ನಿರಂತರವಾಗಿ ನಡೆಯುವ ಆರೋಗ್ಯ ಶಿಬಿರಕ್ಕೆ ಎಲ್ಲರ ಸಹಕಾರ ದೊರೆಯುತ್ತಿದೆ. ಹಿರಿಯ ವೈದ್ಯರ ಜೊತೆಗೆ ಯುವ ವೈದ್ಯರು ಶಿಬಿರದ ಯಶಸ್ಸಿಗೆ ಸಹಕಾರ ನೀಡುತ್ತಿರುವುದನ್ನು ಸ್ಮರಿಸಿದರು.


ವೈದ್ಯರಾದ ಡಾ.ರಾಮ್ ಕಿರಣ್, ಡಾ.ಈಶ್ವರ್‌ಕೀರ್ತಿ, ಶ್ರಾವ್ಯ, ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಮುಕ್ರಂಪಾಡಿ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ, ಮೊಟ್ಟೆತ್ತಡ್ಕ ಐಕ್ಯಕಲಾ ಟ್ರಸ್ಟ್‌ನ ಅಧ್ಯಕ್ಷ ಚೇತನ್ ಮೊಟ್ಟೆತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಲಕ್ಷ್ಮೀ ಶಗ್ರಿತ್ತಾಯ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.


ಯುವಕ ಮಂಡಲದಿಂದ ದೀಪ ಕೊಡುಗೆ:
ಇತ್ತೀಚೆಗೆ ನಿಧನರಾದ ನವಚೇತನಾ ಯುವಕ ಮಂಡಲ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥವಾಗಿ ಯುವಕ ಮಂಡಲದ ವತಿಯಿಂದ ದೇವಸ್ಥಾನಕ್ಕೆ ಕಾಲು ದೀಪವನ್ನು ಕೊಡುಗೆ ನೀಡಿದರು.


ಸಾಮಾನ್ಯ ವೈದ್ಯಕೀಯ ತಪಾಸಣೆ, ಮಕ್ಕಳ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ, ಔಷಧಿಗಳ ವಿತರಣೆ ನಡೆಯಿತು. ತಜ್ಞ ವೈದ್ಯರುಗಳಾದ ಡಾ.ಸುರೇಶ್ ಪುತ್ತೂರಾಯ, ಡಾ.ಮಂಜುನಾಥ ಶೆಟ್ಟಿ, ಡಾ.ಸಾಯಿ ಪ್ರಕಾಶ್, ಡಾ.ರಾಮ್‌ಕಿರಣ್, ಡಾ.ಈಶ್ವರಕೀರ್ತಿ, ಡಾ.ಶ್ರಾವ್ಯ ಹಾಗೂ ಡಾ. ಭವ್ಯ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 180ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಬಾರಿಯ ಶಿಬಿರದಲ್ಲಿ ವಿಶೇಷವಾಗಿ ತಿಂಗಳಾಡಿಯ ಆರೋಗ್ಯ ಕೇಂದ್ರದ ವತಿಯಿಂದ ಆಬಾ ಕಾರ್ಡ್ ನೋಂದಣಿಯನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು.
ಸಂಪ್ಯ ನವಚೇತನ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪುತ್ತಿಲ ಪರಿವಾರ ಆರ್ಯಾಪು ಘಟಕ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧಿ ಕಂಪೆನಿಗಳ ಮತ್ತು ಭಕ್ತಾದಿಗಳು ಶಿಬಿರದ ಯಶಸ್ಸಿನಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here