ಪೊರಕೆ ಹಿಡಿದು ಸ್ವಚ್ಛತೆಯಲ್ಲಿ ಪಾಲ್ಗೊಂಡ ನ್ಯಾಯಾಧೀಶರು, ಸಿಬ್ಬಂದಿಗಳು,ನ್ಯಾಯವಾದಿಗಳು
ತೋರಿಕೆ ಸ್ವಚ್ಛತೆಗಿಂತ ನಮ್ಮ ಮನಸ್ಸಿನ ಕಸ ತೆಗೆಯುವ ಕೆಲಸವಾಗಬೇಕು-ಪ್ರಿಯಾ ರವಿ ಜೊಗ್ಲೇಕರ್
ಪುತ್ತೂರು: ಸ್ವಚ್ಛತೆ ತೋರಿಕೆಯಾಗಬಾರದು. ಇಂತಹ ತೋರಿಕೆಯ ಮನೋಭಾವವನ್ನು ತೆಗೆಯಲು ನಮ್ಮ ಮನಸ್ಸನ್ನು ಸಕಾರಾತ್ಮಕ ಚಿಂತನೆಯ ಕಡೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ನಮ್ಮ ಮನಸ್ಸಿನ ಕಸ ತೆಗೆಯುವ ಕೆಲಸವೂ ಆಗಬೇಕೆಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಪ್ರಿಯಾ ರವಿ ಜೊಗ್ಲೇಕರ್ ಹೇಳಿದರು.
ಪುತ್ತೂರು ನ್ಯಾಯಾಲಯದ ವಠಾರದಲ್ಲಿ ಅ.2ರಂದು ನಡೆದ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಭಾವ ಚಿತ್ರದ ಎದುರು ಊದುಗಟ್ಟಿ ಹಚ್ಚಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನಮ್ಮಲ್ಲಿನ ದ್ವೇಷ, ಅಸೂಯೆ, ಮದ, ಮತ್ಸರವನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಒಂದೇ ಮನೋಭಾವನೆಯಿಂದಿರಬೇಕು. ಗಾಂಧಿ ಜಯಂತಿಯಂದು ಶ್ರಮದಾನಕ್ಕೆ ತೋರಿಸುವ ಉತ್ಸುಕತೆ ಪ್ರತಿ ದಿನವೂ ಇರಲಿ ಎಂದರು.
ಸ್ವಚ್ಛತಾ ಕಾರ್ಯ: ಕಾರ್ಯಕ್ರಮದ ಬಳಿಕ ನ್ಯಾಯಾಧೀಶರುಗಳು, ಸಿಬ್ಬಂದಿಗಳು ಮತ್ತು ನ್ಯಾಯವಾದಿಗಳು ಪೊರಕೆ ಹಿಡಿದು ನ್ಯಾಯಾಲಯದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಅರ್ಚನಾ ಕೆ ಉನ್ನಿತಾನ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಯೋಗೇಂದ್ರ ಶೆಟ್ಟಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ನ್ಯಾಯವಾದಿ ಪಡ್ಡಂಬೈಲು ಸುರೇಶ್ ರೈ, ಜಯರಾಮ ರೈ ಸಹಿತ ಹಲವಾರು ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.