ಬೆಳ್ಳಾರೆ: ಕಾಡಿನಲ್ಲಿ ಸಿಗುವ ವಿಷಕಾರಿ ಐರೋಳ್ ಹಣ್ಣನ್ನು ಸೇವಿಸಬಹುದಾದ ವಸ್ತು ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ತಂದೆ ಹಾಗೂ ಮಗಳಲ್ಲಿ ಮಗಳು ಸಾವನ್ನಪ್ಪಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿಂದ ವರದಿಯಾಗಿದೆ.
ಅಮರಪಡ್ನೂರು ಗ್ರಾಮದ ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35ವ.) ಮೃತಪಟ್ಟವರು. ಅಮರಪಡ್ನೂರು ಗ್ರಾಮದ ಕುಳ್ಳಾಜೆ ಎಂಬಲ್ಲಿ ಲೀಲಾವತಿ ಹಾಗೂ ಅವರ ತಂದೆ ಒಂದು ವಾರದ ಹಿಂದೆ ಐರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದರು. ಎನ್ನಲಾಗಿದೆ.
ಪರಿಣಾಮವಾಗಿ ಲೀಲಾವತಿ ಅವರಿಗೆ ವಾಂತಿ, ಭೇದಿ ಆರಂಭವಾಗಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಅವರು ಮೃತಪಟ್ಟರು.
ಮೃತರು ಪತಿ ಜಗನ್ನಾಥ ನಾಯ್ಕ ದೊಡ್ಡೇರಿ, ಪುತ್ರರಾದ ಯತೀಶ್, ಯಶ್ವಿನ್, ಪುತ್ರಿ ಅಮೂಲ್ಯ ತಂದೆ ಲೋಕಯ್ಯ ನಾಯ್ಕ ಕುಳ್ಳಾಜೆ, ತಾಯಿ ಸರೋಜ ಅವರನ್ನು ಅಗಲಿದ್ದಾರೆ.