ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು ಇದರ ವತಿಯಿಂದ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರಗಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ದರ್ಬೆ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ವಂ|ವಿಜಯ್ ಲೋಬೊರವರ ದಕ್ಷ ಹಾಗೂ ಪ್ರಾಮಾಣಿಕ ಸೇವಾ ಮನೋಭಾವನೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ-2023 ನೀಡಿ ಗೌರವಿಸಲಾಗಿದೆ.
ವಂ|ವಿಜಯ್ ಲೋಬೊರವರು 2011ರಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ಆಗಮಿಸಿ ಸುದೀರ್ಘ 11 ವರ್ಷಗಳ ಕಾಲ ಜನಾನುರಾಗಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಸೇವಾವಧಿಯಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಲೇಜಿನ ಶ್ರೇಯೋಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದಿರುತ್ತಾರೆ.
ವಂ|ವಿಜಯ್ ಲೋಬೊರವರು ಜೀವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ತಮ್ಮ ಬಿಎಡ್ ಶಿಕ್ಷಣವನ್ನು ಉಡುಪಿಯ ಡಾ.ಟಿ.ಎಂ.ಎ.ಪೈ ಕಾಲೇಜ್ ಆಫ್ ಎಜುಕೇಶನ್ ನಲ್ಲಿ 4ನೇ ರ್ಯಾಂಕ್ ನೊಂದಿಗೆ ಪೂರೈಸಿದ್ದರು. ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದು 2005 ರಲ್ಲಿ ಗುರುದೀಕ್ಷೆಯನ್ನು ಗಳಿಸಿದ ಬಳಿಕ ಬೆಳ್ಳಣ್ ಸಂತ ಜೋಸೆಫ್ ಚರ್ಚ್ ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆಯನ್ನು ಆರಂಭಿಸಿ, 2008ರಲ್ಲಿ ಕಲ್ಯಾಣಪುರ ಸಂತ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ಭಡ್ತಿಯನ್ನು ಪಡೆದಿದ್ದರು.
ಮೂಲತ ಬಾರ್ಕೂರು ನಿವಾಸಿಯಾಗಿರುವ ವಂ|ವಿಜಯ್ ಲೋಬೊರವರು 2022ರಲ್ಲಿ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.