ಪುತ್ತೂರು:ನನಗೆ ಹಲ್ಲೆ ನಡೆಸಿದ್ದಾರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಚಿತ್ರೀಕರಣ ಮಾಡಿ ಬಳಿಕ ವಿಷಸೇವಿಸಿದ್ದ ಯುವಕನೋರ್ವನ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ್ದ 8 ಮಂದಿ ಆರೋಪಿಗಳ ಪೈಕಿ ಆರು ಮಂದಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಟ್ಟತ್ತಾರು ನಿಡ್ಯಾಣ ನಿವಾಸಿ ಯುವಕ ಅಬ್ದುಲ್ ನಾಸಿರ್(28ವ.)ಎಂಬವರು ಮೃತಪಟ್ಟವರು.ಇವರು ಆ.22ರಂದು ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.ಅದರ ಮೊದಲು ಅವರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದರು.ಚಿಕಿತ್ಸೆ ಫಲಿಸದೆ ಅವರು ಆ.27ರಂದು ಮೃತಪಟ್ಟಿದ್ದರು.ಘಟನೆ ಕುರಿತು ಅವರ ತಾಯಿ ಶ್ರೀಮತಿ ನೆಬಿಸಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳಾದ ಸುಮಯ್ಯ,ಅದ್ರಾಮ,ಮೊಯ್ದು,ತಾಜು,ಅಬ್ದುಲ್ಲ,ಸಮೀರ್, ನೌಫಲ್ ಹಾಗೂ ಅತ್ತಾವುಲ್ಲಾ ಎಂಬವರು ಕಾರಣವೆಂದು ನೆಬಿಸಾ ಅವರು ನೀಡಿದ್ದ ದೂರಿನಲ್ಲಿ ಆರೋಪಿಸಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಆರಂಭದಲ್ಲಿ ದೂರು ನೀಡಿದ್ದ ಅಬ್ದುಲ್ ನಾಸೀರ್: ದಿನಾಂಕ 17.08.2023 ರಂದು ರಾತ್ರಿ ಬೆಳ್ಳಾರೆ ಗ್ರಾಮದ ನಿವಾಸಿ ಅದ್ರಾಮ ಎಂಬವರ ಮಗಳ ಚಿಕಿತ್ಸೆಗಾಗಿ ಅವರ ಕಾರಿನಲ್ಲಿ ನಾನು ಚಾಲಕನಾಗಿ ಅದ್ರಾಮರವರ ಪತ್ನಿ ಹಾಗೂ ಮಗಳೊಂದಿಗೆ ಆಸ್ಪತ್ರೆಗೆ ಹೋಗಿ ವಾಪಸ್ ಮನೆಗೆ ಅವರನ್ನು ಬಿಟ್ಟು ನನ್ನ ಮನೆಗೆ ತೆರಳುತ್ತಿದ್ದಾಗ ಆರೋಪಿಗಳಾದ ಅದ್ರಾಮ ಹಾಗೂ ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಮತ್ತು ಇತರರು ಸೇರಿ, ನಾನು ಅದ್ರಾಮರವರ ಪತ್ನಿಯನ್ನು ಪ್ರೀತಿಸುತ್ತಿರುವ ಹಿನ್ನೆಲೆಯಲ್ಲಿ ತಕರಾರು ತೆಗೆದು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ನನ್ನನ್ನು ಕಾರಿನಿಂದ ಇಳಿಸಿ ಹೋಗಿರುತ್ತಾರೆ.
ತಾನು ಪ್ರೀತಿಸುತ್ತಿರುವ ಅದ್ರಾಮರವರ ಪತ್ನಿ ನನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಹಾಗೂ ಆರೋಪಿಗಳಾದ ಅದ್ರಾಮ ಮತ್ತು ಇತರರು ಹಲ್ಲೆ ಮಾಡಿರುವುದರಿಂದ ಅವಮಾನಗೊಂಡು ಆ.22ರಂದು ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡವನನ್ನು ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದಾಗಿ ಆರಂಭದಲ್ಲಿ ಅಬ್ದುಲ್ ನಾಸಿರ್ ಅವರು ನೀಡಿದ್ದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 341,323, 506 ಜೊತೆಗೆ 149ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಅವರು ಮೃತಪಟ್ಟ ಬಳಿಕ, 8 ಮಂದಿ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ದುಷ್ಪ್ರೇರಣೆ ಆರೋಪದಡಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಆರೋಪಿಗಳ ಪೈಕಿ ಕೆ.ಮೊಯಿದು ಕುಂಞ ಯಾನೆ ಮೊಯಿದು ಕಾವಿನಮೂಲೆ ಬೆಳ್ಳಾರೆ, ತಾಜುದ್ದೀನ್ ಯಾನೆ ತಾಜು ಪಡ್ಪು ಬೆಳ್ಳಾರೆ,ಕೆ.ಅಬ್ದುಲ್ಲ ಕಾವಿನಮೂಲೆ ಬೆಳ್ಳಾರೆ, ಮೊಹಮ್ಮದ್ ಶಮೀರ್ ಪಿ ಯಾನೆ ಸಮೀರ್ ಕಾವಿನಮೂಲೆ ಬೆಳ್ಳಾರೆ, ಮೊಹಮ್ಮದ್ ನೌಫಲ್ ಯಾನೆ ನೌಫಲ್ ನೆಲ್ಯಮಜಲು ಬೆಳ್ಳಾರೆ ಮತ್ತು ಮೊಹಮ್ಮದ್ ಅತಾವುಲ್ಲ ಯಾನೆ ಅತಾವುಲ್ಲ ಗೌರಿಹೊಳೆ ಬೆಳ್ಳಾರೆ ಇವರಿಗೆ ಜಿಲ್ಲಾ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲಾರದ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.