ಪ್ರೊ|ರಾಮಕೃಷ್ಣ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆಗೊಳಗಾಗಿರುವ ಡಾ.ರೇಣುಕಾಪ್ರಸಾದ್ ಆಸ್ಪತ್ರೆಗೆ ದಾಖಲು

0

ಮಂಗಳೂರು:ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ|ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಡಾ.ರೇಣುಕಾಪ್ರಸಾದ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2011ರ ಎ.28ರಂದು ನಡೆದಿದ್ದ ಈ ಕೊಲೆ ಪ್ರಕರಣದಲ್ಲಿ ರೇಣುಕಾ ಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ಭವಾನಿ ಶಂಕರ್, ವಾಮನ ಪೂಜಾರಿ ಎಂಬವರಿಗೆ ರಾಜ್ಯ ಹೈಕೊರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಅ.5ರಂದು ತೀರ್ಪು ಪ್ರಕಟಿಸಿತ್ತು.ಪ್ರಮುಖ ಆರೋಪಿ ಶರಣ್ ಆಕಾಶ್‌ಭವನ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಈತನ ಮೇಲಿನ ಶಿಕ್ಷೆಯ ಪ್ರಮಾಣ ಪ್ರಕಟವಾಗಿಲ್ಲ.ಜೀವಾವಧಿ ಶಿಕ್ಷೆಗೊಳಗಾಗಿದ್ದ ಇತರ ಆರೋಪಿಗಳು ಸದ್ಯ ಮಂಗಳೂರು ಜೈಲಿನಲ್ಲಿದ್ದು, ಶೀಘ್ರದಲ್ಲೇ ರಾಜ್ಯದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರೊ|ರಾಮಕೃಷ್ಣ ಅವರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎಲ್ಲ ಏಳು ಮಂದಿ ಆರೋಪಿಗಳನ್ನೂ ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು.ಈ ತೀರ್ಪಿನ ವಿರುದ್ಧ ಸರಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ಆರು ಮಂದಿ ಆರೋಪಿಗಳು ದೋಷಿಗಳು ಎಂದು ಘೋಷಿಸಿತ್ತಲ್ಲದೆ ಆಪಾದಿತರು ಅ.5ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿತ್ತು.

ಪ್ರಕರಣದಲ್ಲಿ ಏಳನೇ ಆರೋಪಿಯಾಗಿದ್ದ ಎಚ್.ಯು.ನಾಗೇಶ್ ಕುಮಾರ್ ಅವರನ್ನು ದೋಷಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.ನ್ಯಾಯಾಲಯದ ಆದೇಶದಂತೆ, ಆಕಾಶಭವನ್ ಶರಣ್ ಹೊರತು ಐವರು ಆರೋಪಿಗಳೂ ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅ.5ರಂದು ಹಾಜರಾಗಿದ್ದರು.ಹೈಕೋರ್ಟ್ ನ್ಯಾಯಮೂರ್ತಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದರು.

LEAVE A REPLY

Please enter your comment!
Please enter your name here