ದ.ಕ.ಸಹಿತ ವಿವಿಧ ಜಿಲ್ಲೆಗಳಲ್ಲಿ ಅ.8ರಿಂದ ಅ.10ರ ತನಕ ಪಡಿತರ ಚೀಟಿ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ

0

ಪ್ರವೀಣ್ ಚೆನ್ನಾವರ

ಪುತ್ತೂರು: ಬಿಪಿಎಲ್, ಎಪಿಎಲ್ ಹಾಗೂ ಎಎವೈ ರೇಷನ್ ಕಾರ್ಡ್ ಹೊಂದಿರುವವರಿಗೆ ಆಹಾರ ಇಲಾಖೆ ಪಡಿತರ ಚೀಟಿ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಪಡಿತರ ಚೀಟಿ ತಿದ್ದುಪಡಿಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಅ.8ರಿಂದ ಅ.10ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಪಡಿತರ ತಿದ್ದುಪಡಿಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ನೀಡಿತ್ತು. ಈ ಅವಧಿಯಲ್ಲಿ ಪುತ್ತೂರು ತಾಲೂಕಿನಲ್ಲಿ 254 ಕುಟುಂಬಗಳು ತಮ್ಮ ಪಡಿತರ ಚೀಟಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದರೆ, ಸುಳ್ಯ ತಾಲೂಕಿನಲ್ಲಿ 302, ಬೆಳ್ತಂಗಡಿಯಲ್ಲಿ 191 ಮತ್ತು ಬಂಟ್ವಾಳದಲ್ಲಿ 491 ಅರ್ಜಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಲಾಗಿತ್ತು. ಈ ಅವಧಿಯಲ್ಲಿ ತಾಲೂಕು ಕಚೇರಿ, ಸೇವಾ ಕೇಂದ್ರಗಳಿಗೆ ಆಗಮಿಸಿದ ಜನರು ಸರ್ವರ್ ಡೌನ್ ಸಮಸ್ಯೆಯಿಂದ ಸಂಜೆ ತನಕ ಕಾದು ಬರಿಗೈಲಿ ಮನೆಗೆ ಮರಳಿದ್ದರು. ಈ ಅವಧಿಯಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತಾದರೂ ಬಹುತೇಕ ಜನರಿಗೆ ಇದರ ಪ್ರಯೋಜನ ಸಿಕ್ಕಿಲ್ಲ. ಈ ಬಾರಿಯಾದರೂ ಸರ್ವರ್ ಸಮಸ್ಯೆ ಪರಿಹಾರವಾಗಿ ಈ ಅವಕಾಶದ ಪ್ರಯೋಜನ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಹಲವು ಜನರಿದ್ದಾರೆ.

ಪಡಿತರ ತಿದ್ದುಪಡಿ ಆಗದೆ ಗ್ಯಾರಂಟಿಗಳ ಜಾರಿಯೂ ವಿಳಂಬ:
ಇನ್ನು ಬಹಳಷ್ಟು ಕಡೆ, ಪಡಿತರ ತಿದ್ದುಪಡಿ ಆಗದೆ, ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಕೈತಪ್ಪಿದೆ. ಮನೆ ಯಜಮಾನಿ ಎಂದು ಹೆಸರಿಲ್ಲದ ಕಾರಣ, ತಿದ್ದುಪಡಿಗೆ ನೀಡಿದ್ದರೂ ಸರ್ವರ್ ಸಮಸ್ಯೆಯಾದ ಕಾರಣ ತಿದ್ದುಪಡಿಯಾಗದೆ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ದೊರೆತಿಲ್ಲ.

ತಿದ್ದುಪಡಿಗೆ ಅವಕಾಶ ನಿರಂತರವಾಗಿರಲಿ:
ಪಡಿತರ ಕಾರ್ಡ್‌ಗಳಿಗೆ ಸಂಬಂಧಿಸಿ ವಿಳಾಸ ಬದಲಾವಣೆ, ಹೆಸರು ಸೇರ್ಪಡೆ, ಹೆಸರು ತೆರವು ಮುಂತಾದ ತಿದ್ದುಪಡಿಗಳಿಗಾಗಿ ನೋಂದಣಿ ಮಾಡಲು ಇದೊಂದು ಸುವರ್ಣಾವಕಾಶವಾದರೂ, ಕಳೆದ ಬಾರಿ ಗ್ರಾಮೀಣ ಪ್ರದೇಶದಲ್ಲಿ ಜನರು ಗ್ರಾಹಕ ಸೇವಾ ಕೇಂದ್ರಗಳು, ಗ್ರಾಮ ವನ್ ಕೇಂದ್ರಗಳಲ್ಲಿ ಕ್ಯೂ ನಿಂತಿದ್ದರು. ಆದರೆ ಬಹುತೇಕ ಕಡೆ ಸರ್ವರ್ ಸಮಸ್ಯೆಯಿಂದಾಗಿ ವೆಬ್‌ಸೈಟ್ ತೆರೆದುಕೊಳ್ಳದೇ ಸಮಸ್ಯೆಯಾಗಿತ್ತು. ಪಡಿತರ ಚೀಟಿ ತಿದ್ದುಪಡಿಗೆ ನಿಗದಿತ ದಿನ ಅವಕಾಶ ನೀಡುವ ಬದಲು ಆಧಾರ್ ತಿದ್ದುಪಡಿಯಂತೆ ನಿರಂತರ ಪ್ರಕ್ರಿಯೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಸೇವೆಗಳು ಆನ್ಲೈನ್ ಮೂಲಕವೇ ನಡೆಯುತ್ತಿದ್ದು, ಪ್ರತೀ ಬಾರಿ ಜನರಿಗೆ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ವ್ಯಾಪಕವಾಗಿ ಸರ್ವರ್ ಸಮಸ್ಯೆಯಿಂದಾಗಿ ನಿರಂತರ ಬವಣೆ ಅನುಭವಿಸುವಂತಾಗಿದೆ.

ಎಲ್ಲಿ ತಿದ್ದುಪಡಿ ಮಾಡಿಸಬೇಕು?
ಕಳೆದ ತಿಂಗಳು ಕೂಡಾ ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು.ಆದರೆ ಸರ್ವರ್ ಡೌನ್ ಆಗಿದ್ದ ಕಾರಣ ಈ ಅವಕಾಶದ ಪ್ರಯೋಜನ ಹೆಚ್ಚಿನ ಫಲಾನುಭವಿಗಳಿಗೆ ಲಭಿಸಿರಲಿಲ್ಲ. ಈ ಸಮಯದಲ್ಲಿ ತಿದ್ದುಪಡಿ ಮಾಡಿಸಲು ಬಂದ ಜನರಿಗೆ ಹಲವು ಸಮಸ್ಯೆಗಳು ಎದುರಾಗಿದ್ದವು.ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ಅವಕಾಶ ನೀಡಿದೆ. ಸಾಮಾನ್ಯ ಸೇವಾ ಕೇಂದ್ರದಲ್ಲಿ ಮಾತ್ರ ಈ ಬಾರಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಇನ್ನು, ರೇಷನ್ ಕಾರ್ಡ್ ತಿದ್ದುಪಡಿಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಕಂಪ್ಯೂಟರ್ ಅವಶ್ಯವಾಗಿದ್ದು, ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಬಹುದು.

ಏನೇನು ತಿದ್ದುಪಡಿ ಮಾಡಬಹುದು?
ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ಸೇರ್ಪಡೆ, ಡಿಲೀಟ್, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳೆಯನ್ನು ಮನೆಯ ಯಜಮಾನಿ ಎಂದು ಇಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಪಡಿತರ ಚೀಟಿ ತಿದ್ದುಪಡಿಗೆ ನಿಗದಿತ ದಿನ ಅವಕಾಶ ನೀಡುವ ಬದಲು ಆಧಾರ್ ತಿದ್ದುಪಡಿಯಂತೆ ನಿರಂತರ ಪ್ರಕ್ರಿಯೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here