ಪುತ್ತೂರು: ಸುಡುಮದ್ದು ಮಾರಾಟದ ಸ್ಫೋಟಕ ಕಾಯ್ದೆ ಮತ್ತು ನಿಯಮದಡಿ ಮೈದಾನದಲ್ಲಿ ಹಾಗೂ ತೆರೆದ ಪ್ರದೇಶಗಳಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಪಡೆಯಲು ಆಸಕ್ತ ಸಾರ್ವಜನಿಕರು ದ.ಕ.ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 11ರಿಂದ ನ.14ರವರೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತು ನವೆಂಬರ್ 24ರಂದು ತುಳಸಿ ಪೂಜೆ ಹಬ್ಬದ ಸಂದರ್ಭದಲ್ಲಿ ಸುಡುಮದ್ದು ಮತ್ತು ಮಾರಾಟದ ತಾತ್ಕಾಲಿಕ ಪರವಾನಿಗೆ ಪಡೆಯಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವಾಗ 200 ರು.ಗಳ ಪರಿಶೀಲನಾ ಶುಲ್ಕ ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ 500 ರೂ.ಗಳ ಪರವಾನಿಗೆ ಶುಲ್ಕವನ್ನು ಪಾವತಿಸಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆಯ ನಿರಾಪೇಕ್ಷಾಣಾ ಪತ್ರ ಪೊಲೀಸ್ ಅಧೀಕ್ಷಕರ ನಿರಾಪೇಕ್ಷಾಣಾ ಪತ್ರ, ಸಂಬಂಧಪಟ್ಟ ತಹಶೀಲ್ದಾರರ ನಿರಾಪೇಕ್ಷಾಣಾ ಪತ್ರ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ನಿರಾಪೇಕ್ಷಾಣಾ ಪತ್ರ ಸಲ್ಲಿಸಬೇಕು. ಪರವಾನಿಗೆ ಪಡೆದು ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿರುತ್ತದೆ.
ಸಂಬಂಧಪಟ್ಟ ಇಲಾಖೆಗಳಿಂದ ನಿರಾಪೇಕ್ಷಾಣಾ ಪತ್ರ ಸಲ್ಲಿಸಿದಲ್ಲಿ ಸ್ಫೋಟಕ ಕಾಯ್ದೆ ನಿಯಮಾವಳಿಗಳಿಗೆ ಒಳಪಟ್ಟು ಮತ್ತು ಕೋವಿಡ್-19 ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತುಗಳಿಗೆ ಒಳಪಟ್ಟು ಕಚೇರಿಯಿಂದ ಪರವಾನಿಗೆ ಮಂಜೂರು ಮಾಡಲಾಗುವುದು. ನವೆಂಬರ್ 6ರ ನಂತರ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣವಾದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ವಿಧಾನ
ನಿಗದಿತ ನಮೂನೆ ಮುಂದೆ ಇ-5ರಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ ಸರ್ಕಾರಿ ಜಮೀನು ಅಲ್ಲದೆ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (20ರೂ.ನ ಸ್ಟ್ಯಾಂಪ್ ಪೇಪರ್ನೊಂದಿಗೆ) ಹಾಗೂ ಸರ್ಕಾರಿ ಜಾಗವಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು. ನವೆಂಬರ್ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.