ಪುತ್ತೂರು:ಪುತ್ತೂರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತಾಧಿಕಾರಿಯಾಗಿ ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ನಾಗೇಂದ್ರ ಬಿ ಅವರನ್ನು ನೇಮಕಗೊಳಿಸಿ ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್.ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.
ಪುತ್ತೂರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ಅವಧಿಯು ಆ.25ಕ್ಕೆ ಪೂರ್ಣಗೊಂಡಿದ್ದು, ಸಂಘದ ಹೊಸ ಆಡಳಿತ ಮಂಡಳಿ ರಚನೆಗೆ ಚುನಾವಣೆ ಪ್ರಕ್ರಿಯೆ ನಡೆಸಲು ಬಾಕಿಯಾಗಿತ್ತು.ಅಡಳಿತ ಮಂಡಳಿಯ ಪದಾವಧಿಯು ಮುಕ್ತಾಯವಾದ ದಿನದಂದು ಹೊಸ ಆಡಳಿತ ಮಂಡಳಿ ರಚನೆಯಾಗದಿದ್ದರೆ ನಿರ್ಧಿಷ್ಟಪಡಿಸಲಾದ ಕಾಲಮಿತಿಯೊಳಗೆ ಚುನಾವಣೆ ನಡೆಯದಿದ್ದರೆ ಕರ್ನಾಟಕ ಸರಕಾರ ಸಂಘಗಳ ಕಾಯ್ದೆ 1959ರ ಕಲಂ 28ಎ(5)ರ ರೀತ್ಯಾ ಆಡಳಿತಾಧಿಕಾರಿಯನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ರಚನೆಯಾಗುವ ತನಕ ಸಂಘದ ದಿನನಿತ್ಯದ ಸುಗಮ ಆಡಳಿತ ನಿರ್ವಹಣೆಗೆ ಅನುಕೂಲವಾಗುವಂತೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವೆಂದು ಪರಿಗಣಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಈ ಕುರಿತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಸಹಕಾರ ಸಂಘಗಳ ಉಪನಿಬಂಧಕರಿಗೆ ಪತ್ರ ಬರೆದು ಆಡಳಿತಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳುವಂತೆ ಕೋರಿದ್ದರು.ಕೋಡಿಂಬಾಡಿ ನಿವಾಸಿಯಾಗಿರುವ ನಾಗೇಂದ್ರ ಅವರು ಸಂಘದ ಮುಂದಿನ ಹೊಸ ಆಡಳಿತ ಮಂಡಳಿ ರಚನೆಯಾಗಿ ಪ್ರಭಾರ ವಹಿಸಿಕೊಳ್ಳುವ ತನಕ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.