ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್‌ನ ಪುತ್ತೂರು ವಲಯದ ಪದಪ್ರದಾನ – ಸ್ವಸಹಾಯ ಸಂಘ, ಛಾಯಾ ಸ್ಪಂಧನೆಗೆ ಚಾಲನೆ, ಪ್ರಶಸ್ತಿ ಪ್ರದಾನ, ಗುರುವಂದನೆ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್‌ನ ಪ್ರತಿಷ್ಠಿತ ವಲಯವಾಗಿರುವ ಪುತ್ತೂರು ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಅ.13ರಂದು ಪಡೀಲು ಟ್ರಿನಿಟಿ ಹಾಲ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್ ದೀಪಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಫೋಟೋಗ್ರಫಿಯೆಂಬುದು ಜೀವನದಲ್ಲಿ ಹೃದಯವಿದ್ದಂತೆ. ಒಂದು ಫೋಟೋ ನೂರು ಕಥೆ ಹೇಳುತ್ತದೆ. ಭಾರಿ ಮಹತ್ವ ಪಡೆದುಕೊಂಡಿದ್ದ ಫೋಟೋಗ್ರಾಫಿ ಮೊಬೈಲ್‌ನಿಂದ ಮಹತ್ವ ಕಳೆದುಕೊಂಡಿದ್ದರೂ ಈಗ ಮತ್ತೆ ಫೋಟೋಗ್ರಾಫರ‍್ಸ್ ಗಳ ಆವಶ್ಯಕತೆ ಎದ್ದು ಕಾಣುತ್ತಿದೆ. ಫೋಟೋಗ್ರಾಫಿಯ ವೃತ್ತಿಯ ಮೂಲ ಮತ್ತು ಮಹತ್ವ ಮತ್ತೆ ಬರಲಿದೆ. ಪುತ್ತೂರಿನಲ್ಲಿ ವಿಭಿನ್ನ ರೀತಿಯಲ್ಲಿ ಸಂಘಟನೆಗಳಿದ್ದು ಸದಸ್ಯರ ಬೆಳವಣಿಗೆ, ಪರಸ್ಪರ ಸಹಕಾರಕ್ಕೆ ಸಂಘಟನೆ ಅನುಕೂಲವಾಗಲಿದೆ ಎಂದರು.

ಜೇಸಿಐ ವಲಯ-15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ಕಣ್ಣಿಗೆ ಕಂಡ ಯಾವುದೇ ಸನ್ನಿವೇಷವನ್ನು ವಿವಿಧ ದೃಷ್ಠಿಕೋನದಲ್ಲಿ ಕಲ್ಪನೆ ಮಾಡುವವರು ಕವಿಗಳು ಹಾಗೂ ಛಾಯಗ್ರಾಹಕರು. ಛಾಯಾಗ್ರಹಣ ವೃತ್ತಿಯಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದರೂ ಅವರ ಜೀವನ ಕಷ್ಟಕರವಾಗಿದೆ. ಸಂಕಷ್ಟದಲ್ಲಿ ಬದುಕುಕಟ್ಟಿಕೊಂಡಿದ್ದರೂ ಸಮಾಜದಲ್ಲಿರುವ ಬಡವರ, ಬಡ ಸದಸ್ಯರಿಗೆ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಸಂಘಟನೆಯ ಮೂಲಕ ಸದಸ್ಯರ ಭಾವನೆ ಬೆಸೆಯುವ ಕಾರ್ಯವಾಗುತ್ತಿದೆ. ತನ್ನ ಸದಸ್ಯರಿಗೆ ಆರ್ಥಿಕ ಸಹಕಾರಕ್ಕಾಗಿ ಸಹಕಾರಿ ಸಂಘವನ್ನು ಮುನ್ನಡೆಸುವ ಮೂಲಕ ಪುತ್ತೂರು ಅಸೋಸಿಯೇಶನ್ ಶ್ರೀಮಂತವಾಗಿದೆ. ಇನ್ನಷ್ಟು ಉತ್ತಮ ಸಮಾಜಸೇವೆಗಳ ಮೂಲಕ ಮಾದರಿ ವಲಯವಾಗಿ ಮೂಡಿಬರಲಿ ಎಂದು ಹಾರೈಸಿದರು.

ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಪುತ್ತೂರು ವಲಯವು ಉತ್ತಮ ಸಮಾಜ ಸೇವೆಯ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಸಹಕಾರ ಸಂಘವು ಉತ್ತಮವಾಗಿ ನಡೆಯುತ್ತಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗಿದೆ. ಸದಸ್ಯರು ನಮ್ಮ ಸಂಘದಲ್ಲಿಯೇ ಠೇವಣಿಯಿಟ್ಟು ಸಂಘವು ಇನ್ನಷ್ಟು ಬೆಳೆಯಲು ಸಹಕರಿಸುವಂತೆ ವಿನಂತಿಸಿದರು.

ಅಸೋಸಿಯೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಮಾತನಾಡಿ, ನಮ್ಮ ಸಂಘಟನೆ ನಮಗಾಗಿರುವುದು. ಇದಕ್ಕಾಗಿ ಪ್ರತಿಯೊಬ್ಬರೂ ಶಕ್ತಿ ಮೀರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿ ನೂತನ ಪದಾಧಿಕಾರಿಗಳೊಗೆ ಅಭಿನಂದನೆ ಸಲ್ಲಿಸಿದರು.
ನಿಕಟಪೂರ್ವ ಅಧ್ಯಕ್ಷ ನಾಗೇಶ್ ಟಿ.ಎಸ್ ಮಾತನಾಡಿ, ಛಾಯಾಗ್ರಾಹಕರಿಗೆ ಸರಕಾರದ ಭದ್ರತೆ ಇಲ್ಲದೆ ಇದ್ದರೂ, ಸಮಾಜದಿಂದ ಪಡೆದನ್ನು ಸಮಾಜಕ್ಕೆ ಅರ್ಪಣೆ ಮಾಡುವ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದೆ. ಛಾಯಾಗ್ರಹಣ ವೃತ್ತಿಯನ್ನೇ ನಂಬಿಕೊಂಡು ಕುಟುಂಬದ ನಿರ್ವಹಣೆಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆರ್ಥಿಕ ದುಸ್ಥಿತಿಯಲ್ಲಿದ್ದರೂ ಕಾರ್ಯಕ್ರಮ ಮುಗಿದ ಬಳಿಕ ಸಾಫ್ಟ್ ಕಾಪಿ ಕೇಳುವ ಮೂಲಕ ನಮ್ಮನ್ನು ತುಳಿಯುವ ಕೆಲಸವಾಗುತ್ತಿದೆ ಎಂದ ವಿಷಾದ ವ್ಯಕ್ತ ಪಡಿಸಿದರು.

ನೂತನ ಅಧ್ಯಕ್ಷ ರಘು ಶೆಟ್ಟಿ ಮಾತನಾಡಿ, ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ವಿದ್ಯಾಭ್ಯಾಸ ಪಡೆದಿದ್ದರೂ ನನ್ನ ಆಯ್ಕೆ ಪೋಟೋಗ್ರಾಪಿಯಾಗಿದೆ. ಕಪ್ಪು ಬಿಳುಪ ಫೋಟೋದಿಂದ ವೃತ್ತಿ ಪ್ರಾಂಭಿಸಿದ್ದು ಇಂದು ಡಿಜಿಟಲ್ ಯುಗದಲ್ಲಿದ್ದೇವೆ. ಸಂತಸ ಕ್ಷಣಗಳನ್ನು ಸೆರೆಹಿಡಿದು ಸಂಭ್ರಮಿಸುವವರು ಛಾಯಾಗ್ರಾಹಕರು. ನಮ್ಮ ಸಂಘಟನೆಯು ಸಮಾಜದಲ್ಲಿ ಸುರಕ್ಷಿತ ಸಂಘಟನೆಯಾಗಿದೆ. ಸದಸ್ಯರಿಗೆ ಯಾವುದೇ ಸಮಸ್ಯೆಗಳು ಎದುರಾದರೂ ಬೆನ್ನೆಲುಬಾಗಿ ನಿಂತು ಸದಸ್ಯರ ಸಂಕಷ್ಟಗಳಿಗೆ ಸ್ಪಂಧನೆ ನೀಡಲಾಗುತ್ತಿದೆ. ಎಲ್ಲಾ ವೃತ್ತಿ ಬಾಂಧವರ ಇಚ್ಚೆಯಂತೆ ಅಧ್ಯಕ್ಷ ಹುದ್ದೆ ದೊರೆತಿದೆ. ಮುಂದಿನ ಎರಡು ವರ್ಷಗಳಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆಯ ಮೂಲಕ ಸಂಘ ಹಾಗೂ ಸದಸ್ಯರ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಅವಿಭಜಿತ ಜಿಲ್ಲೆಯ 14 ವಲಯಗಳಲ್ಲಿ ಪುತ್ತೂರು ವಲಯವು ವೈಶಿಷ್ಟ್ಯ ವಲಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ವೃತ್ತಿಗೆ ಸೀಮಿತವಾಗಿರದೆ ಸಮಾಜದ ನಾನಾ ಕ್ಷೇತ್ರದಲ್ಲಿ ಕೊಡುಗೆ ನೀಡಿದೆ. ಸಂಘಟನೆಯ ಜೊತೆಗೆ ಛಾಯಾಗ್ರಯಹಣ ವೃತ್ತಿ ಉಳಿಯಬೇಕು, ಸದಸ್ಯರು ಪರಸ್ಪರ ಸಹಕಾರ ಆಗಬೇಕೆನ್ನುವ ದೃಷ್ಠಿಯಲ್ಲಿ ಉತ್ತಮ ಕಾರ್ಯಕ್ರಮ ಆಯೋಜನೆಯಾಗಿದೆ. ಮಾತೃ ಸಂಘಕ್ಕೆ ನಿವೇಶನ ಖರೀದಿಸುವ ಮೂಲಕ ಎಲ್ಲಾ ಕನಸು ನನಸಾಗಿದ್ದು ಈ ಯೋಜನೆ ಯಶಸ್ವಿಯಾಗುವಲ್ಲಿ ಪುತ್ತೂರು ವಲಯದಿಂದ ಉತ್ತಮ ಸಹಕಾರ ದೊರೆತಿದೆ. ಬಹುನಿರೀಕ್ಷೆಯಿಂದ ಪ್ರಾರಂಭಿಸಲಾದ ಛಾಯಾ ಸ್ಪಂಧನೆ, ಸ್ವ ಸಹಾಯ ಸಂಘದ ಕನಸು ನನಸಾಗಲಿ ಎಂದು ಆಶಿಸಿದರು. ಕ್ಯಾಮರಾ ಸೆಂಟರ್ ಮ್ಹಾಲಕ ಭರತ್ ಕುಮಾರ್, ಜಿಲ್ಲಾ ಸಂಚಾಲಕ ಕರುಣಾಕರ ಕಾನಂಗಿ, ಜಿಲ್ಲಾ ಕಟ್ಟಡ ಆನಂದ್ ಎನ್.ಬಂಟ್ವಾಳ ಮಾತನಾಡಿ ಸಂಘಟನೆಯ ಮಹತ್ವ ತಿಳಿಸಿ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಎಲಿಯ, ಜಿಲ್ಲಾ ಕಟ್ಟಡ ಸಮಿತಿ ನಿರ್ದೇಶಕ ಸುಧಾಕರ ಶೆಟ್ಟಿ, ಸೌತ್‌ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ್ ರಾವ್, ನಿಕಟಪೂರ್ವ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್, ಕೋಶಾಧಿಕಾರಿ ಗಿರಿಧರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ವಲಯದಿಂದ ಪ್ರಾರಂಭಿಸಲಾದ ಸ್ವಸಹಾಯ ಸಂಘಕ್ಕೆ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಪುಸ್ತಕ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರೆ ಸದಸ್ಯರು ತುರ್ತು ಆರೋಗ್ಯ ನೆರವಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ವಿನೂತನ ಯೋಜನೆ ಛಾಯಾ ಸ್ಪಂಧನೆ’ಗೆ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಬಂಟ್ವಾಳ ಚಾಲನೆ ನೀಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಪ್ರಣೀತ್ ಕೃಷ್ಣರವರಿಗೆ ಪ್ರತಿಭಾ ಪುರಸ್ಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ಸಂಪನ್ನಲಕ್ಷ್ಮಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಕರೀಷ್ಮಾ ಹಾಗೂ ಆಶ್ರಯರವರಿಗೆ ವಿದ್ಯಾನಿಧಿ ವಿತರಿಸಲಾಯಿತು.

ಛಾಯಾಗ್ರಹಣದ ಸಾಧನೆಗಾಗಿ ಹಿರಿಯ ಛಾಯಾಗ್ರಹಕ ಸದಸ್ಯ ಉಪ್ಪಿನಂಗಡಿಯ ಕಾಂಚನ ಸ್ಟುಡಿಯೂದ ಲಕ್ಷ್ಮಿನಾರಾಯಣ ಕೆ ಅವರಿಗೆ ಛಾಯಾ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೂತನ ಅಧ್ಯಕ್ಷ ರಘು ಶೆಟ್ಟಿಯವರ ವೃತ್ತಿಗುರು ವೃಂಧಾ ಸ್ಟುಡಿಯೋ ಮ್ಹಾಲಕ ಪುಂಡರಿಕಾ ಬಾಲಗೋಪಾಲ್ ಅವರಿಗೆ ಗುರುವಂಧನೆ ಸಲ್ಲಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ನಾಗೇಶ್ ಟಿ.ಎಸ್., ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್, ಕೋಶಾಧಿಕಾರಿ ಗಿರಿಧರ್ ಭಟ್ ಹಾಗೂ ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳರವರನ್ನು ಸನ್ಮಾನಿಸಲಾಯಿತು. ಮಿಡಿತ ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು, ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿದ ಸದಸ್ಯರು, ನೂತನ ಸ್ಟುಡಿಯೋ, ಗೃಹ ನಿರ್ಮಾಣ ಮಾಡಿದ ಸದಸ್ಯರು, ಜಿಲ್ಲೆಯ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಮುರಳಿ ರಾಯರ ಮನೆ ಪ್ರಾರ್ಥಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಷಣ್ಮುಖ ಪ್ರಸಾದ್ ಸನ್ಮಾನಿತರ ಪರಿಚಯ ಮಾಡಿದರು. ಶಾಂತ ಕುಮಾರ್, ಹರೀಶ್ ಪುಣಚ, ಬಾಲಕೃಷ್ಣ ರೈ ಉಪ್ಪಿನಂಗಡಿ, ಗಿರೀಶ್ ಉಪ್ಪಿನಂಗಡಿ, ರಾಜೇಶ್ ರಾಮಕುಂಜ, ರವಿಚಂದ್ರ ರೈ ಮುಂಡೂರು, ಸಂತೋಷ್ ಕುಮಾರ್ ಬನ್ನೂರು, ಗಣೇಶ ಕಟ್ಟಪುಣಿ, ವಸಂತ ನಾಯ್ಕ್, ಪ್ರವೀಣ್ ವಿಟ್ಲ, ಪ್ರಶಾಂತ್, ಜಯಂತ ಗೌಡ ಕರ್ಕುಂಜ, ಸುಶ್ರುತ್, ರೋಹಿತ್ ಪುರುಷರಕಟ್ಟೆ ಅತಿಥಿಗಳನ್ನು ಶಾಲು ಹಾಕಿ ತಾಂಬೂಲ ನೀಡಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಕಾರ್ಯಕ್ರಮದಲ್ಲಿ ಕ್ಯಾಮರಾ ಸೆಂಟರ್‌ನ ವತಿಯಿಂದ ಕ್ಯಾಮರಾಗಳ ಉಚಿತ ಸರ್ವೀಸ್ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here