ಎಸ್ ಎಸ್ ಎಲ್ ಸಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇಗರ್ಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯು ಅ.28ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜೆ ಶಿವಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಬರೆದ ಕೃತಿ ರಾಮಾಯಣ ನಮಗೆಲ್ಲ ಆದರ್ಶ ಎಂದರು.
ವಾಲ್ಮೀಕಿ ಕೃತಿ ರಾಮಾಯಣ ಬದುಕಿಗೆ ದಾರಿ ದೀಪ:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ, 3500 ವರ್ಷಗಳ ಹಿಂದೆ ರಾಮಾಯಣ ಬರೆದ ವಾಲ್ಮೀಕಿ ಮಹಾರ್ಷಿಗಳು ನಮಗೆಲ್ಲ ಆದರ್ಶರು. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಏನೆಲ್ಲಾ ಬೇಕು. ಆ ಬದುಕಿಗೆ ದಾರಿ ದೀಪವಾಗಿ ರಾಮಾಯಣ ಮೂಡಿ ಬಂದಿದೆ. ಹಲವಾರು ಗ್ರಂಥಗಳ ನಡುವೆ ರಾಮಯಾಣ ಮಹಾನ್ ಗ್ರಂಥವಾಗಿದೆ. ಮಹರ್ಷಿ ವಾಲ್ಮೀಕಿಯವರು ರಾಮರಾಜ್ಯವಾಗಬೇಕೆಂದು ಬರೆದ ಕೃತಿ ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದರು.
ರಾಮಾಯಣ ರಾಷ್ಟ್ರದ ಹಬ್ಬವಾಗಲಿ:
ಸಂಜಯನಗರ ಸ.ಹಿ.ಪ್ರಾ ಶಾಲೆಯ ಮುಖ್ಯಗುರು ರಮೇಶ್ ಉಳಯ ಅವರು ಸಂಸ್ಮರಣಾ ಉಪನ್ಯಾಸ ಮಾಡಿದರು. ಜೀವನದಲ್ಲಿ ನಾವೆಲ್ಲ ಭಾರತ ಎಂಬ ಸಂಸ್ಕಾರದಲ್ಲಿ ಬದುಕಿದವರು. ನಾವೆಲ್ಲ ಬದುಕಿರುವುದು ನಂಬಿಕೆಯಿಂದ. ಆ ನಂಬಿಕೆಯನ್ನು ಬುಡ ಮೇಲು ಮಾಡಬಾರದು ಎಂದ ಅವರು ರಾಷ್ಟ್ರೀಯ ಹಬ್ಬವಲ್ಲ ರಾಷ್ಟ್ರದ ಹಬ್ಬವಾಗಿರಬೇಕೆಂದರು. ಮೊದಲ ಬಾರಿಗೆ ಜಗತ್ತಿನಲ್ಲಿ ಭಾರತವನ್ನು ಪ್ರತಿಷ್ಠಾಪಿಸಿದ ಕೀರ್ತಿ ವಾಲ್ಮೀಕಿಗೆ ಮತ್ತು ರಾಮಾಯಣಕ್ಕೆ ಬರುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸಿ ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದವರಿಗೆ ಸನ್ಮಾನ:
2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾದ ಶ್ರೀ ರಾಮಕುಂಜ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸ್ತುತ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ರಕ್ಷಿತ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸ್ತುತ ಮೂಡಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನೂಪ್ ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಲತಾಶ್ರೀ ಕೆ.ವಿ ಅವರನ್ನು ಸನ್ಮಾನಿಸಲಾಯಿತು.
ರಾಜ ಬಪ್ಪಳಿಗೆ, ತಾ.ಪಂ ನ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜಗೋಪಾಲ್, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅತಿಥಿಗಳನ್ನು ಗೌರವಿಸಿದರು. ಮೆಟ್ರಿಕ್ ನಂತರದ ಹಾರಾಡಿ ವಿದ್ಯಾರ್ಥಿ ನಿಲಯದ ದೀಪಿಕಾ, ಅನನ್ಯ ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಬಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು.