ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಕುರಿತು ಪ್ರಚಾರಕ್ಕೆ ಮುಂದಾದ ಅರಣ್ಯ ಇಲಾಖೆ

0

ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯಲ್ಲಿ ಏನೇನಿದೆ ? ಇಲ್ಲಿದೆ ಮಾಹಿತಿ

ಬರಹ: ಪ್ರವೀಣ್ ಚೆನ್ನಾವರ

ಪುತ್ತೂರು: ರಿಯಾಲಿಟಿ ಶೋ ಒಂದರಲ್ಲಿ ವರ್ತೂರು ಸಂತೋಷ್ ಎಂಬವರು ಹುಲಿ ಉಗುರುಗಳುಳ್ಳ ಚಿನ್ನದ ಸರ ಧರಿಸಿದ್ದ ಕಾರಣ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವರನ್ನು ಬಂಧಿಸಿದ ಪ್ರಕರಣದ ಬಳಿಕ ಹುಲಿ ಉಗುರು ಸೇರಿ ಸುರಕ್ಷಿತ ವನ್ಯಜೀವಿಗಳ ಅಂಗಾಂಗ ಹೊಂದುವುದು ಅಪರಾಧ ಎಂಬುದು ಸ್ಪಷ್ಟವಾಗಿದೆ.ಈ ವರೆಗೆ ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಮಾಹಿತಿ ಕೊರತೆ ಇದ್ದದ್ದೂ ಕಾಯ್ದೆ ಸೇರಿದಂತೆ ಇತರೆ ಕಾನೂನಿನ ಉಲ್ಲಂಘನೆ ಸಾರ್ವಜನಿಕ ವಲಯದಲ್ಲಿ ಕಂಡುಬರಲು ಕಾರಣ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ವನ್ಯಜೀವಿ ಕಾಯ್ದೆ ಕುರಿತು ಪ್ರಚಾರಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.


ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ.
ಈ ಕಾಯಿದೆಯ ಪ್ರಕಾರ
*ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ.
*ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ.
*ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ.
*ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ
*ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧ.


ವನ್ಯಜೀವಿಗಳ ಯಾವುದೇ ಅಂಗಾಂಗ, ಚರ್ಮ, ಮೂಳೆ, ಕೊಂಬು, ಕೂದಲು, ಗರಿ ಇತ್ಯಾದಿ ಸಂಗ್ರಹಿಸುವುದು, ಪ್ರದರ್ಶಿಸುವುದು ಅಪರಾಧ. ಕಾಯ್ದೆ ಜಾರಿಯಾಗುವ ಮುನ್ನ ಸಂಗ್ರಹಿಸಿದ್ದರೆ ಅಂಥವನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕು. ವನ್ಯಜೀವಿಗಳ ಅಂಗಾಂಗ ಸಂಗ್ರಹಿಸಿದ್ದು ಸಾಬೀತಾದರೆ ಅಂಥವರಿಗೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10 ಸಾವಿರದಿಂದ 25 ಸಾವಿರ ರೂ. ದಂಡ ವಿಽಸಲು ಅವಕಾಶವಿದೆ.


1972ರ ವನ್ಯಜೀವಿ ಕಾಯ್ದೆ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ನಿಷೇಧಿಸಿತು. ಬಳಿಕ ,2006, 2012 ಹಾಗೂ 2022ರ ವನ್ಯಜೀವಿ ಕಾಯ್ದೆ ಇನ್ನಷ್ಟು ಬಲಿಷ್ಠವಾಗಿವೆ. ಇವುಗಳ ಅನ್ವಯ ವನ್ಯಜೀವಿಗಳ ವಸ್ತುಗಳನ್ನು ಬಳಸಿಕೊಂಡು ಮಾಡಿರುವ ಟ್ರೋಫಿ ಕೂಡ ಇಟ್ಟುಕೊಳ್ಳುವುದೂ ಅಪರಾಧವಾಗಿದೆ.
ವನ್ಯಜೀವಿಗಳ, ಚರ್ಮ, ದಂತ, ಉಗುರು ಇತ್ಯಾದಿಗಳಿಗೆ ಹೆಚ್ಚಿನ ಹಣದ ಮೌಲ್ಯ ಇದ್ದ ಕಾರಣ ಅವುಗಳ ಬೇಟೆಯೂ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಅವುಗಳ ಪ್ರದರ್ಶನವನ್ನೇ ನಿಷೇಧಿಸಲಾಯಿತು. ವನ್ಯಜೀವಿಗಳ ಉಗುರು, ಹಲ್ಲು, ಕೂದಲನ್ನು ಯಾರೇ ಆಗಲಿ ಇಟ್ಟುಕೊಳ್ಳುವಂತಿಲ್ಲ. ನವಿಲು ಗರಿ ಕೂಡ ಇಟ್ಟುಕೊಳ್ಳುವಂತಿಲ್ಲ.ಇದೀಗ ವರ್ತೂರು ಸಂತೋಷ್ ಪ್ರಕರಣ ಬಳಿಕ ಈ ಕಾಯಿದೆಯ ಗಂಭೀರತೆ ಜನರಿಗೆ ಅರಿವಾಗಿದೆ.


ವನ್ಯಜೀವಿ ಕಾಯ್ದೆ’ ಕುರಿತು ಪ್ರಚಾರಕ್ಕೆ ಕ್ರಮ- ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ
ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಕಾಯ್ದೆ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಇತರೆ ಕಾನೂನುಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅರಣ್ಯ ಇಲಾಖೆಯಿಂದ ಕ್ರಮವಹಿಸಲಾಗುವುದು’ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದ್ದಾರೆ.
’ಅರಣ್ಯ ಇಲಾಖೆ ಕಾನೂನಿನ ಬಗ್ಗೆ ಮಾಹಿತಿ ಕೊರತೆ ಇರುವ ಕಾರಣ, ಕಾಯ್ದೆ ಸೇರಿದಂತೆ ಇತರೆ ಕಾನೂನಿನ ಉಲ್ಲಂಘನೆ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ. ರಿಯಾಲಿಟಿ ಶೋ ಸ್ಪರ್ಧಿಯಾದ ವರ್ತೂರು ಸಂತೋಷ ಹುಲಿ ಉಗುರು ಧಾರಣೆಯ ಪ್ರಕರಣದ ನಂತರ ಇಲ್ಲಿಯವರೆಗೆ 8 ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು ಕಾನೂನಿನ ಪ್ರಕಾರ ಕ್ರಮವಹಿಸಲಾಗುವುದು’ ಎಂದು ಸಚಿವರು ಹೇಳಿದ್ದಾರೆ.

1926 ಅರಣ್ಯ ಇಲಾಖೆ ಸಹಾಯವಾಣಿ
ವನ್ಯಜೀವಿ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆ ಸಹಾಯವಾಣಿ 1926ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

ವನ್ಯಜೀವಿ ಉತ್ಪನ್ನ ಮರಳಿಸಲು ಕೊನೆ ಅವಕಾಶ
’ಹುಲಿ ಉಗುರಿನ ಲಾಕೆಟ್ ಧರಿಸಿದವರ ವಿರುದ್ಧ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಕಾನೂನಿನ ಅರಿವಿಲ್ಲ ಎಂಬುದು ಸ್ಪಷ್ಟ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಸರಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡಲು ಪರಾಮರ್ಶಿಸಲಾಗುತ್ತಿದೆ.
2023ರ ವರೆಗೆ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲಕತ್ವದ ಹಕ್ಕು ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ 2022ರಲ್ಲಿ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ವನ್ಯಜೀವಿ ಉತ್ಪನ್ನದ ಅಕ್ರಮ ದಾಸ್ತಾನನ್ನು ಸರಕಾರಕ್ಕೆ ಮರಳಿಸಲು ಅವಕಾಶ ಕಲ್ಪಿಸಲಾಗಿದೆ.
-ಈಶ್ವರ್ ಬಿ.ಖಂಡ್ರೆ
ಅರಣ್ಯ ಸಚಿವರು

ಪುತ್ತೂರಲ್ಲೂ ಅರಣ್ಯಾಧಿಕಾರಿಗಳು ಹೈಅಲರ್ಟ್
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದಲ್ಲಿ ವರ್ತೂರು ಸಂತೋಷ್ ಅವರ ಬಂಧನದ ಬಳಿಕ ರಾಜ್ಯವ್ಯಾಪಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೈಅಲರ್ಟ್ ಆಗಿದ್ದಾರೆ. ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ರಾಜ್ಯ ಸರಕಾರ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.ಸಮಿತಿಯಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ನಗರ, ತುಮಕೂರು, ಕೊಪ್ಪ ಹಾಗೂ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸದಸ್ಯರಾಗಿರುತ್ತಾರೆ. ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ.ಈ ನಿಟ್ಟಿನಲ್ಲಿ ಈ ರೀತಿಯ ಅಪರಾಧಗಳು ಕಂಡು ಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಮಾಡಿ ಅಪರಾಧಗಳ ಬಗ್ಗೆ ದೂರು ದಾಖಲಿಸಬಹುದು.ಈ ರೀತಿಯ ದೂರುಗಳು ಬಂದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಪುತ್ತೂರುನಲ್ಲಿಯೂ ಅರಣ್ಯಾಽಕಾರಿಗಳು ಸನ್ನದ್ಧರಾಗಿದ್ದಾರೆ.ಈ ರೀತಿಯ ಮಾಹಿತಿ ಬಂದಲ್ಲಿ ಕೂಡಲೇ ಶೇರ್ ಮಾಡಿ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಲಯ ಅರಣ್ಯಾಽಕಾರಿ ಕಿರಣ್ ಕುಮಾರ್ ಅವರು ಉಪವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸ್ಪಷ್ಟ ಸಂದೇಶ ನೀಡಿರುವುದಾಗಿ ತಿಳಿದು ಬಂದಿದೆ.

ನವಿಲುಗಳಿಂದ ಉದುರಿದ ಗರಿಗಳ ಸಂಗ್ರಹ ಕಾನೂನು ಬಾಹಿರವಲ್ಲ
ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ.ನವಿಲು ಗರಿಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ಭಾರತ ಸರ್ಕಾರ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತರ್ರಾಷ್ಟ್ರೀಯ ವ್ಯಾಪಾರದ ಸಮಾವೇಶ-ಸಿಐಟಿಇಎಸ್ ನಿಷೇಧಿಸಿದೆ.ನೈಸರ್ಗಿಕವಾಗಿ ನವಿಲುಗಳಿಂದ ಉದುರಿದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನುಬಾಹಿರವಲ್ಲ.ಆದರೆ ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಅದು ಶಿಕ್ಷಾರ್ಹ ಅಪರಾಧ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ವನ್ಯಜೀವಿಗಳ ಯಾವುದೇ ಅಂಗಾಂಗ, ಚರ್ಮ, ಮೂಳೆ, ಕೊಂಬು, ಕೂದಲು, ಗರಿ ಇತ್ಯಾದಿ ಸಂಗ್ರಹಿಸುವುದು, ಪ್ರದರ್ಶಿಸುವುದು ಅಪರಾಧ. ಕಾಯ್ದೆ ಜಾರಿಯಾಗುವ ಮುನ್ನ ಸಂಗ್ರಹಿಸಿದ್ದರೆ ಅಂಥವನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕು. ವನ್ಯಜೀವಿಗಳ ಅಂಗಾಂಗ ಸಂಗ್ರಹಿಸಿದ್ದು ಸಾಬೀತಾದರೆ ಅಂಥವರಿಗೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10 ಸಾವಿರದಿಂದ 25 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.

LEAVE A REPLY

Please enter your comment!
Please enter your name here