ಉಪ್ಪಿನಂಗಡಿ: ಕರ್ನಾಟಕ ಏಕೀಕರಣದ ಸುವರ್ಣ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕೆಮ್ಮಾರ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ. ಅವರು ಕರ್ನಾಟಕ ಏಕೀಕರಣದ ಸುವರ್ಣ ಸಂಭ್ರಮದ ಆಚರಣೆಯ ಕನ್ನಡ ರಾಜ್ಯೋತ್ಸವದ ಈ ಶುಭದಿನ, ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡುವ ದಿನವಾಗಿದೆ. ಕರ್ನಾಟಕ ಏಕೀಕರಣಕ್ಕೆ ಅಡಿಗಲ್ಲು ಹಾಕಿದ ಆಲೂರು ವೆಂಕಟರಾಯರಂತಹ ಅನೇಕ ಮಹನೀಯರನ್ನು ಈ ದಿನದಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ಭಾಷೆಯು ಜೇನಿನ ಹನಿಯಷ್ಟು ಸಿಹಿ, ಕೋಗಿಲೆಯ ದನಿಯಷ್ಟು ಸವಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡವನ್ನು ಉಳಿಸೋಣ ಮಕ್ಕಳಲ್ಲಿ ಕನ್ನಡದ ಒಲವನ್ನು ಬೆಳೆಸೋಣ, ಮೊಳಗಲಿ ಕನ್ನಡದ ನಾದ ಎಂದು ದಿನದ ಮಹತ್ವವನ್ನು ಮೆಹನಾಝ್ ರವರು ತಿಳಿಸಿಕೊಟ್ಟರು. ಕನ್ನಡ ನಾಡಿನಲ್ಲಿ ಕನ್ನಡ ಕಣ್ಮರೆಯಾಗುವುದು ವಿಷಾದದ ಸಂಗತಿ ಎನ್ನುವ ವಿಚಾರವನ್ನು ಮಕ್ಕಳು ತಮ್ಮ ಭಾಷಣದ ಮೂಲಕ ವ್ಯಕ್ತಪಡಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಪದ್ಮನಾಭ ಶೆಟ್ಟಿ ಬಡಿಲ,ಅಬ್ಬಾಸ್,ಸುಮಯ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯಗುರು ಜಯಶ್ರೀ ಎಂ ರವರು ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿ,ಹಿರಿಯ ಶಿಕ್ಷಕ ವೆಂಕಟರಮಣ ಭಟ್ ರವರು ವಂದಿಸಿ,ಸಂಧ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ಹಾಗೂ ಸಹ ಶಿಕ್ಷಕಿ ಲೀನಾ ಲಸ್ರಾಡೊರವರು ಸಹಕರಿಸಿದರು.