ಫಿಲೋಮಿನಾದಲ್ಲಿ ತಾ|ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟ ಸಂಪನ್ನ

0

ಬಾಲಕ, ಬಾಲಕಿಯರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು ಚಾಂಪಿಯನ್, ಕೊಂಬೆಟ್ಟು ಜ್ಯೂ.ಕಾಲೇಜು ರನ್ನರ್ಸ್

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನ.3 ರಂದು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಜರಗಿದ ತಾಲೂಕು ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನ ಕಂಡಿದೆ.
ಬಾಲಕರ ವಿಭಾಗದಲ್ಲಿ 72 ಅಂಕ ಹಾಗೂ ಬಾಲಕಿಯರ ವಿಭಾಗದಲ್ಲಿ 81 ಅಂಕ ಪಡೆದ ಫಿಲೋಮಿನಾ ಪದವಿ ಪೂರ್ವ ಕಾಲೇಜು ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಬಾಲಕರ ವಿಭಾಗದಲ್ಲಿ 42 ಅಂಕ ಹಾಗೂ ಬಾಲಕಿಯರ ವಿಭಾಗದಲ್ಲಿ 39 ಅಂಕ ಗಳಿಸಿದ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.

ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿ ಶ್ರವಣ್ ಕೆ.ಪಿ(800ಮೀ, 1500ಮೀ, 3000ಮೀ ಓಟದಲ್ಲಿ ಪ್ರಥಮ), ಬಾಲಕಿಯರ ವಿಭಾಗದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥ್ವಿ ಕೆ(ಶಾಟ್‌ಫುಟ್, ಡಿಸ್ಕಸ್, ಹ್ಯಾಮರ್ ತ್ರೋ ಪ್ರಥಮ) ಹಾಗೂ ಅನಘ ಕೆ.ಎನ್(100ಮೀ, 200ಮೀ, 400ಮೀನಲ್ಲಿ ಪ್ರಥಮ)ರವರು ಜಂಟಿಯಾಗಿ ವಿಜೇತರಾದರು.


ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಹಾಗೂ ಪಶುಪತಿ ಎಲೆಕ್ಟ್ರೋನಿಕ್ಸ್ ಮಾಲಕ ಪಶುಪತಿ ಶರ್ಮರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಫಿಲೋಮಿನಾದ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ನನಗೆ ಅಂದಿನ ನನ್ನ ಶಾಲಾದಿನಗಳನ್ನು ಮತ್ತೆ ನೆನಪಿಸುವಂತೆ ಮಾಡಿದೆ. ದೇಶದ ಬೆಳವಣಿಗೆ ಕ್ರೀಡೆಯಲ್ಲಿದೆ. ಜೀವನದಲ್ಲಿ ಒಂಟಿಯಾಗಿ ಹಾಗೂ ಟೀಮ್‌ವರ್ಕ್ ಆಗಿಯೂ ಗುರಿ ತಲುಪಲು ಸಾಧ್ಯ. ಕ್ರೀಡೆಯಲ್ಲಿ ದಿನದ ಒಂದು ಘಂಟೆ ಭಾಗವಹಿಸಿದಾಗ ನಮ್ಮಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಆಗಬಲ್ಲುದು ಎಂದರು.


ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಫಿಲೋಮಿನಾ ಕಾಲೇಜಿನ ಚಾರಿತ್ರಿಕ ಕ್ರೀಡಾಂಗಣದಲ್ಲಿ ಭಾಗವಹಿಸುವುದು ಒಂದು ಸುವರ್ಣಾವಕಾಶವಾಗಿದೆ. ನಮ್ಮಲ್ಲಿ ಒಳ್ಳೆಯ ಮನಸ್ಸು ಇದ್ದಾಗ ನಾವು ತೆಗೆದುಕೊಂಡ ಯಾವುದೇ ನಿರ್ಣಯಗಳು ಯಶಸ್ವಿಯಾಗಬಲ್ಲುದು. ಸೋಲೇ ಗೆಲುವಿನ ಪ್ರಥಮ ಮೆಟ್ಟಿಲು ಎಂಬಂತೆ ಕ್ರೀಡಾಪಟುಗಳು ಮುಂದಡಿಯಿಡಬೇಕು ಎಂದರು.


ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ವಿಜೇತರ ಬಹುಮಾನ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಫಿಲೋಮಿನಾ ಪ್ರೌಢಶಾಲೆಯ ನರೇಶ್ ಲೋಬೊ, ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸದಾಶಿವ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಯತೀಶ್ ಕುಮಾರ್, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಪೂರ್ಣಿಮಾ, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಕೀರ್ತನ್, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೆಡ್‌ಕ್ರಾಸ್, ರೋವರ‍್ಸ್ ರೇಂಜರ‍್ಸ್, ಕ್ರೀಡಾಪಟುಗಳು, ಉಪನ್ಯಾಸಕರಾದ ಸುಮ ಪಿ.ಆರ್, ಗೀತಕುಮಾರಿ, ಜ್ಯೋತಿ, ಭರತ್ ಕುಮಾರ್, ಶರತ್ ಆಳ್ವ ಚನಿಲ ಸಹಕರಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಉಷಾ ಯಶ್ವಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

9 ಕಾಲೇಜುಗಳು..200ಕ್ಕೂ ಮಿಕ್ಕಿ ಕ್ರೀಡಾಪಟುಗಳು..
ಈ ಕ್ರೀಡಾಕೂಟದಲ್ಲಿ ಒಂಭತ್ತು ಕಾಲೇಜುಗಳಾದ ವಿವೇಕಾನಂದ ಪ.ಪೂ ಕಾಲೇಜು, ಫಿಲೋಮಿನಾ ಪ.ಪೂ ಕಾಲೇಜು, ಬಪ್ಪಳಿಗೆ ಅಂಬಿಕಾ ಪ.ಪೂ ಕಾಲೇಜು, ನರೇಂದ್ರ ಪ.ಪೂ ಕಾಲೇಜು, ನೆಲ್ಲಿಕಟ್ಟೆ ಅಂಬಿಕಾ ಪ.ಪೂ ಕಾಲೇಜು, ಕೆಯ್ಯೂರು ಸರಕಾರಿ ಪ.ಪೂ ಕಾಲೇಜು, ಬೆಟ್ಟಂಪಾಡಿ ಸರಕಾರಿ ಪ.ಪೂ ಕಾಲೇಜು, ಕೊಂಬೆಟ್ಟು ಜ್ಯೂನಿಯರ್ ಕಾಲೇಜು, ಬೆಳಿಯೂರುಕಟ್ಟೆ ಸರಕಾರಿ ಪ.ಪೂ ಕಾಲೇಜಿನ ಸುಮಾರು 200ಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕ್ರೀಡಾಧ್ವಜ ಅವರೋಹಣ..
ಸಮಾರೋಪ ಸಮಾರಂಭದ ಬಳಿಕ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದ ಬಳಿ ಇರಿಸಲಾಗಿದ್ದ ಪೀಠದಲ್ಲಿ ಬೆಳಿಗ್ಗೆ ಉರಿಸಿಟ್ಟಿದ್ದ ಕ್ರೀಡಾಜ್ಯೋತಿಯನ್ನು ನೀರು ಚಿಮುಕಿಸುವುದರೊಂದಿಗೆ ಆರಿಸಲಾಯಿತು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಕ್ರೀಡಾಧ್ವಜವನ್ನು ಅವರೋಹಣಗೊಳಿಸಿ, ಕ್ರೀಡಾಧ್ವಜವನ್ನು ಮುಖ್ಯ ಅತಿಥಿ ಪಶುಪತಿ ಶರ್ಮರವರಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ತೆರೆ ಎಳೆದರು.

LEAVE A REPLY

Please enter your comment!
Please enter your name here