ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ, ಬಹುಮಾನ ವಿತರಣಾ ಸಮಾರಂಭ

0

ಕನ್ನಡದ ಓದುಗರ ಸಂಖ್ಯೆ ಈಗೀಗ ಹೆಚ್ಚುತ್ತಿದೆ : ಡಾ.ನರೇಂದ್ರ ರೈ ದೇರ್ಲ


ಪುತ್ತೂರು: ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವುದು ಅತ್ಯಂತ ಪ್ರಮುಖ ಬೆಳವಣಿಗೆ. ನಮ್ಮ ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 35 ಪುಸ್ತಕಗಳು ಬಿಡುಗಡೆಯಾಗುತ್ತಿವೆ ಎಂಬುದು ಗಮನಾರ್ಹ ಸಂಗತಿ. ಕೆಲವು ವರ್ಷಗಳ ಹಿಂದೆ ಓದುಗರ ಸಂಖ್ಯೆ ಕುಸಿದು ಆತಂಕಕ್ಕೊಳಗಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ ಬದಲಾದ ಸಂದರ್ಭ ಕನ್ನಡದ ಬೆಳವಣಿಗೆಗೆ ಪೂರಕವಾಗಿ ಮೂಡಿಬರುತ್ತಿದೆ ಎಂದು ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ನೆಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಭಾಷಾ ಪ್ರೇಮವೆಂದರೆ ಕೇವಲ ಧರಣಿ ಮಾಡುವುದು, ಅನ್ಯ ಭಾಷಿಕ ಬರಹಗಳಿಗೆ ಮಸಿ ಬಳಿಯುವುದಲ್ಲ. ಅವುಗಳೆಲ್ಲ ಭಾಷಾ ಪ್ರೇಮದ ಭಾವನೆಗಳ ಪ್ರಕಟಗೊಳ್ಳುವಿಕೆ ಎನ್ನುವುದು ಹೌದಾದರೂ ಅತ್ಯುತ್ಕೃಷ್ಟವಾದ ಭಾಷಾ ಪ್ರೇಮವೆಂದರೆ ಭಾಷೆಯನ್ನು ಅನುಭವಿಸುವುದು, ಭಾಷೆಯಲ್ಲಿ ವ್ಯವಹರಿಸುವುದೇ ಆಗಿದೆ. ನಿತ್ಯ ಜೀವನದಲ್ಲಿ ನಮ್ಮ ಮಾತೃಭಾಷೆಯನ್ನು ನಿರಂತರವಾಗಿ ಅಳವಡಿಸಿ ಮುನ್ನಡೆಯುವುದರಿಂದ ಭಾಷೆಗೂ ಒಳಿತಾಗುತ್ತದೆ. ಕನ್ನಡಿಗರು ಭಾಷಾ ಪ್ರೇಮವನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಾವು ಭಾಷಾಭಿಮಾನದಿಂದ ದೂರವಾಗುತ್ತಿದ್ದೇವೆ. ಹಾಗಾಗಿಯೇ ನಮ್ಮದೇ ರಾಜ್ಯದ ರಾಜಧಾನಿಯು ಅನ್ಯ ಭಾಷಿಕರು ಬಂದು ಮೇಯುವ ಸ್ಥಳವಾಗಿ ಪರಿವರ್ತನೆ ಹೊಂದಿದೆ. ಬೆಂಗಳೂರಿನಲ್ಲಿ ಕೇವಲ 35 ಶೇಕಡಾದಷ್ಟು ಜನ ಮಾತ್ರ ನಿಜವಾದ ಕನ್ನಡಿಗರೆಂಬುದು ಗಾಬರಿ ತರುವ ವಿಚಾರ. ಕೇರಳ, ತಮಿಳುನಾಡಿನ ಮಂದಿ ತಾವು ಹೋದಲ್ಲೆಲ್ಲಾ ತಮ್ಮ ತಂಡಗಳನ್ನು ಬಲಪಡಿಸುತ್ತಾ, ತಮ್ಮದೇ ಭಾಷೆಯಲ್ಲಿ ವ್ಯವಹರಿಸುತ್ತಾ ಆಯಾ ಭಾಷಿಕ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಕನ್ನಡಿಗರು ಇಂತಹ ಪ್ರಯತ್ನಗಳಿಗೆ ಅಡಿಯಿಡಬೇಕಿದೆ ಎಂದರು.


ಕನ್ನಡ ರಾಜ್ಯೋತ್ಸವದ ನೆಲೆಯಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಂಕಿತಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಅತಿಥಿ ಪರಿಚಯ ನಡೆಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ. ಬಹುಮಾನ ವಿಜೇತರ ವಿವರ ನೀಡಿದರು. ವಿದ್ಯಾಥಿನಿ ಮೇಘನಾ ಕೆ.ಸಿ ವಂದಿಸಿ, ವಿದ್ಯಾಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here