ಕಜೆಕ್ಕಾರ್ ಶ್ರೀ ಸತ್ಯಸಾರಮಾನಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ

0

ಉಪ್ಪಿನಂಗಡಿ: ಇಲ್ಲಿನ ಕಜೆಕ್ಕಾರ್ ಎಂಬಲ್ಲಿ ಪುನರ್ ನಿರ್ಮಿಸಲ್ಪಟ್ಟ ಶ್ರೀ ಸತ್ಯಸಾರಮಾನಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನ.4ರಂದು ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.ವೇದಮೂರ್ತಿ ವಿಷ್ಣು ಪ್ರಸಾದ್ ಶರ್ಮ ರವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನಗಳು ನಡೆದವು. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನೆರವೇರಿತು.

ಈ ಕಜೆಕ್ಕಾರ್ ಕಾಲನಿಯಲ್ಲಿ ಅನಾದಿಕಾಲದಿಂದಲೂ ದಲಿತ ಸಮಾಜದ ಬಂಧುಗಳು ವಾಸ್ತವ್ಯವಿದ್ದು, ಇಲ್ಲಿ ಸತ್ಯಸಾರಮಾನಿ ಮತ್ತು ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬರಲಾಗುತ್ತಿತ್ತು. ಆದರೆ ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ಆರಾಧನೆ ನಿಂತು ಹೋಗಿ ದೈವಸ್ಥಾನ ಜೀರ್ಣಾವಸ್ಥೆ ತಲುಪಿತ್ತು. ದಲಿತ ಸಮಾಜ ಬಂಧುಗಳ 18 ಮನೆಗಳು ಇಲ್ಲಿದ್ದು, ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯು ಸಮಾಜದಲ್ಲಿ ಉಪೇಕ್ಷಿತ ಬಂಧುಗಳ ಮನೆಯಂಗಳದಲ್ಲಿ ಭಜನೆ ಮಾಡುವ ಸಂಕಲ್ಪದಿಂದ ಕಜೆಕ್ಕಾರ್ ಕಾಲನಿಗೆ ಭೇಟಿ ನೀಡಿದಾಗ ಅಲ್ಲಿನ ಜನ ಭಜನಾ ಮಂಡಳಿಯನ್ನು ಸಂಭ್ರಮದಿಂದ ಸ್ವಾಗತಿಸಿ ಕೈಯಾರೆ ಭೋಜನ ಸಿದ್ದಪಡಿಸಿ ಉಣಬಡಿಸಿದರು. ಬಳಿಕದ ದಿನಗಳಲ್ಲಿ ಅಲ್ಲಿನ ಜನರ ಜೀವನದಲ್ಲಿ ಅವ್ಯಕ್ತ ಬದಲಾವಣೆಗಳು ಕಾಣಿಸಿಕೊಂಡು ಅಂದಿನ ಸಾಮಾಜಿಕ ಧುರೀಣ, ಪ್ರಸಕ್ತ ಶಾಸಕರಾಗಿರುವ ಅಶೋಕ್ ಕುಮಾರ್ ರೈ ರವರ ವಿಶೇಷ ಮುತುವರ್ಜಿಯಿಂದಾಗಿ ಕಾಲನಿಯ 18 ಮನೆಗಳಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಭೂಮಿಯನ್ನು ಉಚಿತವಾಗಿ ನೀಡಿದ್ದು, ಈ ಮೂಲಕ ಈ ಕಾಲನಿಯವರ ಬಹು ಕಾಲದ ಕನಸು ನನಸಾಗಿತ್ತು. ಆ ಬಳಿಕ 2022 ರ ದೀಪಾವಳಿಯಂದು ಶ್ರೀ ಕಾಳಿಕಾಂಬ ಭಜನಾ ಮಂಡಳಿಯ ನೇತೃತ್ವದಲ್ಲಿ ಕಾಲನಿಯಲ್ಲಿ ನಡೆಸಲಾದ ತುಡರ್ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯೀ ಕಾಲನಿಗೆ ಭೇಟಿ ನೀಡಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ತಂದ ಜ್ಯೋತಿಯನ್ನು ಪಾಳುಬಿದ್ದಿದ್ದ ದೈವಸ್ಥಾನದಲ್ಲಿ ಮೊದಲು ಬೆಳಗಿಸಿ ಬಳಿಕ ಕಾಲನಿಯ ಎಲ್ಲಾ ಮನೆಗಳಲ್ಲಿ ಬೆಳಗಿಸುವ ಮೂಲಕ ತುಡರ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದ್ದರು. ಯಾವಾಗ ತುಡರ್ ಕಾರ್ಯಕ್ರಮ ತಮ್ಮ ಕಾಲನಿಯ ದೈವ ಸ್ಥಾನದಲ್ಲಿ ನಡೆಸಲ್ಪಟ್ಟಿತ್ತೋ ಆ ಕ್ಷಣದಿಂದ ಅಲ್ಲಿನ ಯುವಕರ ಮನದಲ್ಲಿ ದೈವ ಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಚಿಂತನೆ ಮೊಳಕೆಯೊಡೆದು ದೈವಸ್ಥಾನ ನಿರ್ಮಾಣಗೊಂಡು ನ.4ರ ಬೆಳಗ್ಗೆ 9:48ರ ಬಳಿಕ ನಡೆಯುವ ಧನು ಲಗ್ನದಲ್ಲಿ ಸುಮೂಹರ್ತದಲ್ಲಿ ಶ್ರೀ ಸತ್ಯಸಾರಮಾನಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.


ಈ ಸಂದರ್ಭ ಗಣ್ಯರಾದ ಮಹಾಲಿಂಗ, ಸತೀಶ್, ಸಂದೇಶ್ ಕಜೆಕ್ಕಾರ್, ಶೀನಪ್ಪ , ಭಾರತಿ , ಸುಜಯ್ , ರಾಜೇಶ್ , ಗುರುವ, ಸುಧಾಕರ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸುನಿಲ್ ಕುಮಾರ್ ದಡ್ಡು, ಪ್ರವೀಣ್ ಕುಮಾರ್ ಜೈನ್, ಸೋಮನಾಥ, ರವಿ, ಪ್ರಸನ್ನ ಪೆರಿಯಡ್ಕ, ವೆಂಕಪ್ಪ ಪೂಜಾರಿ, ಹೊನ್ನಪ್ಪ ಪೂಜಾರಿ, ಉದಯ ಅತ್ರಮಜಲು, ಮೋಹನ್ ಶೆಟ್ಟಿ, ಶೇಖರ್ ಪೂಜಾರಿ ಗೌಂಡತ್ತಿಗೆ, ಸುರೇಶ್ ಪೂಜಾರಿ ಗೌಂಡತ್ತಿಗೆ, ಶಂಕರನಾರಾಯಣ ಭಟ್ ಬೊಳ್ಳಾವು, ಉದಯಶಂಕರ್ ಭಟ್ ಪದಾಳ, ಇಬ್ರಾಹೀಂ , ಇಸಾಕ್, ಝಕಾರಿಯಾ ಸ್ನೇಕ್, ಬಾಲಕೃಷ್ಣ ಶೆಟ್ಟಿ ಕಜೆಕ್ಕಾರು, ಜಗದೀಶ್ ಶೆಟ್ಟಿ ಕಜೆಕ್ಕಾರು, ಶರತ್ ಕೋಟೆ, ಉಷಾ ಮುಳಿಯ, ಪುಷ್ಪಲತಾ ಜನಾರ್ದನ್, ಸುಜಾತ ಕೃಷ್ಣ ಆಚಾರ್ಯ, ಐ. ಪುರುಷೋತ್ತಮ ನಾಯಕ್ , ಹರೀಶ್ ಭಂಡಾರಿ, ಕುಂಞಣ್ಣ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here