ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ  ಸಭೆ

0

ದೇವಸ್ಥಾನದ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳೋಣ- ಅಶೋಕ್‌ ಕುಮಾರ್‌ರೈ
20 ವರ್ಷಗಳ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ – ಸಂತೋಷ್‌ ಕುಮಾರ್‌ ರೈ
ಕ್ಷೇತ್ರದ ಅಭಿವೃದ್ದಿಯಲ್ಲಿ ಸಂತೋಷ್‌ ಕುಮಾರ್‌ರೈ ಹಾಗೂ ಅವರ ತಂಡದ ಶ್ರಮ ಮಹತ್ವದ್ದು – ಸಂಜೀವ ಗೌಡ 

ಪುತ್ತೂರು : ದೇವಸ್ಥಾನದ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಾಗ ದೇವರ ಅನುಗ್ರಹ ದೊರಕಲು ಸಾಧ್ಯ.ಯಾವುದೇ ಜವಾಬ್ದಾರಿ ತೆಗೆದುಕೊಂಡರೂ ಅದನ್ನು ಸರಿಯಾಗಿ ನಿರ್ವಹಿಸಬೇಕು.ಎಲ್ಲಾ ಸಮಿತಿಯ ಪದಾಧಿಕಾರಿಗಳು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ,ಪುತ್ತೂರು ಶಾಸಕ ಅಶೋಕ್‌ಕುಮಾರ್‌ರೈ ಕೆ.ಎಸ್.‌ಹೇಳಿದರು.ಅವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಸ್ಥಾನದ ರಸ್ತೆಯ ಅಭಿವೃದ್ದಿ
ದೇವಸ್ಥಾನಕ್ಕೆ ಬರುವ ರಸ್ತೆಯೂ ಅಭಿವೃದ್ದಿಯಾಗಬೇಕಿದೆ.ಬ್ರಹ್ಮಕಲಶೋತ್ಸವಕ್ಕೆ ಕೆಲವೇ  ತಿಂಗಳು ಉಳಿದಿದ್ದು ,ಆದ್ಯತೆಯ ಮೇರೆಗೆ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಅಶೋಕ್‌ಕುಮಾರ್‌ರೈ ಹೇಳಿದರು.

ದೇವಸ್ಥಾನಕ್ಕೆ ರಾಜಕೀಯ ಬರಬಾರದು
ದೇವಸ್ಥಾನದಲ್ಲಿ ಎಲ್ಲರೂ ಭಕ್ತರೇ, ದೇವಸ್ಥಾನಕ್ಕೆ ಬರುವಾಗ ರಾಜಕೀಯ ಸೇರಿದಂತೆ ಯಾವುದೇ ವಿಚಾರಗಳಿದ್ದರೂ ದೇವಸ್ಥಾನದ ಆವರಣದ ಹೊರಗೆ ಬಿಟ್ಟು ಬರಬೇಕು.ದೇವಸ್ಥಾನದೊಳಗೆ ಧಾರ್ಮಿಕ ಶ್ರದ್ದೆ ,ಭಕ್ತಿ ,ನಂಬಿಕೆ ಮಾತ್ರ ಇರಬೇಕು ಎಂದು ಅಶೋಕ್‌ಕುಮಾರ್‌ರೈ ಹೇಳಿದರು.

ಬ್ರಹ್ಮಕಲಶೋತ್ಸವ ದೇವರಿಗೆ ಮಾತ್ರ ಅಲ್ಲ.ಭಕ್ತರಿಗೂ ಬ್ರಹ್ಮಕಲಶವಾದಂತಾಗುತ್ತದೆ.ಕೆಲವರ ಮನಸ್ಸು ಸಂಕುಚಿತವಾಗಿರುತ್ತದೆ. ದೇವಸ್ಥಾನದ ಕೆಲಸದಲ್ಲಿ ತೊಡಗಿಕೊಂಡಾಗ ನಮ್ಮ ಮನಸಿನ ಸಂಕುಚಿತ ಭಾವನೆ ದೂರವಾಗುತ್ತದೆ.ಪರಸ್ಪರ ಜತೆಯಾದಾಗ ಬಾಂಧವ್ಯ  ವೃದ್ದಿಯಾಗುತ್ತದೆ.ನಾವು  ಕಷ್ಟ ಬಂದಾಗ ಮಾತ್ರ ದೇವರಲ್ಲಿ ಕೇಳಿಕೊಳ್ಳುವುದಲ್ಲ.ಎಲ್ಲಾ ಸಂದರ್ಭದಲ್ಲೂ ದೇವರನ್ನು ಪ್ರಾರ್ಥಿಸಬೇಕು ಎಂದು ಅಶೋಕ್‌ ಕುಮಾರ್‌ರೈ ಹೇಳಿದರು.ದೇವರ ಅನುಗ್ರಹದಿಂದ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ತೊಡಗಿಕೊಳ್ಳುವ ಭಾಗ್ಯ ನನಗೆ ದೊರಕಿದೆ.ಇದೀಗ ನಳೀಲು ದೇವಸ್ಥಾನದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷನಾಗುವ ಭಾಗ್ಯವನ್ನು ದೇವರು ಹಾಗೂ ಕ್ಷೇತ್ರದ ಭಕ್ತರು ನೀಡಿದ್ದಾರೆ ಎಂದರು.

ನಿರಂತರ ಸಂತರ್ಪಣೆ
ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಸಂತರ್ಪಣೆಯೂ ಮುಖ್ಯ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ,ಸಂಜೆ ಉಪಾಹಾರ ,ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಬೇಕು.ಊರವರು ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಚೆನ್ನಾಗಿ ಸತ್ಕರಿಸಬೇಕು.ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.ಬ್ರಹ್ಮಕಲಶೋತ್ಸವದಂದು ಪ್ರತಿದಿನ ಸೆಗಣಿ ಸಾರಿಸಬೇಕು.ನಾನೂ ಜತೆಯಾಗುತ್ತೇನೆ. ಎಲ್ಲಾ ಕಾರ್ಯದಲ್ಲೂ ಭಕ್ತರು ಸಮರ್ಪಣಾ ಭಾವದಿಂದ ಸೇವೆ ಮಾಡಬೇಕು.ಕ್ಷೇತ್ರಕ್ಕೆ ಆರ್ಥಿಕ ಕ್ರೋಢಿಕರಣವೂ ಮುಖ್ಯ ಈ ನಿಟ್ಟಿನಲ್ಲಿ ಭಕ್ತರು ಕೈ ಜೋಡಿಸಬೇಕು.ನಾನೂ ಸ್ವಯಂ ಸೇವಕನಾಗಿ ಸೇವೆ ಮಾಡುತ್ತೇನೆ. ಒಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆಯಬೇಕು ಎಂದು ಅಶೋಕ್‌ಕುಮಾರ್‌ರೈ ಹೇಳಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್‌ರೈ ನಳೀಲು ಮಾತನಾಡಿ, ಬ್ರಹ್ಮಕಲಶೋತ್ಸವವು 2024 ಫೆ.17ರಿಂದ ಫೆ.24ರವರೆಗೆ ನಡೆಯಲಿದ್ದು ,ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ನಿರಂತರ ಅಭಿವೃದ್ದಿ ಕಾರ್ಯಗಳು ನಡೆಯುತ್ತಾ ಬಂದಿದೆ.ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಸಾದ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ.ನೂತನವಾಗಿ ವಸಂತ ಮಂಟಪ ನಿರ್ಮಾಣವಾಗಿದೆ.20 ವರ್ಷಗಳ ಹಿಂದೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆದಿದ್ದು, ಇದೀಗ ಮತ್ತೆ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮಗೆಲ್ಲರಿಗೂ ದೊರಕಿದೆ ಎಂದು ಹೇಳಿ ಬ್ರಹ್ಮಕಲಶೋತ್ಸವದ ಒಟ್ಟು ಕಾರ್ಯಕ್ರಮಗಳ ಚೌಕಟ್ಟು ವಿವರಿಸಿದರು.

ದೇವಸ್ಥಾನ ಪೂಜೆ ,ಉತ್ಸವಕ್ಕೆ ಮಾತ್ರ ಸೀಮಿತವಲ್ಲ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆ ,ಉತ್ಸವಕ್ಕೆ ಮಾತ್ರ ಸೀಮಿತವಲ್ಲ.ಈ ದೇವಸ್ಥಾನದಲ್ಲಿ ಮದುವೆ ಮೊದಲಾದ ಸಮಾರಂಭ ನಡೆಸಲು ಉಚಿತವಾಗಿ ಅವಕಾಶ ಇದೆ.ಈ ದೇವಸ್ಥಾನವೂ ಎಲ್ಲರಿಗೂ ಪ್ರಯೋಜನಕಾರಿಯಾಗಬೇಕು ಎಂಬ ಬಯಕೆ ನಮ್ಮದು.ಈ ಬಾರಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ ಇತ್ತು.ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಭಾಗಿಯಾಗಬೇಕು.20 ವರ್ಷಗಳ ಹಿಂದೆ ದೇವಸ್ಥಾನ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಭಕ್ತರು ಕೈ ಜೋಡಿಸಿದ್ದಾರೆ. ಈ ಬಾರಿಯ ಬ್ರಹ್ಮಕಲಶೋತ್ಸವ ನಿಟ್ಟಿನಲ್ಲಿ ದೇವಸ್ಥಾನದ ಆವರಣ ವಿಶಾಲಮಾಡಲಾಗಿದೆ.ದೇವಳದ ಸುತ್ತ ಶೀಟ್‌ಅಳವಡಿಸಲಾಗಿದೆ. ಎಲ್ಲಾ ಕಾರ್ಯಗಳೂ ಸುಸೂತ್ರವಾಗಿ ನಡೆಯ ಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಲಾಗುತ್ತದೆ. ಭಕ್ತರೂ ,ಊರವರು ಕೈ ಜೋಡಿಸಬೇಕು.ಇಲ್ಲಿಯವರೆಗೂ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲೂ ಉತ್ತಮ ಸಹಕಾರ ನೀಡಿದ್ದೀರಿ ,ಮುಂದೆಯೂ ಎಲ್ಲರ ಸಹಕಾರ ನಿರಂತರವಾಗಿರಲಿ. ಆಡಳಿತ ಮೊಕ್ತೇಸರನಾಗಿ ಏನಾದರೂ ತಪ್ಪಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ ಸಂತೋಷ್‌ಕುಮಾರ್‌ರೈ ಅವರು ನಳೀಲು ಬ್ರಹ್ಮಕಲಶೋತ್ಸವ ಹತ್ತೂರಿನಲ್ಲೂ ಹೆಸರು ಪಡೆಯಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ದೇವಸ್ಥಾನದ ಹಿರಿಯ ಮೊಕ್ತೇಸರ ಚಂದ್ರಶೇಖರ ರೈ  ಮೊದೆಲ್ಕಾಡಿ ಮಾತನಾಡಿ , ಹಿರಿಯರ ಕಾಲದಿಂದಲೂ ಆರಾಧನೆ ನಡೆಯುತ್ತಿದ್ದ ನಳೀಲು ಸುಬ್ರಹ್ಮಣ್ಯ ಕ್ಷೇತ್ರ ಇಂದು ನಿರಂತರ ಅಭಿವೃದ್ದಿಯಿಂದ ಹಾಗೂ ದೇವರ ಕೃಪಾಕಟಾಕ್ಷದಿಂದ ಬೆಳಗಿ ನಿಂತಿದೆ.ಮುಂಬರುವ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರಿಗೂ ದೇವರ ಸೇವೆ ಮಾಡುವ ಅವಕಾಶ ದೊರೆತಿದೆ ಎಂದರು.

ಪಾಲ್ತಾಡಿ ಚಾಕೋಟೆತ್ತಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ  ಸಂಜೀವ ಗೌಡ ಪಾಲ್ತಾಡಿ ಮಾತನಾಡಿ ,2003ರಲ್ಲಿ ನವೋದಯ ಸ್ವಸಹಾಯ ಸಂಘ ಆರಂಭದ ಸಮಯದಲ್ಲಿ ಸಂಘದ ವತಿಯಿಂದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ನಾವು ತೊಡಗಿಕೊಳ್ಳುವ ಭಾಗ್ಯ ದೊರಕಿತ್ತು. ಆ ಸಮಯದಲ್ಲಿ ಗುಡಿ ಮಾತ್ರ ಇತ್ತು, ಈಗ ಕ್ಷೇತ್ರ ಬೆಳೆದಿದೆ.ಇದರ ಹಿಂದೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್‌ಕುಮಾರ್‌ರೈ ಹಾಗೂ ಅವರ ತಂಡದ ಶ್ರಮ ಮಹತ್ವದ್ದು.ಪಾಲ್ತಾಡಿ ಉಳ್ಳಾಕುಲು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾಗಿಯೂ ಸಂತೋಷ್‌ಕುಮಾರ್‌ರೈ ಅವಿರತವಾಗಿ ಶ್ರಮಿಸಿ ಅಲ್ಲಿಯೂ ಸೇವೆ ಮಾಡಿದ್ದಾರೆ. ದೇವರ ಅನುಗ್ರಹದಿಂದ ಇನ್ನಷ್ಟು ಕಾರ್ಯಗಳು ನಡೆಯಲಿ.ದೇವಸ್ಥಾನದ ಎಲ್ಲಾ ಕಾರ್ಯಗಳಲ್ಲೂ ನಾವೆಲ್ಲರೂ ಕೈ ಜೋಡಿಸುತ್ತೇವೆ ಎಂದರು.ಹರಿಕೃಷ್ಣ ಭಟ್‌ಬರೆಮೇಲು ಮಾತನಾಡಿ ,ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು ,ಶೇ.75ರಷ್ಟು ಅಭಿವೃದ್ದಿ ಕಾರ್ಯ ಪೂರ್ಣಗೊಂಡಿದೆ.ಮುಂದಿನ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಶಕ್ತಿಮೀರಿ ತೊಡಗಿಸಿಕೊಳ್ಳೋಣ ಎಂದರು.

ಪಾಲ್ತಾಡಿ ಶ್ರೀಉಳ್ಳಾಕುಲು ಫ್ರೆಂಡ್ಸ್‌ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರವೀಣ್‌ರೈ ನಡುಕೂಟೇಲು ಮಾತನಾಡಿ , ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಜನ ಸೇರುವುದು ಕಡಿಮೆ , ಆದರೆ ನಳೀಲು ದೇವಸ್ಥಾನದ ಪೂರ್ವಭಾವಿ ಸಭೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.ತೀರಾ ಹಳ್ಳಿ ಪ್ರದೇಶ ಹಾಗೂ ಹಸಿರಿನ ಮದ್ಯೆ ಕಂಗೊಳಿಸುತ್ತಿರುವ ಅಪರೂಪದ ಕ್ಷೇತ್ರ ನಳೀಲು ದೇವಸ್ಥಾನ.20 ವರ್ಷಗಳ ಹಿಂದೆ ನಾವೆಲ್ಲ ಬಾಲಕರಾಗಿದ್ದೆವು.ಈಗ ನಮಗೆ ಬ್ರಹ್ಮಕಲಶೋತ್ಸವದ ಕೆಲಸದಲ್ಲಿ ಪಾಲ್ಗೊಳ್ಳುವ ಭಾಗ್ಯ ದೊರಕಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ವೈಭವದಿಂದ ನಡೆಯಲಿದೆ.ಯಕ್ಷಗಾನ ,ಭರತನಾಟ್ಯ, ಭಕ್ತಿ ಸಂಗೀತ ಹಾಗೂ ಜಿಲ್ಲೆಯ ಪ್ರಸಿದ್ದ ತಂಡಗಳಿಂದ ನಾಟಕಗಳೂ ಪ್ರದರ್ಶನವಾಗಲಿದೆ ಎಂದರು.

ಸುಂದರ ಪೂಜಾರಿ ಮಣಿಕ್ಕರ ಮಾತನಾಡಿ , 20 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆ ದೊರಕಿತ್ತು.ಇದೀಗ ಮತ್ತೊಮ್ಮೆ ಅವಕಾಶ ಸಿಕ್ಕಿದೆ.ಕ್ಷೇತ್ರದ ಅಭಿವೃದ್ದಿ ಹಾಗೂ ಕ್ಷೇತ್ರಕ್ಕೆ ಬರುವ ಭಕ್ತರನ್ನು ತನ್ನ ಸರಳತೆಯಿಂದ ಬರಮಾಡಿಕೊಳ್ಳುವ ಸಂತೋಷ್‌ಕುಮಾರ್‌ರೈ ಅವರು ,ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ. ಮುಂದಿನ ಎಲ್ಲಾ ಕಾರ್ಯಗಳಲ್ಲೂ ಶಕ್ತಿ ಮೀರಿ ಎಲ್ಲರೂ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಕೊಳ್ತಿಗೆ ಸಿಎ ಬ್ಯಾಂಕ್‌ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು ಮಾತನಾಡಿ, ದೇವಸ್ಥಾನದ ಅಭಿವೃದ್ದಿ ಕಾರ್ಯದಲ್ಲಿ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್‌ರೈ ನಳೀಲು ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಮುಂದೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಎಲ್ಲರೂ ಅವರ ಕೈ ಬಲಪಡಿಸುವ ಕಾರ್ಯ ಮಾಡಬೇಕು.ಸಂತೋಷ್‌ರೈ ಅವರು ಸಮುದ್ರವಾಗಿರಬಹುದು ಆದರೆ ನಾವೆಲ್ಲರೂ ತೊರೆಯಂತೆ ಅವರ ಜತೆ ಕೈಜೋಡಿಸಿಕೊಳ್ಳಬೇಕು ಎಂದರು.

ವಿದ್ಯಾಧರ ಗೌಡ ಪಾರ್ಲ ಮಾತನಾಡಿ , ದೇವಸ್ಥಾನದ 2ನೇ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮಗೆ ಮತ್ತೆ ದೊರಕಿದೆ.2003ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಅಧ್ಯಕ್ಷನಾಗಿದ್ದೆ, ಆ ಸಂದರ್ಭದಲ್ಲಿ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಯೋಜನೆಯ ಸದಸ್ಯರ ಸಹಯೋಗದೊಂದಿಗೆ ಭಾಗವಹಿಸಿದ್ದೇವೆ.ಇದೀ ಮತ್ತೆ ನಳೀಲು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದೆ.ಎಲ್ಲರೂ ದೇವರ ಕಾರ್ಯದಲ್ಲಿ ಜತೆಯಾಗೋಣ ಎಂದರು.

ದೇವಸ್ಥಾನದ ಮೊಕ್ತೇಸರರಾದ ಡಾ.ಸುಚೇತಾ ಜೆ.ಶೆಟ್ಟಿ ಮಾತನಾಡಿ ,ಈ ಹಿಂದೆ ನಡೆದ ಬ್ರಹ್ಮಕಲಶೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ.ಆ ಸಮಯದಲ್ಲಿ ಮಹಿಳೆಯರ ದೊಡ್ಡ ತಂಡವೇ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು, ಈ ಬಾರಿಯೂ ಎಲ್ಲರ ಸಹಕಾರದೊಂದಿಗೆ ನಳೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದರು.

ಮೊಕ್ತೇಸರರಾದ ಕಿಶೋರ್‌ಕುಮಾರ್‌ರೈ ನಳೀಲು ಮಾತನಾಡಿ , ಈ ಹಿಂದೆ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಮನೆಮನೆಗೆ ನಿಧಿಸಂಗ್ರಹಕ್ಕೆ ಕಾಣಿಕೆ ಡಬ್ಬಿ ನೀಡಿದ್ದೇವು.ಈ ಬಾರಿ ಕಾಣಿಕೆ ಡಬ್ಬಿ ನೀಡುವುದಿಲ್ಲ, ದೇಣಿಗೆ ನೀಡುವ ಭಕ್ತಾದಿಗಳು ದೇವಸ್ಥಾನದಲ್ಲಿ ನೀಡಬಹುದು ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಪ್ರಾಯೋಜಕರಾಗಿ ,ಅನ್ನ ಸಂತರ್ಪಣೆಯ ಸೇವಾ ಕರ್ತರಾಗಿ ಪಾಲ್ಗೊಳ್ಳಬಹುದು ಎಂದರು.ವಿಠಲ ಶೆಟ್ಟಿ ಪಾಲ್ತಾಡಿ ಗುತ್ತಿನಮನೆ ಮಾತನಾಡಿ , ಈ ಹಿಂದೆ ದೇವಸ್ಥಾನ ಪೊದೆಗಳ ನಡುವೆ ಸಣ್ಣ ಗುಡಿಯಂತಿತ್ತು.ಈಗ ಅದ್ಭುತವಾಗಿ ಕ್ಷೇತ್ರ ಅಭಿವೃದ್ದಿಯಾಗಿದೆ.ಇದರ ಹಿಂದೆ ಸಂತೋಷ್‌ಕುಮಾರ್‌ರೈ ಅವರ ಸಮರ್ಪಣಾ ಭಾವ ಎದ್ದು ಕಾಣುತ್ತಿದೆ.ಮುಂದಿನ ಕೆಲಸ ಕಾರ್ಯಗಳಲ್ಲಿ ನಾವೆಲ್ಲರೂ ಜತೆಯಾಗಿ ದೇವರ ಕೈಕಂರ್ಯದಲ್ಲಿ ಪಾಲ್ಗೊಳ್ಳೋಣ ಎಂದರು.ಪಾಲ್ತಾಡು ನಡುಮನೆ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್‌ರೈ ನಡುಮನೆ , ರಘುನಾಥ ರೈ ನಡುಕೂಟೇಲು ,ಅಮರನಾಥ ರೈ ಬಾಕಿಜಾಲು , ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.

ವೇದಿಕೆಯಲ್ಲಿ ಹಿರಿಯ ಮೊಕ್ತೇಸರರಾದ ನಾರಾಯಣ ರೈ ಮೊದೆಲ್ಕಾಡಿ ,ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಅರುಣ್‌ಕುಮಾರ್‌ರೈ ,ಮೊಕ್ತೇಸರರಾದ ಮೋಹನ ದಾಸ್‌ರೈ , ಸತೀಶ್‌ರೈ ,ಪ್ರವೀಣ್‌ಕುಮಾರ್‌ರೈ , ಸುರೇಶ್ಚಂದ್ರ ರೈ ನಳೀಲು ಮೊದಲಾದವರಿದ್ದರು.ಕಾರ್ಯಕ್ರಮದಲ್ಲಿ ಅಶೋಕ್‌ಕುಮಾರ್‌ರೈ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ  ಊರ ,ಪರವೂರಿನ ಭಕ್ತಾದಿಗಳು, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.ದೇವಸ್ಥಾನದಲ್ಲಿ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್‌ರೈ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಪ್ರವೀಣ್‌  ಚೆನ್ನಾವರ ಅವರು ಬ್ರಹ್ಮಕಲಶೋತ್ಸವದ ಸಮಿತಿಯ ಕರಡು ಪಟ್ಟಿಯನ್ನು ಸಭೆಯ ಮುಂದಿಟ್ಟರು. ಶಶಿಕುಮಾರ್‌ಬಿ.ಎನ್.‌ಅವರು ಕಾರ್ಯಕ್ರಮ ನಿರೂಪಿಸಿದರು.

ಮೂರು  ಗ್ರಾಮಗಳ ಸಂಗಮ ತಾಣ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿದ್ದರೆ ,ದೇವಳ ಸುತ್ತ  ಕಡಬ ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳು ಸೇರಿದೆ. ಇದರಿಂದ ಶ್ರೀಕ್ಷೇತ್ರವು ಮೂರು ಗ್ರಾಮಗಳ ಸಂಗಮ ತಾಣವಾಗಿ ರೂಪುಗೊಂಡಿದೆ.

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಧಾನವಾಗಿ ಹುತ್ತ (ವಲ್ಮೀಕ)ಕ್ಕೆ ಪೂಜೆ ನಡೆಯುತ್ತದೆ. ಇದು ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರವಾಗಿದೆ.
ಇಲ್ಲಿ ನಾಗದೋಷ ಪರಿಹಾರಕ್ಕೆ ,ಸಂತಾನ ಭಾಗ್ಯ ,ಕಂಕಣ ಭಾಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸಿದ ಹಲವು ಭಕ್ತರಿದ್ದಾರೆ.

LEAVE A REPLY

Please enter your comment!
Please enter your name here