ಆತೂರು: ಅಡಿಕೆ ಕಳವುಗೈದು ಮನೆಯಲ್ಲಿ ಸಂಗ್ರಹ- ಕೇಳಲು ಬಂದ ಮಹಿಳೆಗೆ ತಲವಾರು ತೋರಿಸಿ ಜೀವ ಬೆದರಿಕೆ- ಪೊಲೀಸರು ಬರುತ್ತಿದ್ದಂತೆ ಆರೋಪಿ ಪರಾರಿ

0

ರಾಮಕುಂಜ: ಅಡಿಕೆ ಕಳವುಗೈದು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದಲ್ಲದೇ ಈ ಬಗ್ಗೆ ಕೇಳಲು ಬಂದ ಮಹಿಳೆಗೆ ಆರೋಪಿ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣವೊಂದು ಕೊಯಿಲ ಗ್ರಾಮದ ಆತೂರಿನಲ್ಲಿ ನ.7 ರಂದು ಬೆಳಗ್ಗೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೊಯಿಲ ಗ್ರಾಮದ ಎಲ್ಯಂಗ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬೂಬಕ್ಕರ್ ಸಿದ್ದೀಕ್ ಎಂಬವರ ಮನೆಯಿಂದ ಒಣಗಲು ಹಾಕಿದ್ದ ಹಣ್ಣಡಿಕೆ ಹಾಗೂ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ ನ.6ರಂದು ರಾತ್ರಿ ಕಳ್ಳತನ ಆಗಿತ್ತು. ಅಡಿಕೆ ಕಳ್ಳತನ ಆಗಿರುವುದು ನ.7ರ ಬೆಳಿಗ್ಗೆ ಅಬೂಬಕ್ಕರ್ ಸಿದ್ದೀಕ್ ಅವರ ಪತ್ನಿ ನೆಬಿಸಾ ಅವರ ಗಮನಕ್ಕೆ ಬಂದಿದೆ. ಅವರು ಅನುಮಾನದ ಮೇರೆಗೆ ಈ ಹಿಂದಿನ ಕಳ್ಳತನ ಹಾಗೂ ಇತರೇ ಪ್ರಕರಣಗಳ ಆರೋಪಿಯಾಗಿರುವ ಆತೂರು ನಿವಾಸಿ ಅಶ್ರಫ್ ಎಂಬವರ ಮನೆಗೆ ನೀರು ಕುಡಿಯುವ ನೆಪದಲ್ಲಿ ಬಂದು ಪರಿಶೀಲನೆ ನಡೆಸಿದ್ದು ಈ ವೇಳೆ ಮನೆಯ ಕೋಣೆಯೊಂದರಲ್ಲಿ ಅಡಿಕೆ ಚೀಲ ಇರುವುದು ಕಂಡು ಬಂದಿದೆ. ಈ ಬಗ್ಗೆ ನೆಬಿಸಾ ಅವರು ಅಶ್ರಫ್ ಹಾಗೂ ಅವರ ತಾಯಿಯಲ್ಲಿ ವಿಚಾರಿಸಿದ್ದು , ಇದನ್ನು ನವಾಝ್ ಎಂಬವರು ತಂದು ಇಟ್ಟಿರುವುದಾಗಿ ಅಶ್ರಫ್ ಹೇಳಿರುವುದಾಗಿ ವರದಿಯಾಗಿದೆ. ಬಳಿಕ ಈ ವಿಚಾರದಲ್ಲಿ ಅಶ್ರಫ್ ಹಾಗೂ ನೆಬಿಸಾ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಅಶ್ರಫ್ ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವುದಾಗಿ ವರದಿಯಾಗಿದೆ.

ಪೊಲೀಸರು ಬರುತ್ತಿದ್ದಂತೆ ಆರೋಪಿ ಪರಾರಿ:
ಘಟನೆ ಕುರಿತು ಮಾಹಿತಿ ಪಡೆದುಕೊಂಡ ಕಡಬ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದ್ದರು ಆರೋಪಿ ತಪ್ಪಿಸಿಕೊಂಡಿದ್ದಾನೆ. ಸಂಜೆ ತನಕವೂ ಪೊಲೀಸರು ಹುಡುಕಾಟ ನಡೆಸಿದರೂ ಆರೋಪಿ ಸುಳಿವು ಸಿಕ್ಕಿಲ್ಲ. ಬಳಿಕ ಪೊಲೀಸರು ಅಶ್ರಫ್ ಮನೆಯಲ್ಲಿದ್ದ ಅಡಿಕೆ, ಆತನ ಬೈಕ್ ಹಾಗೂ ತಲವಾರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ವರದಿಯಾಗಿದೆ

LEAVE A REPLY

Please enter your comment!
Please enter your name here