ನಿಮ್ಮ ಭವಿಷ್ಯದ ನಿರ್ಮಾಣ ನಿಮ್ಮ ಕೈಯಲ್ಲಿ ಇದೆ- ಅಶೋಕ್ ಕುಮಾರ್ ರೈ
ಪುತ್ತೂರು: ಮಕ್ಕಳ ಹಕ್ಕನ್ನು ಕೇಳುವ ಹಕ್ಕು ನಿಮಗೆ ಇದೆ. ಸರಕಾರದಿಂದ ಬರುವ ಯೋಜನೆಗಳನ್ನು ನಿಮಗೆ ತಲುಪುವ ವ್ಯವಸ್ಥೆ ಮಾಡುತ್ತೇವೆ. ಶಾಲೆಗೆ, ತಂದೆತಾಯಿಗೆ ಒಳ್ಳೆಯ ಮಕ್ಕಳಾಗಿ ಇರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು, ಅಸಹಾಯಕರ ಸೇವಾ ಟ್ರಸ್ಟ್ ಪುತ್ತೂರು, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ತಾಲೂಕು ಪಂಚಾಯತ್ ಭವನದಲ್ಲಿ ಆಡಳಿತದಲ್ಲಿ ಮಕ್ಕಳು ಯೋಜನೆಯನ್ವಯ ನಡೆದ ಶಾಸಕರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುತ್ತೂರು ತಾಲೂಕಿನ 10 ಸರಕಾರಿ ಶಾಲೆಗಳ ಆಯ್ದ ಮಕ್ಕಳ ಜೊತೆ ಸಂವಾದ ನಡೆಸಿದ ಶಾಸಕರು ಮಕ್ಕಳ, ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಶಾಲಾ ಕಟ್ಟಡ, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ ಮುಂತಾದ ಸಮಸ್ಯೆಗಳನ್ನು ಸರಕಾರ ಒದಗಿಸುತ್ತದೆ. ಪುತ್ತೂರಿನ ಕೆಲವು ಗ್ರಾಮಾಂತರ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಇದೆ. ಮುಂದಿನ 2 ವಾರದಲ್ಲಿ 5 ಬಸ್ಸುಗಳು ಪುತ್ತೂರಿಗೆ ಬರಲಿದೆ. ಪುತ್ತೂರು ತಾಲೂಕಿನ ಸರಕಾರಿ ಶಾಲೆಗೆ ಈಗಾಗಲೇ ೧೩೫ ಶಿಕ್ಷಕರು ನೇಮಕವಾಗಿದ್ದಾರೆ. ಭಾಷಾವಾರು ಶಿಕ್ಷಕರ ನೇಮಕ ಕೂಡ ಆಗಿದ್ದು ಪರಿಶೀಲನೆ ಹಂತದಲ್ಲಿದೆ. ಲ್ಯಾಬ್, ಸ್ಮಾರ್ಟ್‌ಕ್ಲಾಸ್‌ಗಳನ್ನು ಹಂತಹಂತವಾಗಿ ಮಾಡುತ್ತೇವೆ ಎಂದರು. ಮಕ್ಕಳ ಮುಂದಿನ ಗುರಿ, ಉದ್ಯೋಗದ ಬಗ್ಗೆ ಸಂವಾದ ನಡೆಸಿ 15 ವಯಸ್ಸಿನವರೆಗೆ ನೀವು ಕಲಿಯುವುದಕ್ಕೆ ಮಹತ್ವ ಕೊಡಬೇಕು. ಬೇರೆ ಯಾವುದೇ ವಿಷಯಕ್ಕೂ ಗಮನ ಕೊಡಬಾರದು. ನಿಮ್ಮ ಭವಿಷ್ಯದ ನಿರ್ಮಾಣ ನಿಮ್ಮ ಕೈಯಲ್ಲಿ ಇದೆ ಎಂದು ಹೇಳಿ ಮಕ್ಕಳಿಗೆ ಶುಭಹಾರೈಸಿದರು.
ಚೈಲ್ಡ್ ರೈಟ್ ಟ್ರಸ್ಟ್‌ನ ಮಾಹಿತಿ ಪತ್ರಗಳನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು. ಬೆಂಗಳೂರು ಚೈಲ್ಡ್ ಟ್ರಸ್ಟ್ ತಾಲೂಕು ಸಂಯೋಜಕಿ ಕಸ್ತೂರಿ ಬೊಳುವಾರು ಮಕ್ಕಳ ಹಾಗೂ ಶಾಲೆಯ ಸಮಸ್ಯೆಗಳ ಬೇಡಿಕೆಯನ್ನು ಪಟ್ಟಿ ಮಾಡಿ ಶಾಸಕರಿಗೆ ತಿಳಿಸಿದರು. ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಎಚ್. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ರಕ್ಷಣಾಧಿಕಾರಿ ವಝೀರ್, ಚೈಲ್ಡ್ ರೈಟ್ ಟ್ರಸ್ಟ್ ರಾಜ್ಯ ಸಂಯೋಜಕ ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ವಂದಿಸಿದರು.
ಉದ್ಘಾಟನೆ:
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿರವರು “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಘೋಷಣೆಯನ್ನು ಬೆಂಬಲಿಸೋಣ, ಎಲ್ಲಾ ಮಕ್ಕಳ ಬದುಕು, ರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸೋಣ” ಎಂಬ ಘೋಷಣೆಯ ಬ್ಯಾನರನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಚೈಲ್ಡ್ ಟ್ರಸ್ಟ್ ತಾಲೂಕು ಸಂಯೋಜಕಿ ಕಸ್ತೂರಿ ಬೊಳುವಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳ, ಶಾಲೆಯ ವಿವಿಧ ಬೇಡಿಕೆಗಳ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿ ಪಟ್ಟಿ ಮಾಡಲಾಯಿತು.
16 ಶಾಲೆಯ 40 ಮಕ್ಕಳು ಸಂವಾದದಲ್ಲಿ ಭಾಗಿ
ಪುತ್ತೂರು ತಾಲೂಕಿನ 10 ಗ್ರಾಮ ಪಂಚಾಯತ್‌ನ ಆಯ್ದ 16 ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲಿನ ೪೦ ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ 4 ವಿದ್ಯಾರ್ಥಿಗಳು ಆಯ್ಕೆ
ನ.11ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕಿನ ಸರಕಾರಿ ಶಾಲೆಯ 4 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನರಿಮೊಗರು ಹಿ.ಪ್ರಾ.ಶಾಲೆಯ ಚಿಂತನ, ಬೆಳ್ಳಿಪ್ಪಾಡಿ ಹಿ.ಪ್ರಾ.ಶಾಲೆಯ ರೋಷನ್, ಪಾಪೆಮಜಲು ಪ್ರೌಢಶಾಲೆಯ ವರ್ಷಿಣಿ, ಕೆಯ್ಯೂರು ಕೆಪಿಎಸ್ ಶಾಲೆಯ ಮೊಹಮ್ಮದ್‌ರವರು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ರವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚೈಲ್ಡ್ ರೈಟ್ ಟ್ರಸ್ಟ್‌ನ ಸಂಯೋಜಕಿ ಕಸ್ತೂರಿ ಬೊಳುವಾರು ತಿಳಿಸಿದ್ದಾರೆ.