ನೆಲ್ಯಾಡಿ: ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಯ ನಿರಂತರ ದಾಳಿಗೆ ಭತ್ತದ ಕೃಷಿ, ಅಡಿಕೆ ತೋಟಕ್ಕೆ ಹಾನಿಯಾಗಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಅವರ ಭತ್ತದ ಗದ್ದೆಗೆ ನುಗ್ಗಿದ ಕಾಡಾನೆ ಕಟಾವುಗೆ ಸಿದ್ಧಗೊಂಡಿದ್ದ ಭತ್ತದ ಬೆಳೆಯನ್ನು ನಾಶಗೊಳಿಸಿವೆ. ಪಕ್ಕದ ತೋಟಕ್ಕೂ ಕಾಡಾನೆ ದಾಳಿ ನಡೆಸಿ ಬಾಳೆಗಿಡ, ತೆಂಗಿನ ಸಸಿ, ಪೈಪ್ ಲೈನ್ ಗಳನ್ನು ಹಾನಿಗೊಳಿಸಿದೆ ಎಂದು ವರದಿಯಾಗಿದೆ. ಈ ಪರಿಸರದಲ್ಲಿ ಕಾಡಾನೆ ದಾಳಿ ನಿರಂತರ ನಡೆಯುತ್ತಿದ್ದು ಕೃಷಿಗಳನ್ನು ಹಾನಿಗೊಳಿಸುತ್ತಿವೆ. ಕಾಡಾನೆ ದಾಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.