ಉಪ್ಪಿನಂಗಡಿಯಲ್ಲಿ ಮಳೆಕೊಯ್ಲು, ಸೌರವಿದ್ಯುತ್ ಬಗ್ಗೆ ಜಾಗೃತಿ ಕಾರ್ಯಕ್ರಮ

0

ನೀರು, ವಿದ್ಯುತ್‌ನಲ್ಲಿ ಸ್ವಾವಲಂಬಿಗಳಾಗೋಣ: ಡಾ. ಯು.ಪಿ. ಶಿವಾನಂದ

ಉಪ್ಪಿನಂಗಡಿ: ಪ್ರಕೃತಿ ದತ್ತವಾಗಿ ನಮಗೆ ಸಿಗುವ ಶುದ್ಧವಾದ ಮಳೆ ನೀರನ್ನು ಭೂಸ್ಪರ್ಶವಾಗುವ ಮೊದಲೇ ಮಳೆ ಕೊಯ್ಲಿನ ಮೂಲಕ ಶೇಖರಿಸಿ ನಾವು ಬಳಸುವುದಲ್ಲದೇ, ಭೂಮಿಗೂ ನೀಡುವ ಕಾರ್ಯ ನಮ್ಮಿಂದಾಗಬೇಕು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ತಿಳಿಸಿದರು.

ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಮಾತನಾಡುತ್ತಿರುವುದು.


ಸುದ್ದಿ ಸಮೂಹ ಸಂಸ್ಥೆಯ ವತಿಯಿಂದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ನ.10ರಂದು ಕಾಲೇಜಿನಲ್ಲಿ ನಡೆದ ಮಳೆ ಕೊಯ್ಲು ಹಾಗೂ ಸೌರ ವಿದ್ಯುತ್‌ನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದ ಅವರು, ನಮ್ಮ ಬದುಕಿಗೆ ಭೂಮಿಯಿಂದ ಎಷ್ಟು ಪಡೆಯುತ್ತೇವೆ ಎನ್ನುವುದಕ್ಕಿಂತ ಭೂಮಿಗೆ ನಾವೆಷ್ಟು ಕೊಡುತ್ತಿದ್ದೇವೆ ಅನ್ನುವುದು ಮುಖ್ಯ. ಮಳೆ ನೀರಿನ ಪರಿಶುದ್ಧತೆಯ ಬಗ್ಗೆ ಜನರಿಗೆ ಯೋಚನೆಯಿಲ್ಲ. ಆದ್ದರಿಂದ ಅಮೃತ ಸಮಾನವಾದ ಮಳೆ ನೀರು ಭೂಮಿಗೆ ಬಿದ್ದು ಹರಿದು ಹೋಗುತ್ತಿದೆ. ಇಂದು ನಾವೆಲ್ಲಾ ನಮ್ಮ ದಿನದ ಅವಶ್ಯಕತೆಗಾಗಿ ಬಾವಿ, ಕೆರೆ, ನದಿ, ಕೊಳವೆ ಬಾವಿ ಹೀಗೆ ನಾನಾ ಮೂಲಗಳಿಂದ ನೀರನ್ನು ಪಡೆದುಕೊಳ್ಳುತ್ತಿದ್ದೇವೆ. ಇದಕ್ಕಿಂತಲೂ ಮಳೆ ನೀರು ಶುದ್ಧವಾಗಿದೆ. ಶುದ್ಧವಾದ ಮಳೆ ನೀರು ಭೂಮಿಗೆ ಬಿದ್ದ ಬಳಿಕ ಅದರಲ್ಲಿ ಭೂಮಿಯಲ್ಲಿರುವ ಕೆಲವೊಂದು ಖನಿಜಾಂಶಗಳು ಅದರೊಂದಿಗೆ ಸೇರಿ ನೀರಿನಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಪ್ರತಿಯೋರ್ವರೂ ಮನೆಯಲ್ಲೇ ಮಳೆ ಕೊಯ್ಲು ಮಾಡುವ ಮೂಲಕ ಶುದ್ಧ ನೀರನ್ನು ಪಡೆಯಬೇಕು. ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ನೀರನ್ನು ಶೇಖರಿಸಿ, ಶುದ್ಧೀಕರಿಸಿ ಸಂಗ್ರಹಿಸಿ, ನಮ್ಮ ದಿನದ ಉಪಯೋಗಕ್ಕೆ ಬಳಸಿಕೊಳ್ಳಬೇಕು ಹಾಗೂ ಮಳೆ ನೀರನ್ನು ಕೊಳವೆ ಬಾವಿಗಳಿಗೆ ನೀಡುವ ಮೂಲಕ ಭೂಮಿಯ ಅಂತರ್ಜಲವನ್ನು ಹೆಚ್ಚಿಸಬೇಕು. ನೀರು ಹಾಗೂ ವಿದ್ಯುತ್‌ನಲ್ಲಿ ನಾವು ಸ್ವಾವಲಂಬಿಗಳಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ಡಾ. ಯು.ಪಿ. ಶಿವಾನಂದ ಅವರು ಓರ್ವ ಪತ್ರಿಕೋದ್ಯಮಿಯಾದರೂ, ಬಲತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ಭ್ರಷ್ಟಾಚಾರ ಸೇರಿದಂತೆ ಸಮಾಜಕ್ಕೆ ಮಾರಕವಾದ ವಿಷಯಗಳ ಬಗ್ಗೆ ಆಂದೋಲನವನ್ನು ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಮಾಜದ ಬಗ್ಗೆ ಅವರಿಗಿರುವ ಕಾಳಜಿ, ಬದ್ಧತೆಯನ್ನು ತೋರಿಸುತ್ತದೆ. ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಚುನಾವಣೆಯಲ್ಲಿ ಘಟಾನುಘಟಿ ನಾಯಕರೆದುರು ಸ್ಪರ್ಧೆ ಮಾಡಿದ್ದಾರೆ. ಈ ಮಳೆ ನೀರು ಕೊಯ್ಲು ಮತ್ತು ಸೌರ ವಿದ್ಯುತ್‌ನ ಬಗ್ಗೆ ಜಾಗೃತಿ ಆಂದೋಲನವನ್ನು ಅವರು ಆರಂಭಿಸಿದ್ದು, ಸ್ವಹಿತವಲ್ಲದ ಇಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಬಸವರಾಜೇಶ್ವರಿ ಡಿಡ್ಡಿಮನೆ ಮಾತನಾಡಿ, ಮಳೆಯೆನ್ನುವುದು ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಪ್ರಕೃತಿ ಕೊಟ್ಟ ಉಡುಗೊರೆ. ನೀರಿನ ಬವಣೆ ನೋಡಬೇಕೆಂದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗಬೇಕು. ನೀರಿನ ಮಹತ್ವದ ಬಗ್ಗೆ ಅಲ್ಲಿನವರಿಗೆ ಚೆನ್ನಾಗಿ ಅರಿವಿದೆ. ಈಗಲೂ ನಮ್ಮ ಕಡೆ ಮಳೆ ನೀರನ್ನು ಶೇಖರಿಸಿಡುವ ಕೆಲಸ ನಡೆಯುತ್ತದೆ. ಉಚಿತವಾಗಿ ಸಿಗುವ ನೀರನ್ನು ನಾವು ಪೋಲಾಗಲು ಬಿಡದೆ ಅದನ್ನು ಬಳಕೆ ಮಾಡಲು ಮುಂದಾಗಬೇಕು ಎಂದರು.
ಬಳಿಕ ಮಳೆ ಕೊಯ್ಲುವಿನ ಬಗ್ಗೆ ಪ್ರಾತಕ್ಷಿಕೆ ನಡೆಯಿತು. ವಿದ್ಯಾರ್ಥಿನಿ ಹರಿದರ್ಶಿನಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


೧೦ಯುಪಿಪಿಶಿವಾನಂದ:
೧೦ಯುಪಿಪಿಸುಬ್ಬಪ್ಪ:
೧೦ಯುಪಿಪಿಪ್ರಾತಕ್ಷಿಕೆ: ಮಳೆ ಕೊಯ್ಲು ಪ್ರಾತಕ್ಷಿಕೆಯನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು

LEAVE A REPLY

Please enter your comment!
Please enter your name here