ಮುರಿದು ಬೀಳುವ ಸ್ಥಿತಿಯಲ್ಲಿ ರೈಲ್ವೆ ಅಂಡರ್ ಪಾಸ್ ಮೇಲ್ಭಾಗದ ತಗಡು ಶೀಟುಗಳು
@ಯೂಸುಫ್ ರೆಂಜಲಾಡಿ
ಪುತ್ತೂರು: ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆದ್ರಾಳದಲ್ಲಿರುವ ರೈಲ್ವೇ ಅಂಡರ್ಪಾಸ್ನಲ್ಲಿ ಅಪಾಯ ಕಾದಿದ್ದು ವಾಹನ ಸವಾರರು ಆತಂಕದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಅಂಡರ್ ಪಾಸ್ನ ಮೇಲೆ ರೈಲು ಹಳಿಗಳ ಕೆಳ ಭಾಗಕ್ಕೆ ಅಳವಡಿಸಿರುವ ತಗಡಿನ ಶೀಟುಗಳು ತುಕ್ಕು ಹಿಡಿದಿದ್ದು ತುಂಡಾಗಿ ನೇತಾಡುತ್ತಿದೆ. ನೇತಾಡುತ್ತಿರುವ ಶೀಟುಗಳು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದ್ದು ಅಪಾಯವನ್ನು ಆಹ್ವಾನಿಸುವಂತಿದೆ. ಈ ರಸ್ತೆಯಾಗಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಇಲ್ಲಿಂದ ಸಂಚರಿಸುವಾಗ ಹೆಚ್ಚು ಅಪಾಯಕಾರಿಯಾಗಿದೆ. ಏಕೆಂದರೆ ಈಗಾಗಲೇ ಶೀಟ್ ಸಂಪೂರ್ಣ ಶಿಥಿಲಗೊಂಡು ತುಕ್ಕು ಹಿಡಿದು ನೇತಾಡುತ್ತಿದ್ದು ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದಲ್ಲಿ ಅನಾಹುತ ಸಂಭವಿಸುವುದರಲ್ಲಿ ಅನುಮಾನವಿಲ್ಲ. ರೈಲ್ವೆ ಇಲಾಖೆಯವರು ಅಥವಾ ಸಂಬಂಧಪಟ್ಟವರು ಇದರ ಬಗ್ಗೆ ತುರ್ತು ಗಮನ ಹರಿಸಿ ಸಮಸ್ಯೆ ಬಗೆಹರಿಸುವ ಮೂಲಕ ಸಂಭಾವ್ಯ ಸಪಾಯ ತಪ್ಪಿಸಬೇಕಾಗಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.