ಕುಂಬ್ರ: ಉಚಿತ ಉಜ್ವಲ ಅಡುಗೆ ಅನಿಲ ವಿತರಣಾ ಕಾರ್ಯಕ್ರಮ

0

ರಾಜ್ಯದಲ್ಲಿ 8 ಕೋಟಿ ಮನೆಗಳಿಗೆ ಉಜ್ವಲ ಗ್ಯಾಸ್ ಸಂಪರ್ಕ : ನಳಿನ್ ಕುಮಾರ್ ಕಟೀಲ್

ಪುತ್ತೂರು: ಸಾಮಾನ್ಯ ಜನರನ್ನು ಸ್ವಾಭಿಮಾನಿಗಳಾಗಿ ಬದುಕಲು ಕಲಿಸಿದ ಮೊದಲ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿಯವರು ಆಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸುಮಾರು 8 ಕೋಟಿ ಮನೆಗಳಿಗೆ ಉಚಿತ ಉಜ್ವಲ ಗ್ಯಾಸ್ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ 86 ಸಾವಿರ ಮಹಿಳೆಯರಿಗೆ ಉಚಿತ ಉಜ್ವಲ ಗ್ಯಾಸ್ ಸಂಪರ್ಕ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಫಲಾನುಭವಿಗಳಿಗೆ ಉಚಿತವಾಗಿ ಉಜ್ವಲ ಗ್ಯಾಸ್ ಸಂಪರ್ಕ ನೀಡಲಾಗುವುದು. ಇದು ಕೇಂದ್ರದ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ನ.16 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಕುಂಬ್ರದ ಬೂಡಿಯಾರ್ ಇಂಡೇನ್ ಗ್ಯಾಸ್ ಏಜೆನ್ಸಿ ಆಯೋಜಿಸಿದ್ದ ಕೇಂದ್ರ ಸರಕಾರದ ಉಚಿತ ಉಜ್ವಲ ಅಡುಗೆ ಅನಿಲ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಒಂದು ಬಡ ಕುಟುಂಬದಲ್ಲಿ ಜನಿಸಿದವರು. ಆದ್ದರಿಂದ ಅವರಿಗೆ ಬಡವರ ಬಗ್ಗೆ ಹಾಗೂ ಬಡತನದ ಬಗ್ಗೆ ತಿಳಿದಿದೆ ಎಂದ ನಳಿನ್ ಕಟೀಲ್‌ರವರು, ಮೋದಿಯವರ ತಾಯಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಹೊಗೆ ತಾಗಿ ತಾಯಿಯ ಕಣ್ಣಲ್ಲಿ ನೀರು ಹರಿಯುತ್ತಿರುವುದು ನೋಡಿ ಕಣ್ಣೀರು ಹಾಕಿದವರು, ನಾನು ಪ್ರಧಾನಿಯಾದರೆ ಯಾವೊಬ್ಬ ತಾಯಿಯ ಕಣ್ಣಲ್ಲೂ ಅಡುಗೆ ಮಾಡುವಾಗ ಕಣ್ಣೀರು ಬರಬಾರದು ಎಂದು ಯೋಚಿಸಿದ್ದರು. ಅದರಂತೆ ಅವರು ಪ್ರಧಾನಿಯಾದ ಬಳಿಕ 2028 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು. ಬಡವರ ಪರ ಹಲವು ಯೋಜನೆಗಳನ್ನು ತಂದಿದ್ದ ಸರಕಾರ ಇದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾತ್ರ ಎಂದ ಕಟೀಲ್‌ರವರು, ಪ್ರಧಾನಿಯವರ ಆಶಯವನ್ನು ಈಡೇರಿಸುವಲ್ಲಿ ಕುಂಬ್ರದ ಬೂಡಿಯಾರ್ ಇಂಡೇನ್ ಗ್ಯಾಸ್‌ನ ರಾಧಾಕೃಷ್ಣ ರೈಯವರು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲೇ ಅಮೂಲಾಗ್ರ ಅಭಿವೃದ್ಧಿಯನ್ನು ತಂದಿಟ್ಟ ಓರ್ವ ಸಂಸದನಿದ್ದರೆ ಅದು ನಳಿನ್ ಕುಮಾರ್ ಕಟೀಲ್ ಆಗಿದ್ದಾರೆ. ವಿಮಾನ ನಿಲ್ದಾಣದಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿ ತನಕ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ವೇಗ ತುಂಬುವ ಕೆಲಸ ಮಾಡಿದ್ದಾರೆ. ಕೇಂದ್ರ ಸರಕಾರದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಮುನ್ನುಡಿ ಬರೆದ ಸಂಸದರು ನಳಿನ್ ಕುಮಾರ್ ಕಟೀಲ್ ಎಂದು ಸಂಜೀವ ಮಠಂದೂರು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಜಿಲ್ಲಾ ಹಿಂದುಳಿದ ವರ್ಗಗಳ ಯುವ ಮೋರ್ಛಾ ಅಧ್ಯಕ್ಷ ಆರ್.ಸಿ ನಾರಾಯಣ್, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಕುಂಬ್ರದ ಬೂಡಿಯಾರ್ ಇಂಡೇನ್ ಗ್ಯಾಸ್ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ್, ರಾಜೇಶ್ ರೈ ಪರ್ಪುಂಜ, ನಾರಾಯಣ್ ಪೂಜಾರಿ ಕುರಿಕ್ಕಾರ, ಸಚಿನ್ ರೈ ಪಾಪೆಮಜಲು, ನಿಮಿತಾ ರೈ, ಉಷಾ ನಾರಾಯಣ್, ಪ್ರದೀಪ್, ಹೇಮಂತ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರಂಜಿನಿ ಶೆಟ್ಟಿ ವಂದಿಸಿದರು. ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.

41 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ
ಕುಂಬ್ರ ಬೂಡಿಯಾರ್ ಇಂಡೇನ್ ಗ್ಯಾಸ್ ಏಜೆನ್ಸಿ ಮೂಲಕ ಈ ವರ್ಷ ಸುಮಾರು 41 ಫಲಾನುಭವಿಗಳಿಗೆ ಪ್ರಧಾನ ಮಂತ್ರಿಗಳ ಉಚಿತ ಉಜ್ವಲ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ 5 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗ್ಯಾಸ್ ಸ್ಟೌವ್ ವಿತರಣೆ ಮಾಡಲಾಯಿತು. ಇನ್ನೂ ಸುಮಾರು 200 ಅರ್ಜಿಗಳು ಬಾಕಿ ಇದ್ದು ಮುಂದಿನ ದಿನಗಳಲ್ಲಿ ವಿತರಣೆ ನಡೆಯಲಿದೆ.

ಬೂಡಿಯಾರ್‌ನಿಂದ 10 ಸಾವಿರಕ್ಕೂ ಅಧಿಕ ಗ್ಯಾಸ್ ಸಂಪರ್ಕ
ಉಜ್ವಲ ಯೋಜನೆಯಡಿ 2018 ರಲ್ಲಿ ಸುಮಾರು 4 ಸಾವಿರ ಮಂದಿಗೆ ಉಚಿತ ಉಜ್ವಲ ಗ್ಯಾಸ್ ಸಂಪರ್ಕ ವ್ಯವಸ್ಥೆ ಬೂಡಿಯಾರ್ ಇಂಡೇನ್ ಗ್ಯಾಸ್ ಏಜೆನ್ಸಿನಿಂದ ಆಗಿದ್ದು 2025 ರಲ್ಲಿ ಬಿಪಿಎಲ್ ಕುಟುಂಬದ ಸುಮಾರು 6 ಸಾವಿರ ಮಂದಿಗೆ ಉಚಿತ ಗ್ಯಾಸ್ ಸಂಪರ್ಕ ಮಾಡಲಾಗಿದೆ. ಈಗಾಗಲೇ ಬೂಡಿಯಾರ್ ಗ್ಯಾಸ್ ಏಜೆನ್ಸಿನಿಂದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಕೇಂದ್ರ ಸರಕಾರದ ಗ್ಯಾಸ್ ಸಂಪರ್ಕ ಯೋಜನೆಯಿಂದ ಗ್ಯಾಸ್ ಸಂಪರ್ಕ ಮಾಡಲಾಗಿದೆ. ಬೂಡಿಯಾರ್ ಗ್ಯಾಸ್ ಏಜೆನ್ಸಿ ಜಿಲ್ಲೆಯಲ್ಲೇ ಅತೀ ಹೆಚ್ಚು ಗ್ಯಾಸ್ ಸಂಪರ್ಕ ಮಾಡಿದ ಏಜೆನ್ಸಿ ಎಂಬ ಕೀರ್ತಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here