ಪ್ರವಾದಿ ಮುಹಮ್ಮದ್ ಪೂಜಿಸುವ ದೇವರಲ್ಲ, ಅನುಸರಿಸುವವರಾಗಿದ್ದಾರೆ – ಮಹಮ್ಮದ್ ಕುಂಞಿ
ಮಾನವೀಯ ಮೌಲ್ಯ ಉಳಿಯಲು ಜಾತ್ಯಾತೀತ ಮೌಲ್ಯಗಳು ಬೆಳೆಸಬೇಕು – ಎಸ್.ಐ ಆಂಜನೇಯ ರೆಡ್ಡಿ
ಗಾಂಧೀಜಿ ಸಮಾಜ ಸುಧಾರಕರಾದರೆ, ಅಂಬೇಡ್ಕರ್ ಬದಾವಣೆ ಬಯಸಿದ್ದರು- ಡಾ. ಸಿ.ಎಸ್. ದ್ವಾರಕನಾಥ್
ಸ್ವಾಮಿ ವಿವೇಕಾನಂದರು ಆಧುನಿಕ ಕಾಲದ ಪ್ರವಾದಿ – ಲಕ್ಷ್ಮೀಶ ತೋಳ್ಪಾಡಿ
ನೈತಿಕ ಸ್ಥೈರ್ಯ ಕೊಡುವ ಶಿಕ್ಷಣಕ್ಕೆ ಒತ್ತು ಕೊಡಬೇಕು – ಡಾ. ರಾಜಾರಾಮ್ ಕೆ.ಬಿ
ಕೋಮುವಾದದರಿಂದ ಧರ್ಮದ ನಾಶ ಹೊರತು ರಕ್ಷಣೆಯಲ್ಲ – ಸಿ.ಎ.ಮುಹಮ್ಮದ್ ಇಸ್ಹಾಕ್
ಪುತ್ತೂರು: ಮನುಷ್ಯ ಬದುಕಿದ ಮೇಲೆ ಧರ್ಮಪ್ರಜ್ಞೆಯಿಂದ ಇರಬೇಕು. ಒಳ್ಳೆಯದು ಯಾವುದರಲ್ಲಿದ್ದರೂ ಅದನ್ನು ಸ್ವೀಕರಿಸಬೇಕು. ಮಾನವೀಯ ಪ್ರಜ್ಞೆ ಬರಬೇಕಾದರೆ ಎಲ್ಲಾ ಧರ್ಮವನ್ನು ಅರ್ಥೈಸುವ ಕೆಲಸವಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು. ‘ದೇಶದ ಹಿತಚಿಂತನೆ’ ಎಂಬ ಶೀರ್ಷಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಘಟಕದ ವತಿಯಿಂದ ನ.17ರಂದು ಪುತ್ತೂರಿನ ಟೌನ್ಹಾಲ್ನಲ್ಲಿ ನಡೆದ ಸಾರ್ವಜನಿಕ ಸೀರತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಇದರ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಅವರು ಪ್ರವಾದಿ ಮುಹಮ್ಮದ್ ಅವರ ಕುರಿತು ಉಪನ್ಯಾಸ ನೀಡಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿದರು. ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕನಾಥ್ ಅವರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು. ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು. ಯುವವಾಹಿನಿ ಕೇಂದ್ರೀಯ ಸಮಿತಿ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಅಧ್ಯಕ್ಷ ಸಿ.ಎ.ಮುಹಮ್ಮದ್ ಇಸ್ಹಾಕ್ ಅವರು ಮಾತನಾಡಿ ಸಮಾಜದ ಒಳಿತಿಗಾಗಿ ಶ್ರಮಿಸಿದವರ ಚಿಂತನೆಯನ್ನು ಸಮಾಜದಲ್ಲಿ ಹಂಚುವ ಮೂಲಕ ಜನರಲ್ಲಿ ಅದನ್ನು ಪಾಲಿಸುವ ಸ್ಪೂರ್ತಿಯನ್ನು ತುಂಬಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಬಹಳ ಅಗತ್ಯವಾಗಿದೆ. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆದಾಗ ಎಳವೆಯಲ್ಲೇ ಮಕ್ಕಳಿಗೆ ಉತ್ತಮ ಸಂದೇಶ ಸಿಗುತ್ತದೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಇದರ ಮಂಗಳೂರು ವಲಯ ಉಪಸಂಚಾಲಕ ಅಮೀನ್ ಅಹ್ಸನ್, ಹಿರಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಕೆ ಎಮ್ ಶರೀಪ್ ಸಾಹೇಬ್, ಮೌಲನಾ ಎ.ಕೆ. ತಂಙಳ್, ಮಂಗಳೂರು ಸೀರತ್ ಸಮಿತಿಯ ವಲಯಾಧ್ಯಕ್ಷ ಶಾಹಿದ್ ಇಸ್ಮಾಯಿಲ್, ಮೈಸೂರು ವಲಯ ಸಂಚಾಲಕ ಅಬ್ದುಲ್ ಸಲಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಬ್ದುಲ್ ಲತೀಪ್ ಆಲಿ ಖುರಾನ್ ಪಠಿಸಿದರು. ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಗಪೂರ್ ಕುಳಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದೇಶಾದ್ಯಂತ ಸೀರತ್ ಸಮಾವೇಶ ಹಮ್ಮಿಕೊಂಡು ಬರುತ್ತಿದ್ದೇವೆ ಎಂದರು. ನಿವೃತ್ತ ಪ್ರಾಧ್ಯಾಪಕರಾದ ಮುಹಮ್ಮದ್ ತುಂಬೆ, ಡಾ.ಮುಹಮ್ಮದ್ ಮುಬೀನ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ಹತ್ಯೆಗೊಳಗಾದ ಅಕ್ಷಯ್ ಕಲ್ಲೇಗ ಮತ್ತು ನೇಜಾರು ಹತ್ಯೆಗೊಳಗಾದ ಒಂದೇ ಕುಟಂಬದವರು ಮತ್ತು ಇಸ್ರೇಲ್, ಪ್ಯಾಲೆಸ್ತೈನ್ ಸಹಿತ ಹಲವು ರಾಷ್ಟ್ರಗಳಲ್ಲಿ ಘರ್ಷಣೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹದಾಸ ಪರಮಹಂಸ ಸ್ವಾಮೀಜಿಯವರು ಶಾಂತಿ ಮಂತ್ರ ಪಠಿಸಿದರು. ಸುದ್ದಿ ಯುಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗಿತ್ತು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ