ನೆಲ್ಯಾಡಿ: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಬಜತ್ತೂರು ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯೊಂದಿಗೆ, ಮಿತ್ರಂಪಾಡಿ ಜಯರಾಮ ರೈಯವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ದಶ ಸಂಭ್ರಮ ಕಾರ್ಯಕ್ರಮವು ನ.25ರಂದು ಬಜತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್. ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ಭರತ್, ಬಜತ್ತೂರು ಕ್ಲಸ್ಟರ್ ಸಿ.ಆರ್.ಪಿ ಮಂಜುನಾಥ್ ಕೆ.ವಿ ಹಾಗೂ ಉಪ್ಪಿನಂಗಡಿ ಹೋಬಳಿ ಕಸಾಪದ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ, ಕೋಶಾಧ್ಯಕ್ಷರಾದ ಡಾ. ಹರ್ಷ ಕುಮಾರ್ ರೈ, ಹಿರಿಯ ಪತ್ರಕರ್ತರಾದ ಉದಯಕುಮಾರ್ ಯು.ಎಲ್, ಭಾಗವಹಿಸಲಿದ್ದಾರೆ. ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿಯೂ ಆದ ವಿಲ್ಫ್ರೆಡ್ ಡಿ.ಸೋಜ, ಶಿಕ್ಷಕ, ಲೇಖಕರೂ ಆದ ಕೃಷ್ಣ ಕಾರಂತ್, ಪತ್ರಕರ್ತರಾದ ಹರೀಶ್ ಬಾರಿಂಜ, ಮೇಘ ಪಾಲೆತ್ತಾಡಿ, ಯುವ ಸಾಹಿತಿ ಜಗದೀಶ್ ಬಾರಿಕೆ, ಶೋಬಾನೆ ಹಾಡುಗಾರ್ತಿ ಪ್ರೇಮ ಬಾರಿಕೆ ಹಾಗೂ ಕನ್ನಡ ಶಾಲೆಯ ಉಳಿವಿಗಾಗಿ ಶ್ರಮಿಸಿದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಯುವ ಉದ್ಯಮಿ ರಾಧಾಕೃಷ್ಣ ಕುವೆಚ್ಚಾರುರವರು ಸನ್ಮಾನಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಜತ್ತೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕವಿಗೋಷ್ಠಿ, ಕಥಾ ಗೋಷ್ಠಿ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.