ಪುತ್ತೂರು: ಯಕ್ಷಗಾನ ಕಲಾ ಪೋಷಕರಾಗಿ ಪ್ರಸಿದ್ಧಿ ಪಡೆದುಕೊಂಡು ಪಟ್ಲೇರ್ ಎಂದೇ ಹೆಸರುವಾಸಿಯಾಗಿದ್ದ ಕುಂಬ್ರ ಬಾಲಕೃಷ್ಣ ರೈ ಇವರ 3ನೇ ವರ್ಷದ ಸಂಸ್ಮರಣೆ ಅವರ ಸ್ವಗ್ರಹದಲ್ಲಿ ನಡೆಯಿತು. ಕಾರ್ಯಕ್ರಮದ ಬಗ್ಗೆ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸವಿಸ್ತಾರವಾಗಿ ವಿವರಿಸಿದರು. ಹಿರಿಯ ಯಕ್ಷಗಾನ ಕಲಾವಿದ ಮತ್ತು ರಾಜ್ಯಪ್ರಶಸ್ತಿ ಪುರಸ್ಕೃತ ಅರುವ ಕೊರಗಪ್ಪ ಶೆಟ್ಟಿ ದೀಪ ಬೆಳಗಿಸಿ, ಕುಂಬ್ರ ದಿ.ಬಾಲಕೃಷ್ಣ ರೈ ಯವರು ರೂಡಿಸಿಕೊಂಡಿದ್ದ ಆದರ್ಶಗಳು, ಯಕ್ಷಗಾನದ ಬಗ್ಗೆ ಅವರಿಗಿದ್ದ ಸೆಳೆತ, ಅಭಿರುಚಿ ಬಗ್ಗೆ ವಿವರಿಸಿ ದಿ.ಬಾಲಕೃಷ್ಣ ರೈ ಗಳ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕಷ್ಟದಲ್ಲಿರುವ 10 ಜನ ಯಕ್ಷಗಾನ ಕಲಾವಿದರಿಗೆ ಮತ್ತು ಅಸೌಖ್ಯದಿಂದ ಇರುವವರಿಗೆ ತಲಾ 5000 ರೂಗಳಂತೆ ಒಟ್ಟು 50 ಸಾವಿರ ಸಹಾಯಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದಿ. ಬಾಲಕೃಷ್ಣ ರೈ ಅವರ ಪತ್ನಿ ಮೇಗಿನಗುತ್ತು ಸಾವಿತ್ರಿ ಬಿ. ರೈ, ಮಕ್ಕಳಾದ ಕುಂಬ್ರ ಸಂತೋಷ್ ರೈ, ಕುಂಬ್ರ ಶಮಿತ್ ರೈ, ಸೊಸೆ ಸುಜಾತ ಎಸ್ ರೈ, ಮೊಮ್ಮಕ್ಕಳಾದ ಲಕ್ಷಯ್ ರೈ ಮತ್ತು ಹಂಶಿಕ ರೈ , ಕುಂಬ್ರ ಗಣೇಶ್ ರೈ , ಕುಂಬ್ರ ಮನಮೋಹನ ರೈ, ಉದ್ಯಮಿ ಕುಂಬ್ರ ಮೋಹನದಾಸ ರೈ, ರಂಗಕಲಾವಿದ ಸುಬ್ಬು ಸಂಟ್ಯಾರ್ ಹಾಜರಿದ್ದರು. ಕಲಾವಿದರಾದ ಅಶೋಕ್ ಆಚಾರ್ಯ ವೇಣೂರು, ಉದಯಕುಮಾರ್ ಅದ್ಯನಡ್ಕ, ನರಸಿಂಹ ಸಿ.ಕೆ, ಹರೀಶ್ ಮಡಿವಾಳ, ವೆಂಕಪ್ಪ ಬೆಳ್ತಂಗಡಿ, ಸಾಯಿನಿಧಿ ನೀರ್ಪಾಡಿ ಹಾಜರಿದ್ದು ಸಹಾಯಧನ ಸ್ವೀಕರಿಸಿದರು. ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಇವರನ್ನು ಗಣ್ಯರ ಸಮಕ್ಷಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು. ತಾರಾನಾಥ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.