ಪರ- ವಿರೋಧದ ನಡುವೆ ಮದ್ಯದಂಗಡಿಗೆ ಎನ್‌ಒಸಿ
ಉಪ್ಪಿನಂಗಡಿ: ಗ್ರಾ.ಪಂ. ಸದಸ್ಯರ ಪರ- ವಿರೋಧದ ನಡುವೆ ಪೆರ್ನೆಯಲ್ಲಿ ಎಂ.ಎಸ್.ಐ.ಎಲ್. ಸಾಮ್ಯದ ಮದ್ಯದಂಗಡಿ ತೆರೆಯಲು ನಿರಾಪೇಕ್ಷಣಾ ಪತ್ರ ನೀಡಲು ಒಪ್ಪಿಗೆ ನೀಡಿದ ಘಟನೆ ಪೆರ್ನೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ವಿಜಯ ಅವರ ಅಧ್ಯಕ್ಷತೆಯಲ್ಲಿ ನ.28ರಂದು ನಡೆದ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಅರ್ಜಿ ವಿಲೇವಾರಿಯ ನಡುವೆ ಮದ್ಯದಂಗಡಿ ತೆರೆಯಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದು ಚರ್ಚೆಗೆ ಬಂದಿತು. ಇದಕ್ಕೆ ಪೂರಕವಾಗಿ ಮದ್ಯದಂಗಡಿ ತೆರೆಯಲು ನಿರಾಪೇಕ್ಷಣಾ ಪತ್ರ ನೀಡದಂತೆ ಗ್ರಾಮಸ್ಥರು ಸಲ್ಲಿಸಿದ ಅರ್ಜಿಯನ್ನು ಗ್ರಾ.ಪಂ. ಪಿಡಿಒ ಸುನೀಲ್ ಕುಮಾರ್ ಸಭೆಗೆ ಓದಿ ಹೇಳಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ನವೀನ್ ಪದೆಬರಿ ಮಾತನಾಡಿ, ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರಯಲು ಅವಕಾಶ ನೀಡಬಾರದು. ಈಗಾಗಲೇ ಪೆರ್ನೆ- ಬಿಳಿಯೂರು ಗ್ರಾಮಗಳನ್ನು ಮದ್ಯ ಮುಕ್ತ ಗ್ರಾಮಗಳನ್ನಾಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘಟಕ ಪ್ರಯತ್ನಿಸುತ್ತಿದೆ. ಮದ್ಯದಂಗಡಿ ನಮ್ಮ ಗ್ರಾಮದಲ್ಲಿ ಇಲ್ಲದ್ದರಿಂದ ಬಡ ಕುಟುಂಬಗಳು ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತಿವೆ. ಇಲ್ಲಿ ಮದ್ಯದಂಗಡಿಗೆ ಅವಕಾಶ ನೀಡಿದರೆ ಬಡ ಕುಟುಂಬಗಳ ನೆಮ್ಮದಿ ಹಾಳಾಗಲಿದೆ. ಆದ್ದರಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದರಲ್ಲದೆ, ನನ್ನ ಆಕ್ಷೇಪಣೆ ದಾಖಲಿಸಲು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೇಶವ ಸುಣ್ಣಾನ ಈ ರೀತಿಯ ಅವ್ಯವಸ್ಥೆಗಳಿದ್ದರೆ ಸಭೆಯಿಂದ ಹೊರನಡೆಯುವುದಾಗಿ ತಿಳಿಸಿದರು.
ಆಗ ಮಧ್ಯಪ್ರವೇಶಿಸಿದ ಪಿಡಿಒ ಸುನೀಲ್ ಕುಮಾರ್, ಈ ಬಗ್ಗೆ ಚರ್ಚೆ ಬೇಡ. ಕಲಾಪದಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಿದಾಗ ಎಂಟು ಸದಸ್ಯರು ಮದ್ಯದಂಗಡಿಯ ಪರ ವಹಿಸಿದರೆ, ಐವರು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸದಸ್ಯ ಮುಹಮ್ಮದ್ ಫಾರೂಕ್ ತಟಸ್ಠ ನಿಲುವು ವ್ಯಕ್ತಪಡಿಸಿದರು. ಮದ್ಯದಂಗಡಿ ಪರ ಬಹುಮತ ವ್ಯಕ್ತವಾದಾಗ ಮದ್ಯದಂಗಡಿಗೆ ನಿರಪೇಕ್ಷಣಾ ಪತ್ರ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಮದ್ಯದಂಗಡಿಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಈ ಸಂದರ್ಭ ಮದ್ಯದಂಗಡಿಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ, ಹೋರಾಟಗಳನ್ನು ನಡೆಸಿದರೆ ಅದಕ್ಕೆ ನಾವು ಹೊಣೆಯಲ್ಲ ಎಂದರು. ಸದಸ್ಯ ನವೀನ ಪದಬರಿ ಮಾತನಾಡಿ, ಗ್ರಾ.ಪಂ.ನಲ್ಲಿ ಗ್ರಾಮಸ್ಥರು ನೀಡಿದ ಅರ್ಜಿಗಳು ವಿಲೇವಾರಿಗೂ ಬಾರದೆ ನಾಪತ್ತೆಯಾಗಿವೆ. ಆದ್ದರಿಂದ ಬೇಸತ್ತು ನಾವು ಈ ಹಿಂದಿನ ಎರಡು ಸಾಮಾನ್ಯ ಸಭೆಗೆ ಗೈರು ಹಾಜರಿಯಾಗಿದ್ದೇವೆ ಎಂದರು. ಆಗ ಪಿಡಿಒ ಅರ್ಜಿ ವಿವರ ಕೇಳಿ ಅವರು ಮತ್ತೆ ಅರ್ಜಿ ಕೊಡಲಿ ತಕ್ಷಣವೇ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸದಸ್ಯ ಸುನೀಲ್ ನೆಲ್ಸನ್ ಪಿಂಟೋ ಮಾತನಾಡಿ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಚರಂಡಿಯ ಕಾಮಗಾರಿಯನ್ನು ಬೇಕಾಬಿಟ್ಟಿ ನಡೆಸುತ್ತಿದ್ದಾರೆ. ಇದನ್ನು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರುವಂತೆ ತಿಳಿಸಿದರು. ಕಾರ್ಯದರ್ಶಿ ರಾಜೇಶ್ ಮಾತನಾಡಿ, ಗ್ರಾ.ಪಂ.ಗೆ ಕುಡಿಯುವ ನೀರಿನ ಕರ ಏಳು ಲಕ್ಷ 15 ಸಾವಿರ ಬಾಕಿ ಇದೆ ಎಂದಾಗ, ಈ ಬಗ್ಗೆ ಗ್ರಾಹಕರಿಗೆ ನೊಟೀಸ್ ನೀಡಿ, ಬಿಲ್ ಪಾವತಿಸದಿದ್ದ ಗ್ರಾಹಕರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲು ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ತನಿಯಪ್ಪ ಪೂಜಾರಿ, ಶಾರದಾ, ಮುತ್ತಪ್ಪ, ರೇವತಿ, ಚೆನ್ನಕೇಶವ, ಸುಮತಿ, ಪ್ರಕಾಶ್ ನಾಯಕ್, ಜಯಂತಿ, ವನಿತಾ ಉಪಸ್ಥಿತರಿದ್ದರು.