ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸ್ಥಳೀಯ ಮಾಧ್ಯಮ’ ರಾಜ್ಯಮಟ್ಟದ ಕಾರ್ಯಾಗಾರ

0

ಸ್ಥಳೀಯತೆಯನ್ನು ವ್ಯಾಪಕಗೊಳಿಸುವ ಪ್ರಯೋಗಶೀಲತೆ ಅಗತ್ಯ-ಡಾ.ಯು.ಪಿ.ಶಿವಾನಂದ

ಉಜಿರೆ: ಸ್ಥಳೀಯ ಮಟ್ಟದಿಂದ ಜಾಗತಿಕ ನೆಲೆಯಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆಗಳೊಂದಿಗಿನ ಮಾದರಿಯ ಆಧಾರದಲ್ಲಿ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಹೊಸ ಆಯಾಮಗಳನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಹೇಳಿದರು.


ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಪದವಿ ಅಧ್ಯಯನ ವಿಭಾಗಗಳು ಮೀಡಿಯಾ ಅಲ್ಯೂಮ್ಮಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಸಹಯೋಗದಲ್ಲಿ ನ.29ರಂದು ಉಜಿರೆ ಎಸ್‌ಡಿಎಂ ಕಾಲೇಜ್‌ನಲ್ಲಿ ಆಯೋಜಿಸಿದ್ದ ‘ಸ್ಥಳೀಯ ಮಾಧ್ಯಮ‌ ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ’ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದಲ್ಲಿ ನೆಲೆ ನಿಲ್ಲುವ ಮಾಧ್ಯಮ ಪ್ರಯತ್ನಗಳು ವಿಶಿಷ್ಟ ಪ್ರಯೋಗಗಳಾಗಿ ಗಮನ ಸೆಳೆದಿವೆ. ಮಹಾತ್ಮಾಗಾಂಧಿ ಅವರ ಪತ್ರಿಕಾ ಪ್ರಯೋಗಗಳು ಇಂಥ ಸಾಧ್ಯತೆಗಳೊಂದಿಗೆ ಗುರುತಿಸಿಕೊಂಡಿವೆ. ಸ್ಥಳೀಯ ಅಗತ್ಯಗಳನ್ನು ದೃಷ್ಠಿಯಲ್ಲಿರಿಸಿಕೊಂಡು ರೂಪಿತವಾಗುವ ಮಾಧ್ಯಮಗಳ ಸ್ವರೂಪ ಕ್ರಮೇಣ ತನ್ನ ಪ್ರಭಾವ ವ್ಯಾಪ್ತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ಅಗಾಧತೆಯನ್ನು ಹೊಂದಿರುತ್ತದೆ. ಈ ಮಾದರಿಯನ್ನು ಅನ್ವಯಿಸಿಕೊಂಡಾಗ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆದರೆ, ಈ ಯಶಸ್ಸು ವಿಶ್ವಾಸಾರ್ಹತೆ ಮತ್ತು ನಿಖರತೆಯ ಅಡಿಪಾಯದೊಂದಿಗೆ ನಂಟನ್ನು ಹೊಂದಿರಬೇಕು ಎಂದು ಹೇಳಿದ ಡಾ.ಯು.ಪಿ.ಶಿವಾನಂದರವರು ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಗಳು ಸ್ಥಳೀಯ ಮಟ್ಟದ ವಿವರಗಳನ್ನು ಒಳಗೊಂಡಿರುತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುದ್ದಿ ವಿವರಗಳು ಮಾತ್ರ ಕಾಣಿಸಿಕೊಳ್ಳುವ ಟ್ರೆಂಡ್ ಇತ್ತು. ಇಂಥ ಸಂದರ್ಭದಲ್ಲಿ ಜಿಲ್ಲೆ, ತಾಲೂಕು ಮಟ್ಟದ ಪತ್ರಿಕೆಗಳು ಹುಟ್ಟಿಕೊಂಡವು. ಸ್ಥಳೀಯ ವಿವರಗಳನ್ನು ದಾಖಲಿಸುತ್ತಾ ರಾಜ್ಯ, ರಾಷ್ಟ್ರ ಮಟ್ಟಕ್ಕೆ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡವು. ಆಯಾ ಜಿಲ್ಲೆ, ತಾಲೂಕಿನವರು ರಾಜ್ಯ, ರಾಷ್ಟ್ರ, ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ತಮ್ಮೂರಿನ ಪತ್ರಿಕೆಗಳನ್ನು ಓದುವ ಕುತೂಹಲವಿರಿಸಿಕೊಂಡಿದ್ದರಿಂದ ಅವುಗಳ ಪ್ರಭಾವ ವಿಸ್ತಾರವಾಯಿತು ಎಂದು ತಿಳಿಸಿದರು. ಮಾಧ್ಯಮಗಳ ವಿಶ್ವಾಸಾರ್ಹತೆಯು ನಿಖರತೆ ಮತ್ತು ಪಾರದರ್ಶಕತೆಯನ್ನೇ ಆಧರಿಸಿಕೊಂಡಿರುತ್ತದೆ. ವಿಶ್ವಾಸಾರ್ಹತೆ ಇಲ್ಲದೇ ಮಾಧ್ಯಮಗಳು ನಿರ್ವಹಿಸಲ್ಪಡಬಹುದು. ಆದರೆ ಅವುಗಳು ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಡಾ. ಶಿವಾನಂದರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳ‌ ಗಂಗೋತ್ರಿಯ ಗೌರವಾಧ್ಯಕ್ಷ ವೇಣು ಶರ್ಮ, ಕಾರ್ಯಾಗಾರದ ಸಂಚಾಲಕಿ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಎ.ಜೆ. ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ|ಭಾಸ್ಕರ್ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಇನ್ಯೀಯೇಟಿವ್ ಮುಖ್ಯಸ್ಥ ಶರತ್ ಹೆಗ್ಡೆ ವಂದಿಸಿದರು. ಶಿವುಕುಮಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here