ಕ್ಲೇರಿ ವೇಗಸ್ ಅವರು ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಜನರ ಪ್ರೀತಿ ಗಳಿಸಿದವರು – ಸಂಜೀವ ಮಠಂದೂರು
ಉಪ್ಪಿನಂಗಡಿ: ಸಹಕಾರಿ ಕ್ಷೇತ್ರದಲ್ಲಿ ಆಡಳಿತ ವರ್ಗ ಮತ್ತು ನೌಕರರು ಜೋಡೆತ್ತಿನ ಹಾಗೆ ಒಬ್ಬರನ್ನು ಒಬ್ಬರು ಅರಿತುಕೊಂಡು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ನೌಕರರಿಗೆ ಬರೇ ಟೆನ್ಷನ್ ಮಾತ್ರವಿದ್ದು, ಪೆನ್ಷನ್ ಸಿಗುವುದಿಲ್ಲ. ಇದನ್ನೆಲ್ಲಾ ಸರಿದೂಗಿಸಿಕೊಂಡು, ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಮಹಿಳೆಯೋರ್ವಳು ದಾಖಲೆಯ ವ್ಯವಹಾರವುಳ್ಳ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ತೋರಿಸಿಕೊಟ್ಟವರು ಶ್ರೀಮತಿ ಕ್ಲೇರಿ ವೇಗಸ್ ಅವರು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಶ್ರೀಮತಿ ಕ್ಲೇರಿ ವೇಗಸ್ ಅವರಿಗೆ ನ.೩೦ರಂದು ಸಂಘದ ವತಿಯಿಂದ ಸಂಘದ ಸಂಗಮ ಸಭಾ ಭವನದಲ್ಲಿ ನಡೆದ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ವೃತ್ತಿ ತಾತ್ಕಾಲಿಕವಾಗಿರುವಂತದ್ದು. ಆದರೆ ಆ ಸಮಯದಲ್ಲಿ ಆತ ಎಷ್ಟು ಜನರ ಪ್ರೀತಿ ಸಂಪಾದಿಸಿದ್ದಾರೆ ಎನ್ನುವುದು ಮುಖ್ಯವಾಗಿದೆ. ೩೭ ವರ್ಷಗಳ ಕಾಲ ಸಂಘದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕ್ಲೇರಿ ವೇಗಸ್ ಅವರು ಎಲ್ಲರ ಪ್ರೀತಿ- ವಿಶ್ವಾಸವನ್ನು ಗಳಿಸಿದ್ದಾರೆ. ಅದು ಶಾಶ್ವತವಾಗಿರುವಂತದ್ದಾಗಿದ್ದು, ಸ್ಥಿತ ಪ್ರಜ್ಞೆಯುಳ್ಳವರಾಗಿದ್ದ ಇವರು ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಲು ಬೇಕಾದ ಅರ್ಹತೆ, ಯೋಗ್ಯತೆ ಉಳ್ಳವರಾಗಿದ್ದರು. ಆದ್ದರಿಂದ ಶಿಸ್ತು ಬದ್ಧವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ ರಾವ್ ಮಾತನಾಡಿ, ನಾನು ಕಂಡಾಗೆ ಶ್ರೀಮತಿ ಕ್ಲೇರಿ ವೇಗಸ್ ಅವರು ಸೌಮ್ಯ ಸ್ವಭಾವದವರಾಗಿದ್ದು, ಸದಾ ನಗು ಮುಖದಿಂದ ಇರುತ್ತಿದ್ದರು. ಇದರೊಂದಿಗೆ ಸಮಯ ಪ್ರಜ್ಞೆಯನ್ನೂ ಮೈಗೂಡಿಸಿಕೊಂಡಿದ್ದರು ಎಂದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ ಕೆ. ವೆಂಕಟ್ರಮಣ ಭಟ್ ಪೆಲಪ್ಪಾರು ಮಾತನಾಡಿ, ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಎಲ್ಲರ ಪಾತ್ರ ಅತೀ ಮುಖ್ಯ. ಅದರಲ್ಲೂ ಆಡಳಿತ ಮಂಡಳಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಿಬ್ಬಂದಿಯ ಪಾತ್ರ ಅತೀ ಮುಖ್ಯ. ಶ್ರೀಮತಿ ಕ್ಲೇರಿ ವೇಗಸ್ ಅವರು ನಮ್ಮ ಸಹಕಾರಿ ಸಂಘವು ಕಂಪ್ಯೂಟರೀಕರಣಗೊಳ್ಳುವ ಸಮಯದಲ್ಲಿ ಸಮಯದ ಪರಿವೆಯೇ ಇಲ್ಲದೆ ದುಡಿದವರು. ಹಲವು ಹೊಸತನಗಳನ್ನು ಕಾರ್ಯರೂಪಕ್ಕೆ ತಂದಿರುವ ಇವರು ಮಾತಿನಿಂದಲ್ಲ. ಕೆಲಸದಿಂದ ಗುರುತಿಸಿಕೊಂಡಿದ್ದಾರೆ ಎಂದರು.
ಸಾಹಿತಿ ಡಾ. ವಸಂತಕುಮಾರ್ ತಾಳ್ತಜೆ ಮಾತನಾಡಿ, ಉತ್ತಮವಾಗಿ ವ್ಯವಹರಿಸುವ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಶ್ರೀಮತಿ ಕ್ಲೇರಿ ವೇಗಸ್ ಅವರು ಬೆಳೆಸಿಕೊಂಡಿದ್ದು, ಸಂಘದೊಂದಿಗೆ ಅವರ ಬಾಂಧವ್ಯ ನಿವೃತ್ತಿಯ ಬಳಿಕವೂ ಇರಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಅವರು ಮಾತನಾಡಿ, ಶ್ರೀಮತಿ ಕ್ಲೇರಿವೇಗಸ್ ಅವರು ಉತ್ತಮವಾಗಿ ಆರ್ಥಿಕ ನಿರ್ವಹಣೆ ಮಾಡಿದವರು. ಆಡಳಿತ ಮಂಡಳಿಯ ಎಲ್ಲಾ ಕಾರ್ಯಗಳಿಗೆ ಉತ್ತಮವಾಗಿ ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭ ಶ್ರೀಮತಿ ಕ್ಲೇರಿ ವೇಗಸ್ ಹಾಗೂ ಅವರ ಪತಿ ಮೈಕಲ್ ರೊನಾಲ್ಡ್ ಡೇಸಾರನ್ನು ಸಂಘದ ವತಿಯಿಂದ ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಕ್ಲೇರಿ ವೇಗಸ್ ಅವರು ತನ್ನ ವೃತ್ತಿ ಬದುಕನ್ನು ಮೆಲುಕು ಹಾಕಿದರಲ್ಲದೆ, ತನಗೆ ಸಹಕಾರ ನೀಡಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ದ.ಕ. ಸಹಕಾರಿ ಯೂನಿಯನ್ನ ನಿರ್ದೇಶಕಿ ಸಾವಿತ್ರಿ ರೈ ಉಪಸ್ಥಿತರಿದ್ದರು. ಶ್ರೀಮತಿ ಕ್ಲೇರಿ ವೇಗಸ್ ಪರ ಸಿಬ್ಬಂದಿಗಳ ಪರವಾಗಿ ಪುಷ್ಪರಾಜ್ ಶೆಟ್ಟಿ ಹಾಗೂ ಚಂದ್ರಶೇಖರ ಡಿ.ಎಸ್. ಅವರು ಅನಿಸಿಕೆ ಹಂಚಿಕೊಂಡರು. ನಿರ್ದೇಶಕಿ ಶ್ಯಾಮಲಾ ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಪುತ್ತೂರು ಉಪವಿಭಾಗದ ಸಿಡಿಓ ಶ್ರೀಮತಿ ಶೋಭಾ, ಮಂಗಳೂರು ಕಚೇರಿಯ ಸೂಪರಿಡೆಂಟ್ ನಾಗೇಂದ್ರ ಬಿ., ಸಂಘದ ನಿರ್ದೇಶಕರಾದ ಜಗದೀಶ್ ರಾವ್ ಮಣಿಕ್ಕಳ, ಯಶವಂತ ಗೌಡ ಜಿ., ಕುಂಞ ಎನ್., ಯತೀಶ್ ಶೆಟ್ಟಿ ಸುವ್ಯ, ದಯಾನಂದ ಸರೋಳಿ, ಸಚಿನ್ ಎಂ., ರಾಜೇಶ್ ಶಾಂತಿನಗರ, ರಾಮ ನಾಯ್ಕ, ಶ್ರೀಮತಿ ಸುಜಾತ ರೈ ಎ., ಪ್ರಮುಖರಾದ ಸದಾನಂದ ಶೆಟ್ಟಿ ಅಡೆಕ್ಕಲ್, ರೂಪೇಶ್ ರೈ ಅಲಿಮಾರ್, ಚಂದ್ರಶೇಖರ ತಾಳ್ತಾಜೆ, ಎಂ. ಗೋಪಾಲಕೃಷ್ಣ ಭಟ್, ಹರಿರಾಮಚಂದ್ರ, ಶೇಖರ ಗೌಂಡತ್ತಿಗೆ, ಇಸುಬು ಇಳಂತಿಲ, ವಿಶ್ವನಾಥ ಗೌಡ ಪಿಜಕ್ಕಳ, ಅನಿ ಮಿನೇಜಸ್, ಅಝೀಝ್ ಬಸ್ತಿಕ್ಕಾರ್, ಎಂ. ಜಯರಾಮ ಶೆಟ್ಟಿ, ಗೋಪಾಲ ಹೆಗ್ಡೆ, ರಾಜಗೋಪಾಲ ಭಟ್ ಕೈಲಾರು, ಜತ್ತಪ್ಪ ಗೌಡ ರಂಗಾಜೆ, ರಾಮಚಂದ್ರ ಮಣಿಯಾಣಿ, ವಸಂತ ಗೌಡ ಪಿಜಕ್ಕಳ, ಜೆರಾಲ್ಡ್ ಮಸ್ಕರ್ಹೇನಸ್, ದೇವಿದಾಸ ರೈ ಬೆಳ್ಳಿಪ್ಪಾಡಿ ಮತ್ತಿತರರಿದ್ದರು.
ಸಂಘದ ನೂತನ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಸ್ವಾಗತಿಸಿದರು. ಸಿಬ್ಬಂದಿ ರವೀಶ್ ಎಚ್.ಟಿ. ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಸಿಬ್ಬಂದಿ ಶಶಿಧರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.