ಬೆಟ್ಟಂಪಾಡಿ ಕಾಲೇಜಿನಲ್ಲಿ ಪೋಷ್ ಹಾಗೂ ಪೋಕ್ಸೋ ಕಾಯ್ದೆಯ ಕುರಿತಾದ ಮಾಹಿತಿ ಕಾರ್ಯಗಾರ

0

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಲಿಂಗ ಸಮಾನತಾ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದಲ್ಲಿ ಪೋಷ್ ಮತ್ತು ಪೋಕ್ಸೋ ಕಾಯ್ದೆ ಕುರಿತಾದ ಮಾಹಿತಿ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಸಲುವಾಗಿ ಜಾರಿಗೊಳಿಸಿದ ಲೈಂಗಿಕ ಕಿರುಕುಳ ವಿರೋಧಿ ಕಾನೂನು ಕಾಯ್ದೆ 2013 ಪ್ರಭಾವಶಾಲಿಯಾಗಿ ಕಾರ್ಯವೆಸಗುತ್ತಿದೆ. ಉದ್ಯೋಗಿಗಳ ಸರ್ವ ವಿಧದ ಸಂರಕ್ಷಣೆ ಮಾಲೀಕನ ಜವಾಬ್ದಾರಿಯಾಗಿರುತ್ತದೆ. ಈ ಕಾಯ್ದೆ ಅಡಿಯಲ್ಲಿ ಕಾನೂನಿನ ಉಪಯೋಗವನ್ನು ಹೇಗೆ ಪಡೆಯಬಹುದು, ದೂರುಗಳನ್ನು ಸಲ್ಲಿಸಲು ಇರುವ ಹಂತಗಳೇನು, ವಿಚಾರಣೆಯ ಕ್ರಮ ಹಾಗೂ ಪರಿಹಾರ ವಿಧಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪುತ್ತೂರಿನ ಪ್ರಸಿದ್ಧ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ರವರು ಪೋಕ್ಸೋ ಕಾಯ್ದೆಯ ಕುರಿತಾಗಿ ಮಾಹಿತಿ ನೀಡಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲಿರುವ ಕಾನೂನುಗಳ ಬಗ್ಗೆ ವಿವರಿಸಿದರು. ಪ್ರತಿಯೊಬ್ಬನಿಗೂ ಕಾನೂನುಗಳ ಬಗ್ಗೆ ಅರಿವಿರಬೇಕು ಸಾಮಾಜಿಕ ಜಾಲತಾಣಗಳನ್ನು ಜಾಗೃತವಾಗಿ ಬಳಸಬೇಕು. ಕಾನೂನುಗಳ ದುರುಪಯೋಗವಾಗಬಾರದು. ಸಂತ್ರಸ್ತರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು ಹಾಗಾಗಿ ತೊಂದರೆಗೊಳಗಾದರೆ ಸಂಬಂಧಪಟ್ಟವರಿಗೆ ತಿಳಿಸುವುದಕ್ಕೆ ಅಂಜಿಕೆ ಬೇಡ ಎಂದರು.


ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ್ ಎಸ್ ಮಾತನಾಡಿ ಪಠ್ಯೇತರ ವಿಷಯವಾಗಿ ಎಲ್ಲಾ ವಿಭಾಗಗಳಲ್ಲೂ ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ತಿಳಿದಿರಬೇಕು. ಅಗತ್ಯ ಸಂದರ್ಭಗಳಲ್ಲಿ ಯಾವ ವಿಧದ ಕಾನೂನಿನ ಮೊರೆ ಹೋಗಬೇಕೆಂಬ ಜ್ಞಾನವಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ ದೇಶದಲ್ಲಿ ಕಾನೂನು ಎಷ್ಟು ಬಲಿಷ್ಠವಾಗಿದೆ, ತೊಂದರೆಗಳಾದವರಿಗೆ ಪರಿಹಾರ ಸೂಚಿಸುವಲ್ಲಿ ಕಾನೂನು ಕೈಗೊಳ್ಳುತ್ತಿರುವ ಕ್ರಮಗಳು ಮೊದಲಾದ ಉಪಯುಕ್ತ ಮಾಹಿತಿಗಳ ಕುರಿತಾಗಿ ಅರಿತುಕೊಳ್ಳುವಂತೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಜುಳಾ ದೇವಿ ಸ್ವಾಗತಿಸಿ, ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಯೋಗೀಶ್ ಎಲ್. ಏನ್ ವಂದಿಸಿ, ಎನ್ಎಸ್ಎಸ್ ನ ಘಟಕ ನಾಯಕಿ ಕೃತಿಕಾ.ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here