ಕಡಬ: ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯ ಆಪಾದನೆಯ ಮೇಲೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ 18 ಮಂದಿಯ ಉಚ್ಛಾಟನಾ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ರದ್ದುಗೊಳಿಸಿ ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ನಂದಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ.ಜಿ. ಅವರ ಬಣಗಳ ನಡುವೆ ಉಂಟಾದ ಗೊಂದಲ, ಬಣ ರಾಜಕೀಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಉಷಾ ಅಂಚನ್, ಆಶಾಲಕ್ಷ್ಮಣ್ ಗುಂಡ್ಯ ಪ್ರವೀಣ್ ಕುಮಾರ್ ಕೆಡೆಂಜಿ, ರವಿ ರುದ್ರಪಾದ, ಶೋಭಿತ್ ಸುಬ್ರಹ್ಮಣ್ಯ, ಕ್ಷೇವಿಯರ್ ಬೇಬಿ, ಸುಧೀರ್ ದೇವಾಡಿಗ, ಮಹೇಶ್ ಕರಿಕ್ಕಳ, ಸಚಿನ್ರಾಜ್ ಶೆಟ್ಟಿ, ಭವಾನಿಶಂಕರ್, ಗೋಕುಲ್ದಾಸ್, ರಾಮಕೃಷ್ಣ ಕೆಂಜಾಳ, ಚೇತನ್ ಕಜೆಗದ್ದೆ, ಶಶಿಧರ ಬೊಟ್ಟಡ್ಕ, ಜೈನುದ್ದೀನ್ ಆತೂರು, ಆನಂದ ಬೆಳ್ಳಾರೆ, ಫಝಲ್ ಕಡಬ, ಮೊದಲಾದವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟಿಸಿರುವುದಲ್ಲದೆ ನಂದಕುಮಾರ್ ಬಣದಲ್ಲಿದ್ದ ಇನ್ನೂ ಹಲವು ಕಾಂಗ್ರೆಸ್ ಮುಖಂಡರಿಗೆ ಕಾರಣ ಕೇಳಿ ನೋಟೀಸು ನೀಡಲಾಗಿತ್ತು. ಈ ಬೆಳವಣಿಗೆಯ ಬಳಿಕ ಪಕ್ಷದಲ್ಲಿ ಗೊಂದಲಮಯ ವಾತಾವರಣ ಉಂಟಾಗಿ ಮಾತಿನ ಚಕಮಕಿ, ಹಲ್ಲೆ ಯತ್ನಗಳು ನಡೆದಿತ್ತು. ಈ ಎಲ್ಲಾ ಮನಸ್ತಾಪವನ್ನು ತಣ್ಣಗಾಗಿಸಲು ಪ್ರಯತ್ನ ಪಟ್ಟ ಕಡಬ ಬ್ಲಾಕ್ ಉಸ್ತುವಾರಿ ಮಮತಾ ಗಟ್ಟಿಯವರು ಎರಡು ತಿಂಗಳ ಹಿಂದೆ ಸಭೆ ನಡೆಸಿ ಉಚ್ಚಾಟಿತರ ಮೇಲಿನ ಆಪಾದನೆಯ ಬಗ್ಗೆ ಪರಿಶೀಲನೆ ನಡೆಸಿ ಕೆಪಿಸಿಸಿಗೆ ವರದಿ ನೀಡಿದ್ದರು, ಈ ವರದಿಯ ಆಧಾರದಲ್ಲಿ ಉಚ್ಚಾಟನೆಯ ಕೆಪಿಸಿಸಿ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ವೆಂಕಪ್ಪ ಗೌಡರವರ ಮೇಲಿದ್ದ ಪಕ್ಷವಿರೋಽ ಚಟುವಟಿಕೆಯ ಆರೋಪವನ್ನು ಕೈಬಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ರವರಿಗೆ ಆದೇಶದ ಪ್ರತಿ ಕಳುಹಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಯೋಗದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ ಮತ್ತಿತರ ಪ್ರಮುಖರು ಇದ್ದರು.