ಅಧ್ಯಕ್ಷ:ಎಲ್ಯಾಸ್ ಪಿಂಟೋ,ಕಾರ್ಯದರ್ಶಿ:ರುಡೋಲ್ಫ್ ಪಿಂಟೋ,ಕೋಶಾಧಿಕಾರಿ:ರೋಯ್‌ಸ್ಟನ್ ಡಾಯಸ್
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಗೊಳಪಟ್ಟ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಆತ್ಮೀಕ ನಿರ್ದೇಶಕ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರ ಮಾರ್ಗದರ್ಶನದಲ್ಲಿ ದ.3 ರಂದು ಸೈಂಟ್ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಕೊಂಬೆಟ್ಟು ನಿವಾಸಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಕಾರ್ಯದರ್ಶಿಯಾಗಿ ದರ್ಬೆ ನಿವಾಸಿ ರುಡೋಲ್ಫ್ ಪಿಂಟೋ, ಕೋಶಾಧಿಕಾರಿಯಾಗಿ ಎಪಿಎಂಸಿ ರಸ್ತೆ ನಿವಾಸಿ ರೋಯ್‌ಸ್ಟನ್ ಡಾಯಸ್‌ರವರು ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ದರ್ಬೆ ನಿವಾಸಿ, ಸೋಜಾ ಮೆಟಲ್ ಮಾರ್ಟ್ ಮಾಲಕ ದೀಪಕ್ ಮಿನೇಜಸ್, ಜೊತೆ ಕಾರ್ಯದರ್ಶಿಯಾಗಿ ಆಂಬ್ರೋಸ್ ಡಿ’ಸೋಜ ಬಲ್ನಾಡು , ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೆಂಕಿಲ ನಿವಾಸಿ ಹಾಗೂ ಕುಡಿಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಲಿತುರ್ಜಿ(ಆಧ್ಯಾತ್ಮಿಕ) ಕಾರ್ಯದರ್ಶಿಯಾಗಿ ಸಾಮೆತ್ತಡ್ಕ ನಿವಾಸಿ ರಿಚರ್ಡ್ ಮಸ್ಕರೇನ್ಹಸ್, ಧಾರ್ಮಿಕ ಸ್ಟಾಲ್ ಇನ್‌ಚಾರ್ಜ್ ಆಗಿ ಸೈಮನ್ ಡಿ’ಸೋಜ ಬಲ್ನಾಡು ಹಾಗೂ ಡೆನ್ನಿಸ್ ಸೆರಾವೋ ಸಾಮೆತ್ತಡ್ಕ, ಎಸ್ಕೋ ಸದಸ್ಯರಾಗಿ ಜೇಸನ್ ವರ್ಗೀಸ್ ದರ್ಬೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷ ಮಾರ್ಟಿನ್ ಡಿ’ಸೋಜ ಕೂರ್ನಡ್ಕರವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್‌ರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದು ಮಾತ್ರವಲ್ಲ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದರು
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಲ್ಯಾಸ್ ಪಿಂಟೋರವರು ಈ ಹಿಂದೆಯೂ ಎರಡು ಬಾರಿ ಸಿಎಲ್‌ಸಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸುವ ಅನುಭವ ಹೊಂದಿರುತ್ತಾರೆ. ಎಲ್ಯಾಸ್ ಪಿಂಟೋರವರ ಮುಂದಾಳತ್ವದಲ್ಲಿ ಫಿಲೋಮಿನಾ ಕಾಲೇಜ್ ಕಬಡ್ಡಿ ತಂಡವು ರಾಜ್ಯಮಟ್ಟದ ಚಾಂಪಿಯನ್ ಆಗಿಯೂ, ಸತತ ಹತ್ತು ವರ್ಷ ವೈಟ್‌ಲಿಪ್ಟಿಂಗ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಮಟ್ಟದಲ್ಲಿ ಫಿಲೋಮಿನಾ ಕಾಲೇಜು ದಾಖಲೆಯನ್ನು ಮಾಡಿರುತ್ತದೆ. ಆರೇಳು ಬಾರಿ ಪುರುಷರ ಕಬಡ್ಡಿಯಲ್ಲಿ, ಮೂರ‍್ನಾಲ್ಕು ಬಾರಿ ಅತ್ಲೆಟಿಕ್ಸ್‌ನಲ್ಲಿ ಚಾಂಪಿಯನ್, ಪದವಿ ಪೂರ್ವ ಕಾಲೇಜ್ ಹಂತದಲ್ಲಿ ಕಬಡ್ಡಿ ತಂಡವು ರಾಜ್ಯಮಟ್ಟದ ಚಾಂಪಿಯನ್ ಆಗಿಯೂ ಮೂಡಿ ಬಂದಿರುತ್ತದೆ. ರೋಟರಿ ಕ್ಲಬ್ ಪುತ್ತೂರು ಯುವದ ಸದಸ್ಯರಾಗಿರುವ ಎಲ್ಯಾಸ್ ಪಿಂಟೋರವರು ಮಡಂತ್ಯಾರು ಕಾಲೇಜ್‌ನಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಬಾರಿಗೆ ಮಡಂತ್ಯಾರು ಕಬಡ್ಡಿ ತಂಡ ವಿನ್ನರ‍್ಸ್ ಆಗಿ ಮೆರೆದಿರುವುದು ಇತಿಹಾಸ. ಕರ್ನಾಟಕದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಎನಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಶನ್(ಕೆಎಸ್‌ಸಿಎ) ಇದರ ಪುತ್ತೂರು ಯೂನಿಯನ್ ಕ್ರಿಕೆಟ್ ಕ್ಲಬ್‌ನ ಅಧಿಕೃತ ತರಬೇತುದಾರರಾಗಿ ನೂರಾರು ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ನೀಡಿರುತ್ತಾರೆ. ಪಿಂಟೋ ಬ್ರದರ್ಸ್ ಎಂಬ ನೃತ್ಯ ತಂಡದ ರುವಾರಿ ಜೊತೆಗೆ ಉತ್ತಮ ಕ್ರೀಡಾಪಟು ಆಗಿರುವ ಎಲ್ಯಾಸ್ ಪಿಂಟೋರವರು ತನ್ನ ಪುತ್ರಿ ಏಂಜಲಿಕಾ ಮೆಲಾನಿ, ಪುತ್ರ ಕ್ರಿಸ್‌ರವರು ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ರಾಜ್ಯ ಮಟ್ಟದ ಆಟಗಾರರಾಗಿ ಗಮನ ಸೆಳೆದಿದ್ದಾರೆ. ಅಂತರ್ರಾಷ್ಟ್ರೀಯ ಕಬಡ್ಡಿಪಟು ರೋಸ್‌ಮೇರಿ ಪ್ರೆಸಿಲ್ಲಾ, ಪ್ರೊ ಕಬಡ್ಡಿ ಪ್ರಶಾಂತ್ ರೈ, ಡೆಕಾತ್ಲಾನ್‌ನಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ರಾಮಚಂದ್ರ ಪಾಟ್ಕರ್, ಜಾವೆಲಿನ್‌ನಲ್ಲಿ ಹರೀಶ್ ಕೆ.ವಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟ ಅಲ್ಲದೆ ಸುಮಾರು ೨೦೦ಕ್ಕೂ ಮಿಕ್ಕಿ ಫಿಲೋಮಿನಾ ಹಾಗೂ ಮಡಂತ್ಯಾರು ಕಾಲೇಜ್‌ನ ಕ್ರೀಡಾಪಟುಗಳು ಎಲ್ಯಾಸ್‌ರವರ ಗರಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ.
ಕಾರ್ಯದರ್ಶಿ/ಕೋಶಾಧಿಕಾರಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ರುಡೋಲ್ಫ್ ಪಿಂಟೋರವರು ಸಂಘದ ಅಧ್ಯಕ್ಷರಾಗಿ ಹಾಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿರುತ್ತಾರೆ. ಕೋಶಾಧಿಕಾರಿಯಾಗಿ ಆಯ್ಕೆಯಾದ ರೋಯ್‌ಸ್ಟನ್ ಡಾಯಸ್‌ರವರು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್ ಮಾಲಕರಾಗಿ, ಕ್ರಿಸ್ಟೋಫರ್ ಅರ್ಥ್‌ಮೂವರ‍್ಸ್ ಮತ್ತು ಸರ್ವಿಸ್ ಸ್ಟೇಷನ್ ಅನ್ನು ಮುನ್ನೆಡೆಸುತ್ತಿದ್ದಾರೆ.